‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಫ್ಯಾಮಿಲಿ ಡ್ರಾಮಾ ಹೈಲೈಟ್ ಆಗುತ್ತಿದೆ. ಒಂದು ಕಡೆ ಎಂಡಿ ಪಟ್ಟ ಉಳಿಸಿಕೊಳ್ಳಬೇಕು ಎಂದು ಸಾನಿಯಾ ಹೋರಾಡುತ್ತಿದ್ದಾಳೆ. ಸದಾ ಸಂಚು ರೂಪಿಸುವ ಸಾನಿಯಾನ ಮಟ್ಟ ಹಾಕಲು ಹರ್ಷ ಪ್ರಯತ್ನ ಮಾಡುತ್ತಿದ್ದಾನೆ. ಇದರ ಜತೆಗೆ ಹರ್ಷನ ಬಾಯಿಯಿಂದ ಆಗಾಗ ಬರುವ ಕಟು ಮಾತುಗಳಿಂದ ಭುವಿಗೆ ಬೇಸರ ಆಗುತ್ತಿದೆ. ರತ್ನಮಾಲಾ ಲೋಕವೇ ಬೇರೆ. ಆಕೆಗೆ ಮರೆವಿನ ಕಾಯಿಲೆ ಕಾಡುತ್ತಿದೆ. ಇದರಿಂದ ಆಕೆ ಸಾಕಷ್ಟು ನೊಂದಿದ್ದಾಳೆ. ತನಗೆ ಯಾವುದೋ ಸಮಸ್ಯೆ ಕಾಡುತ್ತಿದೆ ಎಂಬುದು ರತ್ನಮಾಲಾಗೆ ಮನದಟ್ಟಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಾನಿಯಾಗೆ ಹರ್ಷ (Harsha) ಖಡಕ್ ಎಚ್ಚರಿಕೆ ನೀಡಿದ್ದಾನೆ. ನಿಂತ ಜಾಗದಲ್ಲೇ ಸಾನಿಯಾನ ಹೂಳುವ ಎಚ್ಚರಿಕೆ ನೀಡಿದ್ದಾನೆ.
ಭುವಿಯನ್ನು ಕೆಲಸದಿಂದ ತೆಗೆಯಲು ನೀಲೇಶ್ ಎಂಬ ವ್ಯಕ್ತಿಯನ್ನು ಸಾನಿಯಾ ಆಯ್ಕೆ ಮಾಡಿಕೊಂಡಿದ್ದಳು. ಆತ ಬಲಗೈ ಬಂಟನಂತೆ ವರ್ತಿಸಿದ್ದ. ನೀಲೇಶ್ಗೆ ಸಾಕಷ್ಟು ಹಣ ನೀಡಿದ್ದರಿಂದ ಆತ ಸಾನಿಯಾ ಹೇಳಿದಂತೆ ನಡೆದುಕೊಳ್ಳುತ್ತಿದ್ದ. ಈ ಮಧ್ಯೆ ಆತ ಉಲ್ಟಾ ಹೊಡೆದಿದ್ದಾನೆ. ಸಾನಿಯಾ ಮಾಡಿದ ಕೆಟ್ಟ ಕೆಲಸಗಳ ಬಗ್ಗೆ ಹರ್ಷನ ಎದುರು ನೀಲೇಶ್ ಬಾಯ್ಬಿಟ್ಟಿದ್ದಾನೆ. ಇದರಿಂದ ಸಾನಿಯಾ ಅಸಲಿ ಮುಖ ತೆರೆದುಕೊಂಡಿದೆ.
ಸಾನಿಯಾ ಕಾರಿನಲ್ಲಿ ಹೋಗುತ್ತಿರುವಾಗ ಹರ್ಷ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಪದೇಪದೇ ಹಾರ್ನ್ ಹೊಡೆದಿದ್ದಾನೆ. ಸಾನಿಯಾ ಸಿಟ್ಟಿನಿಂದ ಬಾಗಿಲು ತೆಗೆದು ನೋಡಿದಾಗ ಆಕೆಗೆ ಕಂಡಿದ್ದು ಹರ್ಷ. ಇದೇ ಸಮಯಕ್ಕೆ ನೀಲೇಶ್ ಕೂಡ ಕರೆ ಮಾಡಿದ್ದಾನೆ. ‘ನಾನು ಹರ್ಷನಿಗೆ ಕರೆ ಮಾಡಿ ಎಲ್ಲವನ್ನೂ ಹೇಳಿದ್ದೇನೆ. ನಿಮ್ಮ ದುಡ್ಡೂ ಬೇಡ, ನಿಮ್ಮ ಸಹವಾಸವೂ ಬೇಡ’ ಎಂದು ಹೇಳಿ ಆತ ಕಾಲ್ ಕಟ್ ಮಾಡಿದ್ದಾನೆ. ಇದರಿಂದ ಸಾನಿಯಾ ಆಕಾಶವೇ ಕಳಚಿ ಬಿದ್ದಂತೆ ವರ್ತಿಸಿದ್ದಾಳೆ.
