ಸಂಜನಾ ಆಟವನ್ನು ಕೊಂಡಾಡಿದ ಬಿಗ್​​ಬಾಸ್, ನೀಡಿದ್ದಾರೆ ವಿಶೇಷ ಪವರ್

Bigg Boss Telugu 09: ಸಂಜನಾ ಗಲ್ರಾನಿ ಬಿಗ್​​ಬಾಸ್ ತೆಲುಗು ಸೀಸನ್ 09 ಸ್ಪರ್ಧಿಯಾಗಿದ್ದಾರೆ. ಸಂಜನಾ ವಿರುದ್ಧ ಇಡೀ ಮನೆಯ ಮಂದಿಯೇ ಒಂದಾಗಿದ್ದಾರೆ. ಮನೆಯ ಎಲ್ಲರ ವಿರೋಧವನ್ನು ಸಂಜನಾ ಕಟ್ಟಿಕೊಂಡಿದ್ದಾರೆ. ಎಲ್ಲರೂ ಸೇರಿ ಒಗ್ಗಟ್ಟಾಗಿ ಸಂಜನಾ ಗಲ್ರಾನಿಯನ್ನು ನಾಮಿನೇಷನ್ ಸಹ ಮಾಡಿದ್ದಾರೆ. ಮನೆಯವರು ವಿರೋಧಿಸಿದ್ದರೂ ಸಹ ಸ್ವತಃ ಬಿಗ್​​ಬಾಸ್ ಸಂಜನಾರನ್ನು ಕೊಂಡಾಡಿದ್ದಾರೆ, ಮಾತ್ರವಲ್ಲದೆ ಅವರಿಗೆ ವಿಶೇಷ ಪವರ್ ಸಹ ನೀಡಿದ್ದಾರೆ.

ಸಂಜನಾ ಆಟವನ್ನು ಕೊಂಡಾಡಿದ ಬಿಗ್​​ಬಾಸ್, ನೀಡಿದ್ದಾರೆ ವಿಶೇಷ ಪವರ್
Sanjana Galrani

Updated on: Sep 12, 2025 | 11:57 AM

ತೆಲುಗು ಬಿಗ್​​ಬಾಸ್ 9 (Telugu Bigg Boss Season 09) ಶುರುವಾಗಿ ಒಂದು ವಾರವೂ ಪೂರ್ಣವಾಗಿಲ್ಲ. ಮನೆಯಲ್ಲಿ ಈಗಾಗಲೇ ಗುಂಪುಗಳಾಗಿದ್ದು, ಜಗಳಗಳೂ ಜೋರಾಗಿಯೇ ನಡೆಯುತ್ತಿವೆ. ಕನ್ನಡದ ನಟಿ ಸಂಜನಾ ಗಲ್ರಾನಿ ಸಹ ಬಿಗ್​​ಬಾಸ್ ಮನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಇದೀಗ ಸಂಜನಾ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಸಂಜನಾ, ಈಗಾಗಲೇ ಕೆಲವೊಟ್ಟಿಗೆ ಜಗಳ ಆಡಿದ್ದು, ಇಡೀ ಮನೆಯನ್ನೇ ಎದುರು ಹಾಕಿಕೊಂಡಿದ್ದಾರೆ. ಇಡೀ ಮನೆಯವರೆಲ್ಲ ಒಂದಾಗಿ ಸಂಜನಾರನ್ನು ನಾಮಿನೇಟ್ ಮಾಡಿರುವುದೇ ಇದಕ್ಕೆ ಉದಾಹರಣೆ. ಇಡೀ ಮನೆಯ ಸ್ಪರ್ಧಿಗಳೇ ಸಂಜನಾ ವಿರುದ್ಧ ನಿಂತಿದ್ದರೂ ಸಹ ಸ್ವತಃ ಬಿಗ್​​ಬಾಸ್ ಸಂಜನಾರ ಆಟವನ್ನು ಹೊಗಳಿದ್ದಾರೆ. ಮಾತ್ರವಲ್ಲದೆ ವಿಶೇಷ ಪವರ್ ಅನ್ನು ಸಹ ನೀಡಿದ್ದಾರೆ.

ನಿನ್ನೆಯ ಎಪಿಸೋಡ್​​ನಲ್ಲಿ ಸಂಜನಾರನ್ನು ಬಿಗ್​​ಬಾಸ್ ಕನ್ಫೆಷನ್ ರೂಂಗೆ ಕರೆದಿದ್ದರು. ಈ ವೇಳೆ ಮನೆಯ ಇತರೆ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಿದರು. ಇದಕ್ಕೆ ಸಂಜನಾ ಯಾವುದೇ ಮುಚ್ಚುಮರೆ ಇಲ್ಲದೆ ನೇರಾ-ನೇರ ಉತ್ತರಗಳನ್ನು ನೀಡಿದರು. ‘ಮನೆಯಲ್ಲಿ ಎಲ್ಲರೂ ಅವರವರ ಗೇಮ್ ಪ್ಲ್ಯಾನ್ ಇಟ್ಟುಕೊಂಡು ಆಟವಾಡುತ್ತಿದ್ದಾರೆ. ಹಲವರು ಒಳಗೊಂಡು-ಹೊರಗೊಂದು ವ್ಯಕ್ತಿತ್ವ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ನಾನು ಮಾತ್ರ ನನಗೆ ತೋಚಿದಂತೆ, ನೇರಗಿದ್ದೇನೆ. ಸರಿ ಎನಿಸಿದರೆ ಸರಿ ಎನ್ನುತ್ತೇನೆ, ತಪ್ಪೆನಿಸಿದ್ದನ್ನು ತಪ್ಪು ಎನ್ನುತ್ತಿದ್ದೇನೆ’ ಎಂದಿದ್ದಾರೆ.

