ಒಪ್ಪಿಗೆ ಇಲ್ಲದೆ ಅಮಿತಾಭ್ ಬಚ್ಚನ್ ಫೋಟೋ ಬಳಸುವಂತಿಲ್ಲ; ಕೋರ್ಟ್ನಿಂದಲೇ ಬಂತು ಆದೇಶ
ಅಮಿತಾಭ್ ಬಚ್ಚನ್ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ತಮ್ಮ ಹೆಸರು, ಭಾವಚಿತ್ರ, ಧ್ವನಿಯನ್ನು ಒಪ್ಪಿಗೆ ಇಲ್ಲದೆ ಬಳಕೆ ಮಾಡದಂತೆ ಅಮಿತಾಭ್ ಬಚ್ಚನ್ ದೆಹಲಿ ಕೋರ್ಟ್ನಲ್ಲಿ ಕೋರಿದ್ದರು.
ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಹಲವು ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಸ್ಟಾರ್ಗಳು ಅನೇಕ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗುತ್ತಾರೆ. ಇದರಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬರುತ್ತದೆ. ಆದರೆ, ಕೆಲವರು ಸ್ಟಾರ್ಗಳ ಫೋಟೋಗಳನ್ನು ಒಪ್ಪಿಗೆ ಇಲ್ಲದೆ ಜಾಹೀರಾತಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಬ್ರ್ಯಾಂಡ್ಗಳ ಪ್ರಮೋಷನ್ ಮಾಡಿಕೊಳ್ಳುತ್ತಾರೆ. ಅಮಿತಾಭ್ ಬಚ್ಚನ್ (Amitabh Bachchan ) ವಿಚಾರದಲ್ಲೂ ಇದೇ ರೀತಿ ಆಗಿದೆ. ಇದಕ್ಕೆ ಸಂಬಂಧಿಸಿ ಅವರು ದೆಹಲಿ ಹೈಕೋರ್ಟ್ (Delhi High Court) ಮೆಟ್ಟಿಲು ಏರಿದ್ದಾರೆ. ಅಮಿತಾಭ್ ಬಚ್ಚನ್ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
ಅಮಿತಾಭ್ ಬಚ್ಚನ್ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ತಮ್ಮ ಹೆಸರು, ಭಾವಚಿತ್ರ, ಧ್ವನಿಯನ್ನು ಒಪ್ಪಿಗೆ ಇಲ್ಲದೆ ಬಳಕೆ ಮಾಡದಂತೆ ಅಮಿತಾಭ್ ಬಚ್ಚನ್ ದೆಹಲಿ ಕೋರ್ಟ್ನಲ್ಲಿ ಕೋರಿದ್ದರು. ಅಮಿತಾಭ್ ಪರವಾಗಿ ಖ್ಯಾತ ವಕೀಲ ಹರೀಶ್ ಸಾಲ್ವೆ ಅವರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಶುಕ್ರವಾರ (ನವೆಂಬರ್ 25) ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರ ಭಾವಚಿತ್ರವನ್ನು ಉದ್ಯಮದ ಪ್ರಮೋಷನ್ಗೆ ಬಳಕೆ ಮಾಡಬಾರದು. ಇದರಿಂದ ಅರ್ಜಿದಾರರು ಸರಿಪಡಿಸಲಾಗದ ನಷ್ಟ ಮತ್ತು ಹಾನಿಯನ್ನು ಅನುಭವಿಸಬಹುದು. ಕೆಲವು ಚಟುವಟಿಕೆಗಳು ಅವರಿಗೆ ಅಪಖ್ಯಾತಿಯನ್ನು ಸಹ ತರಬಹುದು’ ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಹೇಳಿದ್ದಾರೆ.
ಕೌನ್ ಬನೇಗಾ ಕರೋಡ್ಪತಿಯನ್ನು ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಕೆಲ ಮೊಬೈಲ್ ಅಪ್ಲಿಕೇಷನ್ಗಳು ಕೌನ್ ಬನೇಗಾ ಕರೋಡ್ಪತಿ ಮಾದರಿಯಲ್ಲಿ ಅಕ್ರಮವಾಗಿ ಲಾಟರಿ ವ್ಯವಹಾರ ಮಾಡಲು ಅಮಿತಾಭ್ ಬಚ್ಚನ್ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಮಿತಾಭ್ ವರ್ಚಸ್ಸಿಗೆ ಹಾನಿ ಉಂಟು ಮಾಡುತ್ತಿದೆ. ಈ ಕಾರಣದಿಂದ ಅಮಿತಾಭ್ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಪ್ರಕರಣದ ಮುಂದಿನ ವಿಚಾರಣೆ 2023 ಮಾರ್ಚ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಪುನೀತ್ ಬಗ್ಗೆ ಅಮಿತಾಭ್ ಬಚ್ಚನ್ ಮಾತು; ದಿಗ್ಗಜ ನಟನಿಗೂ ಕಾಡುತ್ತಿದೆ ಅಪ್ಪು ನಗು
ಅಮಿತಾಭ್ ಬಚ್ಚನ್ ನಟನೆಯ ‘ಗುಡಬೈ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೋತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಅಮಿತಾಭ್ ಬಚ್ಚನ್ ಬ್ಯುಸಿ ಇದ್ದಾರೆ.