ನಟಿ ದಿವ್ಯಾ ಉರುಡುಗ (Divya Uruduga) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಟಾಪ್ 5ರ ತನಕ ಬಂದ ಅವರು ಫಿನಾಲೆ (BBK 9 Finale) ಸಂಚಿಕೆಯಲ್ಲಿ ಎಲಿಮಿನೇಟ್ ಆಗಬೇಕಾಯಿತು. 4ನೇ ರನ್ನರ್ ಅಪ್ ಆಗಿ ಹೊರಬಂದ ಅವರನ್ನು ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಮಾತನಾಡಿಸಿದರು. ಈ ವೇಳೆ ದಿವ್ಯಾ ಉರುಡುಗ ಬಗ್ಗೆ ಪ್ರಶಾಂತ್ ಸಂಬರ್ಗಿ ಮತ್ತು ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಗುರೂಜಿ ಹೇಳಿದ ಮಾತುಗಳು ದಿವ್ಯಾಗೆ ಹಿಡಿಸಲಿಲ್ಲ. ಅದಕ್ಕೆ ಅವರು ವೇದಿಕೆಯಲ್ಲೇ ಗರಂ ಆದರು. ಸುದೀಪ್ ಎದುರಲ್ಲಿ ಆರ್ಯವರ್ಧನ್ ಬಗ್ಗೆ ದಿವ್ಯಾ ಕೆಲವು ಆರೋಪಗಳನ್ನು ಮಾಡಿದರು.
ದಿವ್ಯಾ ಉರುಡುಗ ಅವರು ಅದೃಷ್ಟದ ಬಲದಿಂದ ಫಿನಾಲೆ ತನಕ ಬಂದಿದ್ದಾರೆ ಎಂಬುದು ಪ್ರಶಾಂತ್ ಸಂಬರ್ಗಿ ಅವರ ಅಭಿಪ್ರಾಯ. ಅದೇ ಮಾತಿಗೆ ಆರ್ಯವರ್ಧನ್ ಗುರೂಜಿ ಕೂಡ ಸಹಮತ ಸೂಚಿಸಿದರು. ಇದು ದಿವ್ಯಾ ಅವರ ಕೋಪಕ್ಕೆ ಕಾರಣ ಆಯಿತು. ತಾವು ಅದೃಷ್ಟದಿಂದ ಫಿನಾಲೆ ತಲುಪಿದ್ದಲ್ಲ ಎಂದು ಮೊದಲಿಗೆ ದಿವ್ಯಾ ಸ್ಪಷ್ಟಪಡಿಸಿದರು. ಅಲ್ಲದೇ, ಸಂಬರ್ಗಿಯ ಮಾತಿಗೆ ಹೌದು ಎಂಬಂತೆ ಧ್ವನಿ ಗೂಡಿಸಿದ ಆರ್ಯವರ್ಧನ್ ಅವರನ್ನು ದಿವ್ಯಾ ನೇರವಾಗಿ ಟೀಕಿಸಿದರು.
‘ಮನೆಯೊಳಗೆ ಇದ್ದಾಗ ಇವರು ನನಗೆ ಮಗಳೇ ಅಂತಾರೆ. ಆದರೆ ಇಲ್ಲಿ ಕುಳಿತುಕೊಂಡು ಹಂಗೆ, ಹಿಂಗೆ ಅಂತಾರೆ’ ಎಂದರು ದಿವ್ಯಾ ಉರುಡುಗ. ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಆರ್ಯವರ್ಧನ್ ಗುರೂಜಿ ಮುಂದಾದರು. ‘ರೀ ಸುಮ್ಮನೆ ಕುಳಿತುಕೊಳ್ರಿ’ ಎಂದು ಏರುಧ್ವನಿಯಲ್ಲಿ ದಿವ್ಯಾ ಮಾತನಾಡಿದರು. ಬಿಗ್ ಬಾಸ್ ಫಿನಾಲೆಯ ವೇದಿಕೆ ಮೇಲೆ ನಡೆದ ಈ ಮಾತಿನ ಚಕಮಕಿಯಿಂದ ಎಲ್ಲರಿಗೂ ನಗು ಮೂಡಿತು.
ಇದನ್ನೂ ಓದಿ: Bigg Boss Finale: ಬಿಗ್ ಬಾಸ್ ಫಿನಾಲೆಗಾಗಿ ವಿಶೇಷ ಗೆಟಪ್ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್ ಅಡಿಗ
‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿಸಿದ್ದ ದಿವ್ಯಾ ಉರುಡುಗ ಅವರು ಆಗಲೂ ಫಿನಾಲೆ ತನಕ ಬಂದು ಔಟ್ ಆಗಿದ್ದರು. 9ನೇ ಸೀಸನ್ನಲ್ಲಾದರೂ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಅವರ ಕನಸು ಭಗ್ನವಾಯಿತು. ಒಟ್ಟಿನಲ್ಲಿ ಎರಡು ಬಾರಿ ಫಿನಾಲೆ ತಲುಪಿದ ಏಕೈಕ ಸ್ಪರ್ಧಿ ಎಂಬ ದಾಖಲೆ ಅವರ ಹೆಸರಿನಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.