‘ಐ ಲವ್ ಯೂ ಪನ್ನಿ ಕುಟ್ಟಿ’; ಪತ್ರದ ಮೂಲಕ ಭವ್ಯಾಗೆ ಭಾವನೆ ತಿಳಿಸಿದ ತ್ರಿವಿಕ್ರಂ
ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಮತ್ತು ತ್ರಿವಿಕ್ರಂ ಅವರ ನಡುವಿನ ಗೆಳೆತನ ಗಮನ ಸೆಳೆದಿದೆ. ತ್ರಿವಿಕ್ರಂ ಅವರು ಭವ್ಯಾಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮೊದಲು ಒರಟು ಎಂದುಕೊಂಡಿದ್ದ ತ್ರಿವಿಕ್ರಂ ಅವರೊಂದಿಗೆ ಭವ್ಯಾ ಅವರ ಬಾಂಡಿಂಗ್ ಬೆಳೆದಿದೆ ಎಂದು ಹೇಳಲಾಗಿದೆ. ಭವ್ಯಾ ಅವರ ತಾಯಿ ಕೂಡ ತ್ರಿವಿಕ್ರಂ ಅವರ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಎಷ್ಟು ಗೆಳೆತನ ಇದೆ, ಅದು ಯಾವ ರೀತಿಯಲ್ಲಿ ಇದೆ ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ. ಈ ಮೊದಲು ಭವ್ಯಾಗೆ ತ್ರಿವಿಕ್ರಂ ಅವರು ಪ್ರಪೋಸ್ ಕೂಡ ಮಾಡಿದ್ದರು. ಹೊರ ಹೋದ ಬಳಿಕ ಆ ಬಗ್ಗೆ ಯೋಚಿಸೋಣ ಎಂದು ಭವ್ಯಾ ಗೌಡ ಅವರು ನೇರವಾಗಿ ಹೇಳಿಕೊಂಡಿದ್ದರು. ಈಗ ಭವ್ಯಾ ಗೌಡ ಅವರಿಗೆ ಪತ್ರ ಬರೆದು ತಮ್ಮ ಮನದಾಳದ ಮಾತನ್ನು ತ್ರಿವಿಕ್ರಂ ಅವರು ಹೇಳಿಕೊಂಡಿದ್ದಾರೆ. ಜನವರಿ 22ರ ಎಪಿಸೋಡ್ ಸಾಕಷ್ಟು ಗಮನ ಸೆಳೆದಿದೆ.
ಬಿಗ್ ಬಾಸ್ನಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಈ ಚಟುವಟಿಕೆ ಪ್ರಕಾರ ಬಿಗ್ ಬಾಸ್ನಲ್ಲಿ ಸ್ಪರ್ಧಿಗಳು ಎಲ್ಲಾ ಸ್ಪರ್ಧಿಗಳಿಗೆ ಪತ್ರ ಬರೆದು ಒಳ್ಳೆಯ ಮಾತುಗಳನ್ನು ಹೇಳಬೇಕು. ಇದಕ್ಕಾಗಿ ರೆಸಾರ್ಟ್ ಮಾದರಿಯ ಸೆಟ್ ಕೂಡ ಹಾಕಿದ್ದರು ಬಿಗ್ ಬಾಸ್. ಅಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ಭವ್ಯಾ ಅವರಿಗೆ ತ್ರಿವಿಕ್ರಂ ಪತ್ರ ಬರೆದಿದ್ದಾರೆ.
‘ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು.. ಸಾಧನೆಗಳ ಚೀಲವನ್ನು ನೀರು ಕುಡಿದಷ್ಟೇ ಸಲೀಸಾಗಿ ಹೊತ್ತು ಸಾಗುತ್ತಿರುವ ಸ್ಮಾಲ್ ಸಾಧಕಿ ನೀನು. ಕಷ್ಟ ಎಂಬ ಕೆಸರಿನಲ್ಲಿ ಅರಳಿದ ಕಮಲ ನೀನು. ತಂದೆ-ತಾಯಿಗೆ ಗಂಡು ಮಗ ನೀನು. ಗೆಳೆಯರಿಗೆ ರೌಡಿ ಬೇಬಿ ನೀನು. ಕನ್ನಡಿಗರ ಮನ ಗೆದ್ದ ಗೀತಾ ನೀನು. ಜಗತ್ತು ಬೇಕಾದ್ದು ಹೇಳಲಿ, ನನ್ನ-ನಿನ್ನ ಗೆಳೆತನ ಕಲುಷಿತವಾಗದಿರಲಿ. ಯಾರು ಏನಾದರೂ ಹೇಳಿಕೊಳ್ಳಲಿ, ಐ ಲವ್ ಯೂ ಪನ್ನಿ ಕುಟ್ಟಿ’ ಎಂದು ತ್ರಿವಿಕ್ರಂ ಪತ್ರದಲ್ಲಿ ಹೇಳಿದ್ದಾರೆ.
ಈ ಪತ್ರ ನೋಡಿದ ಭವ್ಯಾ ಅವರು ಸಖತ್ ಖುಷಿಪಟ್ಟರು. ‘ಇಷ್ಟು ದಿನ ಎಲ್ಲಿದ್ರಿ’ ಎಂದು ನೇರವಾಗಿ ಕೇಳಿದರು. ಇದೆಲ್ಲ ವೋಟ್ ಪಡೆಯಲು ಮಾಡಿದ ತಂತ್ರ ಎಂದು ಹನುಮಂತಗೆ ಅನ್ನಿಸಿರಬಹುದು. ಇದಕ್ಕಾಗಿ ಅವರು, ‘ಏನ್ ಆಡ್ತಾರಿ ಆಟಾನ’ ಎಂದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.
ಭವ್ಯಾ ಗೌಡಗೆ ಮೊದಲು ತ್ರಿವಿಕ್ರಂ ಅವರನ್ನು ನೋಡಿದಾಗ ಈ ವ್ಯಕ್ತಿ ಸಖತ್ ಒರಟ ಎಂದುಕೊಂಡಿದ್ದರಂತೆ. ಆದರೆ, ದಿನ ಕಳೆದಂತೆ ಅವರ ಜೊತೆಯೇ ಒಳ್ಳೆಯ ಬಾಂಡಿಂಗ್ ಬೆಳೆಯಿತು. ‘ನನ್ನ ಮಗಳಿಗೆ ಅಪ್ಪ ಆಗಿ, ಅಮ್ಮ ಆಗಿ ನೀನು ಉಳಿದಿದ್ದೀಯಾ’ ಎಂದು ಭವ್ಯಾ ಅವರ ಅಮ್ಮ ತ್ರಿವಿಕ್ರಂಗೆ ಹೇಳಿದ್ದರು.
ಇದನ್ನೂ ಓದಿ: ‘ನೀನು ಮಾಡೋ ಡವ್ ಸೂಪರ್’; ಭವ್ಯಾಗೆ ಓಪನ್ ಆಗಿ ಕಾಲೆಳೆದ ಹನುಮಂತ
ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಈಗ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇದು ಬಿಗ್ ಬಾಸ್ ಪೂರ್ಣಗೊಂಡ ಬಳಿಕವೂ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.