ಭಯ ಜಾಸ್ತಿ ಆಗಿದೆ: ಜನರ ಪ್ರೀತಿ ನೋಡಿ ಬೆಚ್ಚಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆದ ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ತಾವು ಹೋದ ಕಡೆಗಳಲ್ಲೆಲ್ಲ ಜನರು ತೋರಿಸುತ್ತಿರುವ ಪ್ರೀತಿಯನ್ನು ಕಂಡು ಗಿಲ್ಲಿ ನಟ ಅವರು ಬೆರಗಾಗಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು ‘ಇದರಿಂದ ಭಯ, ಜವಾಬ್ದಾರಿ ಜಾಸ್ತಿ ಆಗಿದೆ’ ಎಂದು ಹೇಳಿದ್ದಾರೆ.

ಭಯ ಜಾಸ್ತಿ ಆಗಿದೆ: ಜನರ ಪ್ರೀತಿ ನೋಡಿ ಬೆಚ್ಚಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
Gilli Nata
Edited By:

Updated on: Jan 19, 2026 | 6:02 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಗಿಲ್ಲಿ ನಟ ಅವರು ಹುಟ್ಟೂರಿಗೆ ಮರಳಿದ್ದಾರೆ. ಅವರ ಸ್ವಾಗತಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಅದರಿಂದಾಗಿ ರಸ್ತೆಗಳು ಜಾಮ್ ಆಗಿವೆ. ಅಷ್ಟರಮಟ್ಟಿಗೆ ಕ್ರೇಜ್ ಹೆಚ್ಚಿದೆ. ಈ ವೇಳೆ ಕಿಕ್ಕಿರಿದು ಸೇರಿದ ಜನರ ನಡುವೆ ಟಿವಿ9 ಜೊತೆ ಗಿಲ್ಲಿ ನಟ (Gilli Nata) ಅವರು ಮಾತನಾಡಿದ್ದಾರೆ. ಹುಟ್ಟೂರಿನಲ್ಲಿ ತಮಗೆ ಸಿಗುತ್ತಿರುವ ಪ್ರೀತಿಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದು. ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೆ. ಸರ್ಕಾರಿ ಬಸ್​ನಲ್ಲಿ ಪಾಸ್ ತೋರಿಸಿ ಓಡಾಡುತ್ತಿದ್ದೆ. ನಾನು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಈಗ ಇದೇ ರಸ್ತೆಯಲ್ಲಿ ಕಪ್ ಹಿಡಿದುಕೊಂಡು, ಕಾರಿನಲ್ಲಿ ಬರುತ್ತೇನೆ ಅಂತ ಊಹಿಸಿರಲಿಲ್ಲ. ನಮ್ಮೂರಿಗೆ ನಾವು ವಾಪಸ್ ಬಂದಾಗ ಸಿಕ್ಕಾಪಟ್ಟೆ ಖುಷಿ ಆಗುತ್ತದೆ’ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

‘ಜನರ ಪ್ರೀತಿ ಜಾಸ್ತಿ ಆಗುತ್ತಿದೆ. ಅದರಿಂದ ಜವಾಬ್ದಾರಿ ಮತ್ತು ಭಯ ಕೂಡ ಹೆಚ್ಚಾಗುತ್ತಿದೆ. ಖುಷಿಗಿಂತಲೂ ಭಯ ಜಾಸ್ತಿ ಆಗಿದೆ. ಎಲ್ಲಾದರೂ ಎಡವಿಬಿಟ್ಟರೆ ಏನು ಮಾಡೋದು? ಇಷ್ಟು ಜನರ ಪ್ರೀತಿ ಸಂಪಾದಿಸಿದ ಮೇಲೆ ಆ ಭಯ ಯಾವಾಗಲೂ ಇರುತ್ತದೆ’ ಎಂದಿದ್ದಾರೆ ಗಿಲ್ಲಿ ನಟ. ಅವರು ಹೋದ ಕಡೆಗಳಲ್ಲೆಲ್ಲ ಜನರು ಕಿಕ್ಕಿರಿದು ಸೇರುತ್ತಿದ್ದಾರೆ.

ಅಂಬರೀಷ್ ಅವರ ಹುಟ್ಟೂರಾದ ದೊಡ್ಡಅರಸಿನ ಕೆರೆ ಗೇಟ್ ಬಳಿ ಗಿಲ್ಲಿ ಬಂದಾಗ ಅಂಬರೀಷ್ ಫ್ಯಾನ್ಸ್ ಮೆಚ್ಚಿಕೊಂಡು ಮಾತನಾಡಿದರು. ಆ ಬಗ್ಗೆ ಗಿಲ್ಲಿ ನಟ ಪ್ರತಿಕ್ರಿಯೆ ನೀಡಿದ್ದಾರೆ. ‘ಅಂಬರೀಷಣ್ಣನವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರಿಗೆ ನಮ್ಮನ್ನು ಹೋಲಿಸಿಕೊಳ್ಳಲು ಆಗಲ್ಲ. ಅವರ ಊರಿನ ಪಕ್ಕ ನಮ್ಮ ಊರು ಇರುವುದು ನಮ್ಮ ಅದೃಷ್ಟ’ ಎಂದಿದ್ದಾರೆ ಗಿಲ್ಲಿ ನಟ.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಮದ್ದೂರು ಫ್ಯಾನ್ಸ್

ಗಿಲ್ಲಿ ನಟ ಅವರು ಈ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಜಗ್ಗೇಶ್ ಈ ಮೊದಲೇ ಊಹಿಸಿದ್ದರು. ಒಂದು ವರ್ಷ ಕಳೆಯುವುದರಲ್ಲಿ 4 ಜನ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾನೆ ಎಂದು ಅವರು ಭವಿಷ್ಯ ನುಡಿದಿದ್ದರು. ಆ ಮಾತು ನಿಜವಾಗಿದೆ. ಈಗ ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಅವರು ತೆರಳಿದ್ದಾರೆ. ‘ಜಗ್ಗೇಶ್ ಅವರ ಆಶೀರ್ವಾದದಿಂದ ಈ ರೀತಿ ಆಗಿದೆ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.