ಸಂಜನಾರ ನೇರ ಮಾತುಗಳಿಂದಾಗಿ ಮನೆಯಲ್ಲಿ ಹಲವರು ಅವರನ್ನು ವಿರೋಧಿಸುತ್ತಿದ್ದಾರೆ. ಸಂಜನಾ, ಮನೆಯ ಹಲವರ ಪಾಲಿಗೆ ಈಗಾಗಲೇ ವಿಲನ್ ಆಗಿದ್ದಾರೆ. ಆದರೆ ಬಿಗ್​​ಬಾಸ್ ಮಾತ್ರ ಸಂಜನಾ ಪರವಾಗಿದ್ದಾರೆ. ನಿನ್ನೆ ಕನ್ಫೆಷನ್ ರೂಂನಲ್ಲಿ ಮಾತನಾಡಿದ ಬಿಗ್​ಬಾಸ್, ‘ನೀವು ಚೆನ್ನಾಗಿ ಆಡುತ್ತಿದ್ದೀರಿ. ಎಲ್ಲರೂ ಇಲ್ಲಿ ನಿಜವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಆದರೆ ನೀವು ಸತ್ಯವನ್ನೇ ಹೇಳುತ್ತಾ ಇದ್ದೀರಿ’ ಎಂದು ಸಂಜನಾರನ್ನು ಬಿಗ್​​ಬಾಸ್ ಅಭಿನಂದಿಸಿದರು.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್​​ನಲ್ಲಿ ಸಂಜನಾ ಗಲ್ರಾನಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?

ಮನೆಯ ಎಲ್ಲ ಸದಸ್ಯರು ಒಟ್ಟಾಗಿ ತಮ್ಮ ವಿರುದ್ಧ ಬಿದ್ದಿರುವುದಕ್ಕೆ ತುಸು ಭಾವುಕರಾದ ಸಂಜನಾ, ‘ನನಗೆ ಒಳಗೆ ಬಹಳ ನೋವಿದೆ ಆದರೆ ನಗುತ್ತಲೇ ನಾನು ಆಡುತ್ತಿದ್ದೇನೆ, ಇದು ನನಗೆ ಸವಾಲಾಗಿದೆ’ ಎಂದರು. ಬಳಿಕ ‘ನಮ್ಮ ಮನೆಯಲ್ಲಿ ಎಲ್ಲರೂ ಕ್ಷೇಮದಿಂದ ಇದ್ದಾರಾ?’ ಎಂದು ಕೇಳಿದರು. ಅದಕ್ಕೆ ಬಿಗ್​​ಬಾಸ್, ‘ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ, ನೀವು ಆ ಚಿಂತೆಯನ್ನು ಮರೆತು ಆಟವಾಡಿ’ ಎಂದರು. ಬಳಿಕ ಸಂಜನಾಗೆ ವಿಶೇಷ ಪವರ್ ನೀಡಿದ ಬಿಗ್​​ಬಾಸ್, ನೀವು ಮನೆಯ ಐದು ಸದಸ್ಯರ ಹೆಸರು ಹೇಳಿ ಅವರಲ್ಲಿ ಒಬ್ಬರು ಕ್ಯಾಪ್ಟನ್ ಆಗುತ್ತಾರೆ ಎಂದರು. ಸಂಜನಾ ಅದರಂತೆ ಐದು ಮಂದಿಯ ಹೆಸರು ಹೇಳಿದರು.

ಕನ್​​ಫೆಷನ್ ರೂಂನಿಂದ ಹೊರಗೆ ಬಂದ ಬಳಿಕ ಮನೆಯ ಸದಸ್ಯರ ಮುಂದೆಯೂ ಆ ಐದು ಹೆಸರು ಹೇಳಿದರು. ಅದರಲ್ಲಿ ಹೆಚ್ಚು ಸೆಲೆಬ್ರಿಟಿಗಳ ಹೆಸರೇ ಇದ್ದ ಕಾರಣದಿಂದಾಗಿ ಸಾಮಾನ್ಯರು ಸಂಜನಾ ಬಳಿ ಜೋರು ದನಿಯಲ್ಲಿ ಜಗಳ ಮಾಡಿದರು. ಆದರೆ ಬಿಗ್​​ಬಾಸ್, ಸಂಜನಾಗೆ ವಿಶೇಷ ಪವರ್ ಕೊಡುವಾಗಲೇ ಮೂವರು ಸೆಲೆಬ್ರಿಟಿಗಳು ಕಡ್ಡಾಯವಾಗಿ ಪಟ್ಟಿಯಲ್ಲಿ ಇರಬೇಕು ಎಂದಿದ್ದರು. ಹಾಗಾಗಿ ಸಂಜನಾ ಅವರನ್ನು ಆಯ್ಕೆ ಮಾಡಿದ್ದರು. ಒಟ್ಟಾರೆ ಸಂಜನಾ, ತಮ್ಮ ಕಟು ಮಾತುಗಳಿಂದ ನಡುವಳಿಕೆಗಳಿಂದ ಮನೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಸಂಜನಾ ಕನಿಷ್ಟ ಒಂದು ತಿಂಗಳಿಗೂ ಹೆಚ್ಚು ಸಮಯ ಮನೆಯಲ್ಲಿರಬಹುದೇನೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