ಮಚ್ಚು ಹಿಡಿದ ಪ್ರಕರಣ: ವಿನಯ್, ರಜತ್ಗೆ ಜಾಮೀನು ಮಂಜೂರು
Vinay and Rajath: ವಿನಯ್ ಹಾಗೂ ರಜತ್ ಅವರು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ವಿನಯ್ ಮತ್ತು ರಜತ್ ಇಬ್ಬರೂ ಸಹ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದರು. ಇದೀಗ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದೆ.

ರೀಲ್ಸ್ ಮಾಡುವಾಗ ಮಚ್ಚು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಅವರುಗಳು ಜಾಮೀನು ಮಂಜೂರಾಗಿದೆ. ವಿನಯ್ ಹಾಗೂ ರಜತ್ ಅವರು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ವಿನಯ್ ಮತ್ತು ರಜತ್ ಇಬ್ಬರೂ ಸಹ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಸಾಕ್ಷ್ಯ ನಾಶ ಪ್ರಕರಣದಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಇದೀಗ ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
24ನೇ ಎಸಿಜೆಎಂ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ. ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, 10 ಸಾವಿರ ರೂಪಾಯಿ ಶೂರಿಟಿ ನೀಡುವ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಇಂದು ನಡೆದ ವಿಚಾರಣೆಯಲ್ಲಿ ಪೊಲೀಸರ ಪರ ವಾದ ಮಾಡಿದ ವಕೀಲ ಚಂದ್ರೇಗೌಡ ಅವರು, ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.
ಆದರೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲ, ಸರ್ಚ್ ವಾರಂಟ್ ತೆಗೆದುಕೊಂಡು ಮನೆಯನ್ನೆಲ್ಲಾ ಸರ್ಚ್ ಮಾಡಿದ್ದಾರೆ, ಮುಂದೆ ಏನೇ ಇದ್ದರೂ ಸಹಕಾರ ನೀಡ್ತಾರೆ. ವಿನಯ್ ಗೆ ಭಾನುವಾರ ಶೂಟಿಂಗ್ ಸಹ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿ ಆಗಬೇಕಾದ ಅವಶ್ಯಕತೆ ಇದೆ. ಅವರಿಗೆ ಕಣ್ಣಿನ ಸಮಸ್ಯೆಯೂ ಇದೆ. ಹೀಗಾಗಿ ಬೇಲ್ ನೀಡಬೇಕೆಂದು ವಿನಯ್ ಪರ ವಕೀಲರ ಮನವಿ ಮಾಡಿದರು.
ಇದನ್ನೂ ಓದಿ:ಮಚ್ಚು ಹಿಡಿದ ಪ್ರಕರಣ: 3 ದಿನ ಪೊಲೀಸ್ ಕಸ್ಟಡಿಗೆ ವಿನಯ್ ಗೌಡ, ರಜತ್ ಕಿಶನ್
ಈ ವೇಳೆ ನ್ಯಾಯಾಧೀಶರು, ಶೂಟಿಂಗ್ನಲ್ಲಿ ಮಚ್ಚು ಹಿಡಿದರೆ ಏನು ಮಾಡೋದು ಎಂದು ಕೇಳಿದರು. ಅದಕ್ಕೆ ವಕೀಲರು, ಕನಸಿನಲ್ಲಿಯೂ ಹಾಗೆ ಮಾಡೊಲ್ಲ, ಜಾಮೀನು ಮಂಜೂರು ಮಾಡಿ ಎಂದು ಮನವಿ ಮಾಡಿದರು. ಪೊಲೀಸರು ಸಹ ತಮಗೆ ವಿನಯ್ ಮತ್ತು ರಜತ್ ಅವರ ಕಸ್ಟಡಿಯ ಅವಶ್ಯಕತೆ ಇಲ್ಲವೆಂದು ಹೇಳಿದರು. ಹಾಗಾಗಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಪೊಲೀಸರ ಕಸ್ಟಡಿಯಲ್ಲಿದ್ದ ವಿನಯ್ ಮತ್ತು ರಜತ್ ಅವರನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಇಂದೇ ಷರತ್ತುಗಳನ್ನು ಪೂರೈಸಿ, ಜಾಮೀನು ಕಾಪಿಯನ್ನು ಸಂಜೆ ವೇಳೆಗೆ ಜೈಲಿಗೆ ಕೊಂಡೊಯ್ದರೆ ಇಂದೇ ವಿನಯ್ ಹಾಗೂ ರಜತ್ ಬಿಡುಗಡೆ ಆಗಲಿದೆ. ಇಲ್ಲವಾದರೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆದು ನಾಳೆ (ಮಾರ್ಚ್ 29) ಬಿಡುಗಡೆ ಆಗಬೇಕಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Fri, 28 March 25