ನನಗೆ ಜೀ ಕನ್ನಡ ತವರು ಮನೆ, ಕಲರ್ಸ್​ ಗಂಡನ ಮನೆ: ಹತ್ತಿದ ಏಣಿ ಮರೆಯಲಿಲ್ಲ ಹನುಮಂತ

ಸಿಂಗರ್ ಹನುಮಂತ ಲಮಾಣಿ ಅವರು ಬಿಗ್ ಬಾಸ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಅವರಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಹನುಮಂತ ಅವರು ಇಂದು (ಜನವರಿ 27) ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯ ವೇದಿಕೆಯಲ್ಲಿ ಇದ್ದರೂ ಕೂಡ ಅವರು ‘ಜೀ ಕನ್ನಡ’ ವಾಹಿನಿಯನ್ನು ಮರೆತಿಲ್ಲ.

ನನಗೆ ಜೀ ಕನ್ನಡ ತವರು ಮನೆ, ಕಲರ್ಸ್​ ಗಂಡನ ಮನೆ: ಹತ್ತಿದ ಏಣಿ ಮರೆಯಲಿಲ್ಲ ಹನುಮಂತ
Hanumantha Lamani

Updated on: Jan 27, 2025 | 9:23 PM

ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ವಿನ್ನರ್​ ಆಗಿದ್ದಾರೆ. ರಿಯಾಲಿಟಿ ಶೋಗಳ ಜಗತ್ತಿಗೆ ಹನುಮಂತ ಹೊಸಬರೇನೂ ಅಲ್ಲ. ಈ ಮೊದಲು ಅವರು ‘ಜೀ ಕನ್ನಡ’ ವಾಹಿನಿಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಈ ಬಾರಿ ಅವರಿಗೆ ‘ಕಲರ್ಸ್​ ಕನ್ನಡ’ ವಾಹಿನಿಯ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ವಿನ್ನರ್​ ಕೂಡ ಆದರು. ಈ ಸಂಭ್ರಮದಲ್ಲಿ ಅವರು ‘ಜೀ ಕನ್ನಡ’ ವಾಹಿನಿಯನ್ನು ಮರೆತಿಲ್ಲ.

ಇಂದು (ಜ.27) ಹನುಮಂತ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ‘ನಾನು ಮೊದಲೆಲ್ಲ ಬಿಗ್ ಬಾಸ್ ಶೋ ದೇವರಾಣೆಗೂ ನೋಡುತ್ತಿರಲಿಲ್ಲ. ನಾನು ಜೀ ಕನ್ನಡದಲ್ಲಿ ಇದ್ದೆ. ಅದು ಗಂಡನ ಮನೆ ಇದ್ದಂತೆ. ಈಗ ‘ಕಲರ್ಸ್​ ಕನ್ನಡ’ ಎಂಬ ಗಂಡನ ಮನೆಗೆ ಬಂದಿದ್ದೇನೆ. ಸುದೀಪ್ ಸರ್​ ಶೋ ನಡೆಸಿಕೊಡುವಾಗಲೇ ಒಮ್ಮೆಯಾದರೂ ಬಿಗ್ ಬಾಸ್​ಗೆ ಹೋಗು ಅಂತ ನನಗೆ ಗೆಳೆಯರು ಹೇಳಿದರು. ಹಾಗಾಗಿ ಈ ಶೋಗೆ ಬಂದೆ’ ಎಂದು ಹನುಮಂತ ಹೇಳಿದ್ದಾರೆ.

ಹನುಮಂತ ಗೆದ್ದಿದ್ದಕ್ಕೆ ‘ಜೀ ಕನ್ನಡ’ ವಾಹಿನಿ ಅಭಿನಂದನೆ ತಿಳಿಸಿದೆ. ಈ ರೀತಿ, ಬೇರೆ ವಾಹಿನಿಯ ರಿಯಾಲಿಟಿ ಶೋನಲ್ಲಿ ಗೆದ್ದ ಸ್ಪರ್ಧಿಗೆ ಇನ್ನೊಂದು ವಾಹಿನಿ ಅಭಿನಂದನೆ ತಿಳಿಸುವುದು ತುಂಬ ವಿರಳ.

‘ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು! ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಹನುಮಂತ ಗೆದ್ದಿದ್ದಕ್ಕೆ ಬಹುತೇಕರಿಗೆ ಖುಷಿ ಇದೆ. ಯಾಕೆಂದರೆ, ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಮಾಡಿಲ್ಲ. ಪಕ್ಷಪಾತ ಮಾಡಿಲ್ಲ. ಯಾರ ಮೇಲೂ ವೈಯಕ್ತಿಕ ದ್ವೇಷ ಸಾಧಿಸಿಲ್ಲ. ಪಿತೂರಿ ನಡೆಸಿಲ್ಲ. ನೇರ ನಡೆ-ನುಡಿ ಮೂಲಕ ಅವರು ಗುರುತಿಸಿಕೊಂಡರು. ಈ ಎಲ್ಲ ಕಾರಣಗಳಿಂದಾಗಿ ಹನುಮಂತನ ಗೆಲುವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಈಗ ಅವರು ‘ಕಲರ್ಸ್​ ಕನ್ನಡ’ ವಾಹಿನಿಯ ‘ಬಾಯ್ಸ್​ ವರ್ಸಸ್ ಗರ್ಲ್ಸ್​’ ಶೋಗೆ ಆಯ್ಕೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.