ಬಿಗ್ ಬಾಸ್ ನಿರೂಪಕರು ಚೇಂಜ್; ಅಧಿಕೃತ ಘೋಷಣೆ ಮಾಡಿದ ಸ್ಟಾರ್ ನಟ; ವೀಕ್ಷಕರಿಗೆ ಬೇಸರ
ಈ ನಿರ್ಧಾರದಿಂದಾಗಿ ವೀಕ್ಷಕರಿಗೆ ತುಂಬ ಬೇಸರ ಆಗಿದೆ. ಹೊಸದಾಗಿ ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಯಾವ ನಟ ಬರಲಿದ್ದಾರೆ ಎಂಬ ಕೌತುಕ ಮೂಡಿದೆ.
ವೀಕ್ಷಕರ ವಲಯದಲ್ಲಿ ‘ಬಿಗ್ ಬಾಸ್’ (Bigg Boss) ಕಾರ್ಯಕ್ರಮ ಮಾಡಿಸಿರುವ ಕ್ರೇಜ್ ಸಣ್ಣದೇನಲ್ಲ. ಹಲವು ಭಾಷೆಯಲ್ಲಿ ಈ ಶೋ ಮೂಡಿಬಂದಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಯಶಸ್ವಿ ಆಗಿದೆ. ಈ ಜನಪ್ರಿಯ ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬುದು ಕೂಡ ತುಂಬ ಮುಖ್ಯವಾಗುತ್ತದೆ. ವೀಕ್ಷಕರು ಇಷ್ಟಪಡುವ ನಿರೂಪಕರು ಇದ್ದರೆ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್ಪಿ ಸಿಗುತ್ತದೆ. ಇಲ್ಲದಿದ್ದರೆ ಶೋ ಆಯೋಜಕರು ನಷ್ಟ ಅನುಭವಿಸಬೇಕಾಗುತ್ತದೆ. ಕನ್ನಡದಲ್ಲಿ ಕಿಚ್ಚ ಸುದೀಪ್ (Kichcha Sudeep), ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ (Kamal Haasan) ಅವರು ಈ ವಿಚಾರದಲ್ಲಿ ಯಶಸ್ವಿ ಆಗಿದ್ದಾರೆ. ತೆಲುಗಿನಲ್ಲಿ ನಾನಿ, ನಾಗಾರ್ಜುನ, ಜ್ಯೂ. ಎನ್ಟಿಆರ್ ಕೂಡ ನಿರೂಪಕರಾಗಿ ಗಮನ ಸಳೆದಿದ್ದಾರೆ. ಈಗ ಕಮಲ್ ಹಾಸನ್ ಅವರು ತಮಿಳು ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ತೀರ್ಮಾನಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಹೌದು, ಕಮಲ್ ಹಾಸನ್ ಅವರು ಅತ್ಯಂತ ಬ್ಯುಸಿ ನಟ. ನಟನೆ, ನಿರ್ದೇಶನ, ನಿರ್ಮಾಣ, ರಾಜಕೀಯ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ‘ಬಿಗ್ ಬಾಸ್ ತಮಿಳು ಅಲ್ಟಿಮೇಟ್’ ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದರು. ಇದು ತಮಿಳು ಬಿಗ್ ಬಾಸ್ನ ಒಟಿಟಿ ವರ್ಷನ್. ಆದರೆ ಈಗ ಅವರು ಈ ಶೋ ನಿರೂಪಣೆಯಿಂದ ಹೊರಬರುವುದಾಗಿ ತಿಳಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಕಮಲ್ ಹಾಸನ್ ಅವರು ಬಹುನಿರೀಕ್ಷಿತ ‘ವಿಕ್ರಮ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಾಸ್ನಿಂದಾಗಿ ಈ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯ ನೀಡಲು ಕಮಲ್ ಹಾಸನ್ ಅವರಿಗೆ ಕಷ್ಟ ಆಗುತ್ತಿದೆ. ಹಾಗಾಗಿ ಅವರು ‘ಬಿಗ್ ಬಾಸ್ ತಮಿಳು ಅಲ್ಟಿಮೇಟ್’ ಶೋನಿಂದ ಹೊರಬರಲು ತೀರ್ಮಾನಿಸಿದ್ದಾರೆ.
‘ನನ್ನ ನಟನೆಯ ‘ವಿಕ್ರಮ್’ ಸಿನಿಮಾ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಶೂಟಿಂಗ್ ನಡುವೆ ಕ್ಲ್ಯಾಶ್ ಆಗಬಾರದು ಎಂದು ಎರಡೂ ತಂಡಗಳು ಕಷ್ಟಪಟ್ಟು ಈ ದಿನದವರೆಗೂ ಪ್ಲ್ಯಾನ್ ಮಾಡುತ್ತಿದ್ದವು. ಆದರೆ ಎರಡೂ ಪ್ರಾಜೆಕ್ಟ್ಗಳನ್ನು ಏಕಕಾಲಕ್ಕೆ ಮಾಡಲು ನನಗೆ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಮತ್ತು ಕೊರೊನಾ ನಿರ್ಬಂಧದ ಕಾರಣದಿಂದ ‘ವಿಕ್ರಮ್’ ಸಿನಿಮಾದ ಕೆಲಸಗಳು ಮುಂದೂಡಲ್ಪಟ್ಟವು. ಅದರ ಪರಿಣಾಮವಾಗಿ ಬಿಗ್ ಬಾಸ್ ಅಲ್ಟಿಮೇಟ್ ಶೋಗೆ ನೀಡಿದ್ದ ಡೇಟ್ಸ್ ಜೊತೆ ಈಗ ಕ್ಲ್ಯಾಶ್ ಆಗಿದೆ’ ಎಂದು ಕಮಲ್ ಹಾಸನ್ ವಿವರಿಸಿದ್ದಾರೆ.
‘ವಿಕ್ರಮ್’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಮಲ್ ಹಾಸನ್ ಅವರ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗಿದೆ. ಆ ಕಾರಣದಿಂದ ಅವರು ‘ಬಿಗ್ ಬಾಸ್ ಅಲ್ಟಿಮೇಟ್’ ಕಾರ್ಯಕ್ರಮದ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ.
‘ನಾನು ಬಿಗ್ ಬಾಸ್ ಕಾರ್ಯಕ್ರಮದ ಒಟಿಟಿ ಅವತರಣಿಕೆಯನ್ನು ಲಾಂಚ್ ಮಾಡಿದ್ದಕ್ಕೆ ಹೆಮ್ಮೆ ಇದೆ. ಈ ಶೋ ಜೊತೆ ನಾನು ಬೆರೆತುಹೋಗಿದ್ದೇನೆ. ‘ವಿಕ್ರಮ್’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಸದ್ಯ ಹೊಸದಾಗಿ ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ:
‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್ ಬಾಸ್ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
ಬಿಗ್ ಬಾಸ್ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್ ಕುಂದ್ರಾ