ಗಿಲ್ಲಿ ನಟ ವಿನ್ನರ್: ಅಶ್ವಿನಿ ಗೌಡ ಮೊದಲ ಪ್ರತಿಕ್ರಿಯೆ; ನಿರಾಸೆ ವ್ಯಕ್ತಪಡಿಸಿದ ಛಲಗಾರ್ತಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಮುಕ್ತಾಯ ಆಗಿದೆ. ಅಶ್ವಿನಿ ಗೌಡ ಅವರು 2ನೇ ರನ್ನರ್ ಅಪ್ ಆಗಿದ್ದಾರೆ. ಫಿನಾಲೆಯಲ್ಲಿ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಅಶ್ವಿನಿ ಅವರಿಗೆ ನಿರಾಸೆ ಆಗಿದೆ. ಗಿಲ್ಲಿ ನಟ ವಿನ್ ಆಗಿದ್ದಾರೆ. 112 ದಿನಗಳ ತಮ್ಮ ಬಿಗ್ ಬಾಸ್ ಜರ್ನಿಯ ಬಗ್ಗೆ ಅಶ್ವಿನಿ ಗೌಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. 2ನೇ ರನ್ನರ್ ಅಪ್ ಆಗಿ ಅವರು ಹೊರಹೊಮ್ಮಿದರು. ಟಾಪ್ 2 ಸ್ಪರ್ಧಿಗಳಲ್ಲಿ ತಾವು ಕೂಡ ಒಬ್ಬರಾಗಿರುತ್ತೇನೆ ಎಂದು ಅಶ್ವಿನಿ ಗೌಡ ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗಿಲ್ಲಿ ನಟ (Gilli Nata) ಅವರು ವಿನ್ನರ್ ಆದರು. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಅಶ್ವಿನಿ ಗೌಡ (Ashwini Gowda) ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
‘ಒಂದು ಕಡೆ ಖುಷಿ ಇದೆ. ಇನ್ನೊಂದು ಕಡೆ ಬಹಳ ಬೇಜಾರು ಇದೆ. ಟಾಪ್ 2 ಫೈನಲಿಸ್ಟ್ಗಳಲ್ಲಿ ನಾನು ಕೂಡ ಇರುತ್ತೇನೆ ಎಂಬ ಕಾತರ, ಆಸೆ ಇತ್ತು. ಖಂಡಿತವಾಗಿಯೂ ನನಗೆ ನಿರಾಸೆ ಆಯಿತು. ಈ ಹಿಂದೆ ನಾನು ಬಿಗ್ ಬಾಸ್ ಶೋ ನೋಡಿರಲಿಲ್ಲ. ಹೇಗಿರುತ್ತೆ ನೋಡೋಣ ಅಂತ ಹೋದೆ. ಅಲ್ಲಿ ಹೋದಾಗ ನಾನು ಕಲಾವಿದೆ ಆಗಿರಲಿಲ್ಲ, ಹೋರಾಟಗಾರ್ತಿ ಆಗಿರಲಿಲ್ಲ. ನನ್ನ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ಇದ್ದೆ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.
‘ಮನೆಯಲ್ಲಿ ನಾವು ಸಹಜವಾಗಿ ಹೇಗೆ ಇರುತ್ತೇವೋ ಬಿಗ್ ಬಾಸ್ ಮನೆಯಲ್ಲೂ ನಾನು ಹಾಗೆಯೇ ಇದ್ದೆ. ಓಡಾಡಿಕೊಂಡು ಇರುತ್ತೇನೆ, ಎಲ್ಲರ ಜೊತೆ ಚೆನ್ನಾಗಿ ಇರುತ್ತೇವೆ. ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತೇವೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಇದ್ದವರು ತುಂಬಾ ಜನ ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಂಡು ಅರಮನೆ ತುಂಬಾ ಓಡಾಡುತ್ತಿದ್ದರು. ಆದರೆ ನಾನು ನೈಜವಾಗಿದ್ದೆ. ಒಳ್ಳೆಯದು ಮಾಡಿದ್ದೇನೋ, ಕೆಟ್ಟದ್ದು ಮಾಡಿದ್ದೇನೋ ಗೊತ್ತಿಲ್ಲ. ಅಶ್ವಿನಿ ಆಗಿ ಜೀವಿಸಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
‘ನಾನು ಮತ್ತು ಗಿಲ್ಲಿ ಹಾವು-ಮುಂಗುಸಿ ರೀತಿ ಇದ್ವಿ. ಟಾಮ್ ಆ್ಯಂಡ್ ಜೆರಿ ಥರ ಇತ್ತು. ಹೊರಗಡೆ ಕೂಡ ಇದೇ ರೀತಿ ಇದೆ ಎಂದು ನಮಗೆ ಊಹೆ ಇರಲಿಲ್ಲ. ಬಿಗ್ ಬಾಸ್ ನೋಡಿಕೊಂಡು ಹೋಗಿದ್ದರೆ ಒಂದು ಐಡಿಯಾ ಇರುತ್ತಿತ್ತೇನೋ. ಯಾವುದೂ ಗೊತ್ತಿಲ್ಲದೆ ನಾನು ಬಿಗ್ ಬಾಸ್ ಮನೆಗೆ ಹೋದೆ. ಗಿಲ್ಲಿ ಜೊತೆ ಆದ ಜಗಳ ಮುನಿಸು ಎಲ್ಲವೂ ಸತ್ಯ. ಮುಖವಾಡ ಹಾಕಿಕೊಂಡು ಆಟ ಆಡಿಲ್ಲ’ ಎಂದಿದ್ದಾರೆ ಅಶ್ವಿನಿ ಗೌಡ.
ಇದನ್ನು ಓದಿ: ಗಿಲ್ಲಿ ನಟ ಕೇಳಿದ್ದಕ್ಕಿಂತ ಡಬಲ್ ಪ್ರೀತಿ ನೀಡಿದ ಫ್ಯಾನ್ಸ್: 2 ಮಿಲಿಯನ್ ಗ್ಯಾರಂಟಿ
‘ಮುಂದೆ ಕ್ಯಾಮೆರಾ ಇದೆ ಅಂತ ನಾವು ನಾಟಕ ಮಾಡಬಾರದು. ಅನಿಸಿದ್ದನ್ನು ಮಾಡಬೇಕು. ಹೆಣ್ಮಕ್ಕು ನನ್ನನ್ನು ಆ ಮಟ್ಟಕ್ಕೆ ಪ್ರೀತಿಸಿದ್ದಾರೆ ಎಂದಾಗ ನನಗೆ ತುಂಬಾ ಖುಷಿ ಆಯಿತು. ಹೊರಗೆ ಬಂದಾಗಲೇ ನಮಗೆ ಎಲ್ಲವೂ ಗೊತ್ತಾಗೋದು. ಜನರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದಕ್ಕಿಂತ ಕಪ್ ಇನ್ನೊಂದು ಬೇಕಾ ಅಂತ ನನ್ನ ಕಾಡುತ್ತದೆ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



