ಬಿಗ್ ಬಾಸ್ ಮನೆಯ ಎಲ್ಲ ನಿಯಮ ಮುರಿಯುತ್ತೇನೆ: ಮತ್ತೆ ಚೈತ್ರಾ ಉದ್ಧಟತನ ಶುರು
ಬಿಗ್ ಬಾಸ್ ಮನೆಯಲ್ಲಿನ ಕೆಲವು ಪ್ರಮುಖ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಚೈತ್ರಾ ಅವರಿಗೆ ಈ ಮೊದಲು ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಚೈತ್ರಾ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈಗ ಮತ್ತೆ ಅವರು ನಿಯಮಗಳನ್ನು ಮುರಿಯುತ್ತೇನೆ ಎಂದು ಹೇಳಿದ್ದಾರೆ. ವೀಕೆಂಡ್ನಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.
ಮೂರನೇ ಬಾರಿಗೆ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಜೈಲು ಸೇರಿದ್ದಾರೆ. ಅವರ ಆಟ ಕಳಪೆ ಆಗಿದೆ ಎಂಬ ಅಭಿಪ್ರಾಯ ಬೇರೆ ಸ್ಪರ್ಧಿಗಳಿಂದ ಬಂದಿದೆ. ಕೇವಲ ಮಾತಿನ ಬಲದಿಂದ ಎಲ್ಲರನ್ನೂ ಗೆಲ್ಲಬಹುದು ಎಂದುಕೊಂಡಿರುವ ಚೈತ್ರಾ ಅವರ ತಂತ್ರಗಾರಿಕೆ ಸರಿಯಾಗಿ ವರ್ಕ್ ಆಗುತ್ತಿಲ್ಲ. ಆ ಕಾರಣದಿಂದಲೇ ಅವರನ್ನು ಪದೇಪದೇ ಕಳಪೆ ಸ್ಥಾನಕ್ಕೆ ತಂದು ಕೂರಿಸಲಾಗುತ್ತಿದೆ. ಈ ರೀತಿ ಕಳಪೆ ಪಟ್ಟ ಸಿಕ್ಕಾಗ ಚೈತ್ರಾ ಇನ್ನೂ ಜೋರಾಗಿ ಜಗಳ ಮಾಡುತ್ತಾರೆ. ಡಿಸೆಂಬರ್ 13ರ ಸಂಚಿಕೆಯಲ್ಲಿ ಕೂಡ ಅದೇ ರೀತಿ ಆಗಿದೆ.
ಈ ವಾರ ಯಾರು ಕಳಪೆ ಯಾರು ಉತ್ತಮ ಎಂಬುದನ್ನು ನಿರ್ಧರಿಸುವಾಗ ಮಾತಿನ ಚಕಮಕಿ ನಡೆದಿದೆ. ಈ ವಾರ ತಾವು ಕಳಪೆ ಆಗಬಾರದು ಎಂದು ಚೈತ್ರಾ ಅವರು ತುಂಬ ಪ್ರಯತ್ನಿಸಿದ್ದರು. ಆದರೆ ಅವರಿಗೆ ಈ ವಾರ ಕೂಡ ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹನುಮಂತ, ತ್ರಿವಿಕ್ರಮ್, ಮಂಜು ಮತ್ತು ಭವ್ಯಾ ಅವರು ಚೈತ್ರಾಗೆ ಕಳಪೆ ನೀಡಿದ್ದಾರೆ. ಆದ್ದರಿಂದ ಚೈತ್ರಾ ಜೈಲು ಸೇರುವುದು ಅನಿವಾರ್ಯ ಆಯಿತು.
ಚೈತ್ರಾ ರೀತಿಯತೇ ತ್ರಿವಿಕ್ರಮ್ ಅವರಿಗೆ ನಾಲ್ಕು ಜನರಿಂದ ಕಳಪೆ ಎಂಬ ಅಭಿಪ್ರಾಯ ಬಂತು. ಹಾಗಾಗಿ ಚೈತ್ರಾ ಜೊತೆ ತ್ರಿವಿಕ್ರಮ್ ಕೂಡ ಜೈಲು ಸೇರಿದರು. ಇಬ್ಬರಿಗೂ ಪರಸ್ಪರ ಕಂಡರೆ ಆಗುವುದಿಲ್ಲ. ಆದರೆ ಜೈಲಿನ ಕೋಣೆಯನ್ನು ಹಂಚಿಕೊಳ್ಳುವ ಅನಿವಾರ್ಯ ಸಂದರ್ಭ ಎದುರಾಯಿತು. ಚೈತ್ರಾ ಮತ್ತು ತ್ರಿವಿಕ್ರಮ್ ಜೈಲಿಗೆ ಹೋದಾಗ ಇನ್ನುಳಿದ ಸದಸ್ಯರು ಬಂದು ಅಲ್ಲಿ ಮಾತನಾಡುತ್ತಿದ್ದರು. ಅದರಿಂದ ಚೈತ್ರಾ ಅವರಿಗೆ ಕಿರಿಕಿರಿ ಆಯಿತು.
ಇದನ್ನೂ ಓದಿ: ‘ಆಟಕ್ಕೆ ಅವಕಾಶ ಕೊಡಲ್ಲ’; ಗೌತಮಿ ತಂಡ ಸೇರಿ ಗಳಗಳನೆ ಅತ್ತ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ ಲೈಟ್ ಆಫ್ ಆಗುವುದಕ್ಕೂ ಮುನ್ನ ಯಾರೂ ಕೂಡ ಮಲಗುವಂತಿಲ್ಲ. ಆದರೆ ಚೈತ್ರಾ ಅವರು ಜೈಲಿನಲ್ಲಿ ಮಲಗಿದ್ದಾರೆ. ಅದನ್ನು ಕ್ಯಾಪ್ಟನ್ ಸುರೇಶ್ ಅವರು ಪ್ರಶ್ನೆ ಮಾಡಿದ್ದಕ್ಕೆ, ‘ನಾನು ಬಿಗ್ ಬಾಸ್ ಮನೆಯ ಎಲ್ಲ ನಿಯಮ ಮುರಿಯುತ್ತೇನೆ’ ಎಂದು ಚೈತ್ರಾ ಉದ್ಧಟತನ ತೋರಿದ್ದಾರೆ. ಅಲ್ಲದೇ, ಶಿಕ್ಷೆ ಮುಗಿಯುವುದಕ್ಕೂ ಮುನ್ನ ಅವರು ಜೈಲಿನಿಂದ ಹೊರಗೆ ಬರಲು ಪ್ರಯತ್ನಿಸಿದ್ದಾರೆ ಎಂಬ ರೀತಿಯಲ್ಲಿ ಡಿ.14ರ ಸಂಚಿಕೆಯ ಪ್ರೋಮೋ ಕೂಡ ತೋರಿಸಲಾಗಿದೆ. ಮುಂದೇನಾಗಲಿದೆ? ಈ ವಾರು ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದಕ್ಕೆ ಭಾನುವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.