ಬಿಗ್ಬಾಸ್ ಮನೆಯಿಂದ ಈ ವಾರ ಹೊರಹೋಗಿದ್ದು ಯಾರು?
Bigg Boss Kannada: ಫಿನಾಲೆ ಹತ್ತಿರ ಬಂದಂತೆ ಗಟ್ಟಿ ಕಾಳುಗಳೇ ಮನೆಯಿಂದ ಹೊರಗೆ ಬರುತ್ತಿವೆ. ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಈ ವಾರ ಮನೆಯಿಂದ ಹೊರಗೆ ಬಂದಿದ್ದು ಯಾರು?
ಬಿಗ್ಬಾಸ್ (BiggBoss) ಮನೆಯ ಸದಸ್ಯರು ಕಡಿಮೆ ಆಗುತ್ತಲೇ ಬರುತ್ತಿದ್ದಾರೆ. ಪ್ರತಿ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುವುದು ಸಹಜ, ಆದರೆ ಫಿನಾಲೆಗೆ ಹತ್ತಿರ ಬಂದಾಗ ಮನೆಯ ಗಟ್ಟಿ ಸದಸ್ಯರೇ ಹೊರಗೆ ಹೋಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತೆಯೇ ಈ ವಾರವೂ ಸಹ ಮನೆಯ ಗಟ್ಟಿ ಸ್ಪರ್ಧಿಯೊಬ್ಬರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಸುದೀಪ್, ಥ್ಯಾಂಕ್ಸ್ ಹೇಳಿ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದಿದ್ದಾರೆ.
ಈ ವಾರ ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರುಗಳು ನಾಮಿನೇಟ್ ಆಗಿದ್ದರು. ಈ ವಾರ ಬರೀ ಪುರುಷರಷ್ಟೆ ನಾಮಿನೇಟ್ ಆಗಿದ್ದು ವಿಶೇಷವಾಗಿತ್ತು. ಡ್ರೋನ್ ಪ್ರತಾಪ್, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್ ಅವರುಗಳು ಮೊದಲಿಗೆ ಸೇವ್ ಆದರು. ತುಕಾಲಿ ಅವರನ್ನು ಸೇವ್ ಮಾಡಿದಾಗ, ವಾರದ ಮಧ್ಯದಲ್ಲಿ ಮನೆಯ ಹೆಣ್ಣು ಮಕ್ಕಳ ಬಗ್ಗೆ ಅವರು ಆಡಿದ್ದ ಮಾತಿನ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. ತುಕಾಲಿ, ಆ ತಮ್ಮ ಮಾತಿಗೆ ಕ್ಷಮೆ ಸಹ ಕೇಳಿದರು.
ಅದಾದ ಬಳಿಕ ಅಂತಿಮವಾಗಿ ಮೈಖಲ್ ಅಜಯ್ ಹಾಗೂ ತುಕಾಲಿ ಸಂತೋಷ್ ಉಳಿದರು. ಇಬ್ಬರಲ್ಲಿ ಈ ವಾರದ ಜರ್ನಿ ಅಂತ್ಯವಾಗಿದ್ದು ಮೈಖಲ್ ಅಜಯ್ಗೆ. ಈ ಹಿಂದೆಯೂ ಮೈಖಲ್ ಅಜಯ್ ಹಲವು ಬಾರಿ ಅಂತಿಮ ಸುತ್ತಿಗೆ ಬಂದು ಪಾರಾಗಿದ್ದರು. ಡಬಲ್ ಎಲಿಮಿನೇಷನ್ ಸಮಯದಲ್ಲಿ ಅವಿ ಜೊತೆ ಮೈಖಲ್ ಸಹ ಹೊರಗೆ ಹೋಗಿದ್ದರು. ಆದರೆ ಅದೃಷ್ಟವಶಾತ್ ಮತ್ತೆ ಒಳಗೆ ಬಂದರು. ಈ ವಾರ ಅವರೇ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದು ಬಹುತೇಕ ಖಾತ್ರಿಯೇ ಆಗಿತ್ತು. ಮನೆಯ ಎಲ್ಲ ಸ್ಪರ್ಧಿಗಳು ಈ ವಾರ ಮೈಖಲ್ ಅವರೇ ಹೊರಗೆ ಹೋಗಲಿದ್ದಾರೆ ಎಂದು ಸರಿಯಾಗಿಯೇ ಊಹಿಸಿದ್ದರು. ಅದರಂತೆಯೇ ಆಯ್ತು.
ಇದನ್ನೂ ಓದಿ:ಮಗನ ವೈರಿ ಸಂಗೀತಾಗೆ ಮೈಖಲ್ ತಾಯಿ ಕೊಟ್ಟರು ವಿಶೇಷ ಉಡುಗೊರೆ
ಮೈಖಲ್ ಅನ್ನು ಹೊರಗೆ ಕರೆಯುವಾಗ ಸಹ ಸುದೀಪ್, ಮೈಖಲ್ ಅನ್ನು ಮಣ್ಣಿನ ಮಗ, ಕನ್ನಡ ಪ್ರೇಮಿ, ಒಳ್ಳೆಯ ಟಾಸ್ಕ್ ಮಾಸ್ಟರ್ ಎಂದೇ ಕೊಂಡಾಡಿದರು. ಬಿಗ್ಬಾಸ್ ಮನೆಯಲ್ಲಿ ಬಿಂದಾಸ್ ಆಗಿದ್ದ, ಯಾವುದಕ್ಕೂ ಡೋಂಟ್ ಕೇರ್ ಆಟಿಟ್ಯೂಟ್ ತೋರಿಸುತ್ತಿದ್ದ ಮೈಖಲ್, ಮನೆಯಿಂದ ಹೊರಗೆ ಹೋಗಬೇಕಾದರೆ ಭಾವುಕರಾಗಿ ಅತ್ತು ಬಿಟ್ಟರು. ಮೈಖಲ್ ಅನ್ನು ವಿರೋಧಿಯಂತೆ ಕಂಡಿದ್ದ ಸಂಗೀತಾ ಸಹ ಕಣ್ಣಲ್ಲಿ ನೀರು ಹಾಕಿದರು. ತುಕಾಲಿ , ನಮ್ರತಾ ಸಹ ಅತ್ತರು. ಮನೆಯಿಂದ ಹೊರಗೆ ಹೋಗುವಾಗ ವಿನಯ್ಗೆ ವಿಶೇಷ ಅಧಿಕಾರವನ್ನು ಕೊಟ್ಟು ಹೋದರು ಮೈಖಲ್.
ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಮೈಖಲ್, ತಮಗೆ ಇದೊಂದು ಅದ್ಭುತವಾದ ಪಯಣವಾಗಿತ್ತು ಎಂದರು. ಈ ಬಾರಿ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಟಾಪ್ 3ರಲ್ಲಿ ಇರುತ್ತಾರೆ. ವಿನಯ್ ಈ ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ ಎಂದರು. ಮನೆಯಲ್ಲಿ ಆಡಿ ನಾನು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದೀನಿ ಎಂದು ನೋಡುವ ಆಸೆ ನನಗೆ ಇದೆ ಎಂಬ ಕುತೂಹಲ ವ್ಯಕ್ತಪಡಿಸಿದರು. ಬಿಗ್ಬಾಸ್ ಮನೆಯಲ್ಲಿ ಸಿಗರೇಟು ಬಿಟ್ಟು ಇದ್ದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