AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಮಕ್ಕಳ ರೀತಿ ನಟನೆ; ಗಿಲ್ಲಿ ವ್ಯಕ್ತಿತ್ವದ ಬಗ್ಗೆ ಅಶ್ವಿನಿ ಗೌಡ ಆರೋಪ

ಗಿಲ್ಲಿ ನಟ ಅವರು ಬಡವನೋ ಅಥವಾ ಶ್ರೀಮಂತನೋ ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಕೃಷಿಕ ಕುಟುಂಬದಿಂದ ಬಂದಿರುವ ಗಿಲ್ಲಿ ನಟ ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿದ್ದಾರೆ. 2ನೇ ರನ್ನರ್ ಅಪ್ ಸ್ಥಾನ ಪಡೆದ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

ಬಡವರ ಮಕ್ಕಳ ರೀತಿ ನಟನೆ; ಗಿಲ್ಲಿ ವ್ಯಕ್ತಿತ್ವದ ಬಗ್ಗೆ ಅಶ್ವಿನಿ ಗೌಡ ಆರೋಪ
Ashwini Gowda, Gilli Nata
Mangala RR
| Edited By: |

Updated on: Jan 19, 2026 | 4:27 PM

Share

ಬಡವರ ಮಕ್ಕಳು ಬೆಳೆಯಬೇಕು ಎಂಬ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಆ ಚರ್ಚೆಗೆ ಅಶ್ವಿನಿ ಗೌಡ (Ashwini Gowda) ಈಗ ದನಿಗೂಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವಿನ್ನರ್ ಆಗಿರುವ ಗಿಲ್ಲಿ ನಟ (Gilli Nata) ಅವರು ಮೊದಲಿನಿಂದಲೂ ಅಶ್ವಿನಿ ಗೌಡ ಅವರಿಗೆ ವಿರೋಧಿ ಆಗಿದ್ದರು. ಟಾಪ್ 3 ಹಂತಕ್ಕೆ ಬಂದ ಅಶ್ವಿನಿ ಗೌಡ ಅವರಿಗೆ ವಿನ್ನರ್ ಆಗಲು ಸಾಧ್ಯವಾಗಲಿಲ್ಲ. ಬಿಗ್ ಬಾಸ್ (Bigg Boss Kannada) ಮನೆಯ ತಮ್ಮ ಪಯಣದ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಬಡವರ ಮಕ್ಕಳು ಬೆಳೆಯಬೇಕು ಎಂಬ ವಾದದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಬಡವರ ಮಕ್ಕಳು ಗೆಲ್ಲಬೇಕು ಅಂತ ಎಲ್ಲರೂ ಹೇಳುತ್ತಾರೆ. ಅದು ಈಗ ಹೊರಗಡೆ ಏನೇನೋ ಆಗಿದೆ. ಆದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಅಲ್ವಾ? ಇದೆಲ್ಲ ನಿಜಾನಾ? ಇದು ವ್ಯಕ್ತಿತ್ವಗಳ ಆಟ ಅಂತ ಆದಾಗ, ಬಡವರ ಮಕ್ಕಳು ಅಂತ ನೀವು ಟ್ಯಾಗ್​ಲೈನ್ ಕೊಡುವಾಗ, ನಿಜವಾಗಿಯೂ ನೀವು ಬಡವರ ಮಕ್ಕಳಿಗೆ ಕಪ್ ಕೊಟ್ಟಿದ್ದೀರಾ’ ಎಂದು ಅಶ್ವಿನಿ ಗೌಡ ಅವರು ಪ್ರಶ್ನೆ ಮಾಡಿದ್ದಾರೆ.

‘ಬಡವರ ಮಕ್ಕಳಿಗೆ ಕಪ್ ಕೊಟ್ಟಿದ್ದೇವೆ ಎಂಬ ಸಾರ್ಥಕತೆ ನಿಮಗೆ ಇದೆಯಾ? ಬಡವರ ಮಕ್ಕಳು ಎಂಬುದು ಬೇರೆ. ಬಡವರ ಮಕ್ಕಳು ಎಂಬ ರೀತಿಯಲ್ಲಿ ನಟನೆ ಮಾಡಿಕೊಂಡು ಜೀವಿಸುವುದು ಬೇರೆ. ಇದರಲ್ಲಿ ತುಂಬಾ ವ್ಯತ್ಯಾಸ ಇದೆ. ಹಾಗಾಗಿ ನನಗೆ ಅದು ಏನೂ ಅನಿಸಲಿಲ್ಲ. ಆಟಕ್ಕೋಸ್ಕರ ಗಿಲ್ಲಿ ನಟ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಫೇಕ್ ಅಥವಾ ರಿಯಲ್ ಆಗಿದ್ರೂ ಜನರು ಅದನ್ನು ಮೆಚ್ಚಿದ್ದಾರೆ. ನನ್ನ ವ್ಯಕ್ತಿತ್ವ ಬಿಟ್ಟುಕೊಡದೇ ನಾನು ಇಲ್ಲಿಯ ತನಕ ಬಂದು ನಿಂತಿದ್ದೇನೆ’ ಎಂದಿದ್ದಾರೆ ಅಶ್ವಿನಿ ಗೌಡ.

‘ಪ್ರತಿ ಸಂದರ್ಭದಲ್ಲೂ ನನಗೆ ಗಿಲ್ಲಿ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತಿತ್ತು. ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಅನಿಸುತ್ತಿತ್ತು. ಅವರು ಮೊದಲೇ ಬಿಗ್ ಬಾಸ್ ನೋಡಿಕೊಂಡು ಬಂದಿದ್ದರು. ಎಲ್ಲಿ ಯಾವ ಕಾರ್ಡ್ ವರ್ಕ್ ಆಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಮೊದಲ ದಿನದಿಂದ ಕೊನೇ ದಿನದ ತನಕ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಲೇ ಇದ್ದರು’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ವಿನ್ನರ್: ಅಶ್ವಿನಿ ಗೌಡ ಮೊದಲ ಪ್ರತಿಕ್ರಿಯೆ; ನಿರಾಸೆ ವ್ಯಕ್ತಪಡಿಸಿದ ಛಲಗಾರ್ತಿ

‘ಯಾರು ಮುಂದೆ ಹೋದರೂ ಪರವಾಗಿಲ್ಲ, ಆದರೆ ಅಶ್ವಿನಿ ಗೌಡ ಮುಂದೆ ತನಗೆ ಮುಳುವಾಗುತ್ತಾರೆ ಎಂಬುದನ್ನು ಗಿಲ್ಲಿ ಅವರಲ್ಲಿ ನಾನು ನೋಡಿದ್ದೆ. ಗಿಲ್ಲಿ ಎಲ್ಲಿಯೂ ಜಗಳ ಆಡುತ್ತಿರಲಿಲ್ಲ. ಯಾರ ಪರವಾಗಿಯೂ ನಿಲ್ಲುತ್ತಿರಲಿಲ್ಲ. ಇನ್ನೊಬ್ಬರ ವ್ಯಕ್ತಿತ್ವವನ್ನು ಕೆಳಗೆ ಇಟ್ಟು ಮಾತನಾಡುತ್ತಿದ್ದರು’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.