ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್ ಬಾಸ್ (Bigg Boss Kannada) ಹೊಸ ಸೀಸನ್ಗಾಗಿ ಕಾಯುತ್ತಿದ್ದಾರೆ. ಈ ರಿಯಾಲಿಟಿ ಶೋಗೆ ಅದರದ್ದೇ ಆದಂತಹ ವೀಕ್ಷಕರ ವರ್ಗ ಇದೆ. ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಆಗುತ್ತದೆ. ಗ್ರ್ಯಾಂಡ್ ಓಪನಿಂಗ್ ಆಗುವುದಕ್ಕೂ ಮುನ್ನವೇ ಹತ್ತಾರು ಬಗೆಯ ಚರ್ಚೆ ಹುಟ್ಟಿಕೊಳ್ಳುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕನ್ನಡ ಬಿಗ್ ಬಾಸ್ 9ನೇ ಸೀಸನ್ (Bigg Boss Kannada Season 9) ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ವರ್ಷ ಯಾವೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಸಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿ (Colors Kannada) ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ‘ಬಿಗ್ ಬಾಸ್’ ಮನೆ ನಿರ್ಮಾಣ ಕಾರ್ಯದ ಬಗ್ಗೆ ಅಪ್ಡೇಟ್ ನೀಡಿದಾಗಿನಿಂದ ವೀಕ್ಷಕರ ವಲಯದಲ್ಲಿ ಕೌತುಕ ಹೆಚ್ಚಿದೆ.
ಎಲ್ಲ ಭಾಷೆಯಲ್ಲೂ ಬಿಗ್ ಬಾಸ್ ಕಾರ್ಯಕ್ರಮ ಫೇಮಸ್ ಆಗಿದೆ. ಕನ್ನಡದಲ್ಲಿ ಈವರೆಗೂ 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಈ ಬಾರಿಯೂ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಪ್ರೋಮೋ ಶೂಟಿಂಗ್ ಕೂಡ ಮುಗಿದಿದೆ. ಹಾಗಿದ್ದರೆ ಯಾರಿಗೆಲ್ಲ ಈ ಸಲ ದೊಡ್ಮನೆ ಪ್ರವೇಶಿಸುವ ಚಾನ್ಸ್ ಸಿಗಲಿದೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರರಾಗಿದ್ದಾರೆ.
ಪ್ರತಿ ಬಾರಿಯೂ ಸಿನಿಮಾ ಮತ್ತು ಸೀರಿಯಲ್ ಜಗತ್ತಿನ ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗುತ್ತದೆ. ಅದರಲ್ಲೂ ಕೊಂಚ ವಿವಾದಾತ್ಮಕ ವ್ಯಕ್ತಿಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ಎಂದರೂ ತಪ್ಪಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿನ ಪ್ರತಿಭೆಗಳಿಗೆ ಈ ಸಲ ಕೂಡ ಚಾನ್ಸ್ ಸಿಗಲಿದೆ. ಇತ್ತೀಚಿನ ತಿಂಗಳಲ್ಲಿ ವಿವಾದ ಮಾಡಿಕೊಂಡ ಸೆಲೆಬ್ರಿಟಿಗಳ ಮೇಲೂ ಬಿಗ್ ಬಾಸ್ ಆಯೋಜಕರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಕೆಲವು ಸೀಸನ್ಗಳಲ್ಲಿ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರಿಗೂ ಅವಕಾಶ ಸಿಕ್ಕ ಉದಾಹರಣೆ ಇದೆ. ಕಳೆದ ಸೀಸನ್ನಲ್ಲಿ ಸೆಲೆಬ್ರಿಟಿಗಳ ಜೊತೆ ಕೆಲವು ಯೂಟ್ಯೂಬರ್ಗಳು ಕೂಡ ಸ್ಪರ್ಧಿಸಿದ್ದರು. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ನೀಡಬೇಕು ಎಂದು ಜನರು ಒತ್ತಾಯ ಹೇರುತ್ತಿದ್ದಾರೆ. ಕಮೆಂಟ್ಗಳ ಮೂಲಕ ನೆಟ್ಟಿಗರು ತಮ್ಮ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದ ಹವಾ ಹೆಚ್ಚಿದೆ. ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್ಬುಕ್ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರಿಗೂ ಈ ಬಾರಿಯ ಬಿಗ್ ಬಾಸ್ನಲ್ಲಿ ಚಾನ್ಸ್ ಸಿಗಬಹುದು ಎಂಬ ನಿರೀಕ್ಷೆ ಇದೆ.