‘ಸಾನಿಯಾ ನಿಮ್ಮ ಕಾರು ಮುಂದಿದೆ ಎಂದ ಮಾತ್ರಕ್ಕೆ ರೇಸ್ನಲ್ಲಿ ನೀವು ಮುಂದಿದ್ದೀರಿ ಎಂದು ಅರ್ಥವಲ್ಲ. ಕಾರು ಹತ್ತಿ ಹೊರಡಿ. ನಿಮ್ಮನ್ನು ಸುಡಬೇಕೋ ಅಥವಾ ಹೂಳಬೇಕೋ ಎಂಬುದನ್ನು ನಾನು ನಿರ್ಧರಿಸುತ್ತೀನಿ’ ಎಂದು ಸಾನಿಯಾಗೆ ಎಚ್ಚರಿಕೆ ನೀಡಿದ್ದಾನೆ ಹರ್ಷ. ಆದರೆ, ಹರ್ಷನ ಬೆದರಿಕೆಗೆ ಸಾನಿಯಾ ಹೆದರಿಲ್ಲ.
‘ನೀಲೇಶ್ ದುಡ್ಡು ಕೊಟ್ಟರೆ ಐದು ನಿಮಿಷಕ್ಕೆ ಒಂದು ಬಾರಿ ಮನಸ್ಸು ಬದಲಾಯಿಸುತ್ತಾನೆ. ಆತನ ಬಳಿ ಹೋಗಿ ನೀವು ಸಾಕ್ಷಿ ಹೇಳಿಸ್ತೀರಿ ಅಂತಿದೀರಲ್ಲ. ನೀವು ಏನೇ ಮಾಡಿದ್ರೂ ನನಗೆ ಭಯ ಇಲ್ಲ. ಮನೆಯಲ್ಲಿರುವ ಒಳ್ಳೆಯವರ ಮೇಲೆ ನನಗೆ ನಂಬಿಕೆ ಇದೆ. ನೀವು ಒಳ್ಳೆಯವರಾಗಿ, ನಿಮಗೂ ಒಳ್ಳೆಯದಾಗುತ್ತದೆ’ ಎಂದು ಸಾನಿಯಾ ಹರ್ಷನಿಗೆ ಕಿವಿಮಾತು ಹೇಳಿ ಅಲ್ಲಿಂದ ತೆರಳಿದ್ದಾಳೆ.
ಇದನ್ನೂ ಓದಿ: ‘ಕನ್ನಡತಿ’ ಕಥೆಗೆ ಬಿಗ್ ಟ್ವಿಸ್ಟ್: ಮಾಡದ ತಪ್ಪಿಗೆ ಅರೆಸ್ಟ್ ಆದ ಭುವನೇಶ್ವರಿ
ಸಾನಿಯಾ ಕೆಲಸಕ್ಕೆ ಕುತ್ತು?
ಸಾನಿಯಾ ಕೆಲಸಕ್ಕೆ ಕುತ್ತು ಬರುವ ಬಗ್ಗೆ ರತ್ನಮಾಲಾ ಈ ಮೊದಲೇ ಎಚ್ಚರಿಕೆ ನೀಡಿದ್ದಳು. ಅದು ನಿಜವಾಗುವ ಕಾಲ ಸಮೀಪಿಸಿದೆ. ರತ್ನಮಾಲಾ ಸಂದರ್ಶನಕ್ಕೆ ಪತ್ರಕರ್ತೆ ಬಂದಿದ್ದಾಳೆ. ಅವಳ ಬಳಿ ಏನು ಮಾತನಾಡಬೇಕು ಎಂಬುದು ತಿಳಿಯದೇ ಭುವಿ ಸಮೀಪ ಬಂದು ರತ್ನಮಾಲಾ ತನ್ನ ಆತಂಕ ತೋಡಿಕೊಂಡಿದ್ದಾಳೆ. ‘ಏನಾದರೂ ಹೇಳೋಕೆ ಇದ್ದರೆ ಹೇಳಿಬಿಡಿ. ಇಲ್ಲ ಎಂದರೆ ಹಾಗೇ ಕಳುಹಿಸಿ’ ಎಂದು ರತ್ನಮಾಲಾಗೆ ಭುವಿ ಸೂಚಿಸಿದ್ದಾಳೆ. ‘ಕಂಪನಿಗೆ ಸಂಬಂಧಿಸಿ ಕೆಲ ಪ್ರಮುಖ ನಿರ್ಧಾರ ಕೈಗೊಂಡಿದ್ದೇನೆ. ಅದನ್ನು ಮಾಧ್ಯಮದವರಿಗೆ ಹೇಳಿದರೆ ಹೇಗೆ’ ಎಂದು ಕೇಳಿದಳು ರತ್ನಮಾಲಾ. ‘ಸಂಬಂಧಿಸಿದವರಿಗೆ ಆ ನಿರ್ಧಾರವನ್ನು ಮೊದಲು ಹೇಳಿ ಆ ಬಳಿಕ ಅದನ್ನು ಮಾಧ್ಯಮದವರಿಗೆ ತಿಳಿಸಿ’ ಎಂದು ಭುವಿ ಸೂಚಿಸಿದಳು.
ಶ್ರೀಲಕ್ಷ್ಮಿ ಎಚ್.
Published On - 7:00 am, Tue, 4 October 22