ಇಡೀ ಮನೆಗೆ ಕಣ್ಣೀರು ತರಿಸಿದ ಶಾಕಿಂಗ್ ಎಲಿಮಿನೇಷನ್; ಇದನ್ನು ಯಾರೂ ಊಹಿಸಿರಲಿಲ್ಲ
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಎಲಿಮಿನೇಟ್ ಆಗಬೇಕು ಎಂದು ಬಹುತೇಕ ಎಲ್ಲರೂ ಬಯಸಿದ್ದರು. ಆದರೆ ಬಿಗ್ ಬಾಸ್ ತೆಗೆದುಕೊಳ್ಳುವ ಕಠಿಣ ನಿರ್ಧಾರದ ಬಗ್ಗೆ ಯಾರಿಗೂ ಊಹೆ ಇರಲಿಲ್ಲ. ಜಗದೀಶ್ ಮಾತ್ರವಲ್ಲದೇ ಅವರ ಜೊತೆ ರಂಜಿತ್ ಅವರನ್ನೂ ಎಲಿಮಿನೇಟ್ ಮಾಡಲಾಗಿದೆ. ಇಬ್ಬರೂ ಕೂಡ ಮನೆಯ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಈ ಕ್ರಮ ಕೈಕೊಳ್ಳಲಾಗಿದೆ.
ಜಗದೀಶ್ ಅವರಿಂದ ಇಡೀ ಬಿಗ್ ಬಾಸ್ ಮನೆಯ ವಾತಾವರಣ ಹಾಳಾಯಿತು. ಬೇಕು ಬೇಕಂತಲೇ ಅವರು ಜಗಳ ಮಾಡುತ್ತಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೂ ಅವರು ಅವಾಚ್ಯ ಶಬ್ಧಗಳನ್ನು ಬಳಸಿದ್ದರು. ಆದರೆ ಅದೆಲ್ಲವನ್ನೂ ಮೀರಿ ಅವರು ಮಹಿಳೆಯರ ಬಗ್ಗೆ ಕೀಳು ಮಟ್ಟದ ಪದಬಳಕೆ ಮಾಡಿದ್ದನ್ನು ಬಿಗ್ ಬಾಸ್ ಸಹಿಸಿಕೊಂಡಿಲ್ಲ. ಕೂಡಲೇ ಅವರನ್ನು ದೊಡ್ಮನೆಯಿಂದ ಹೊರಗೆ ಕಳಿಸಲಾಗಿದೆ. ಜಗದೀಶ್ ಎಲಿಮಿನೇಟ್ ಆಗಿದ್ದಕ್ಕೆ ಎಲ್ಲರಿಗೂ ಖುಷಿ ಆಯಿತು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಕೂಡಲೇ ಬಿಗ್ ಬಾಸ್ ಮತ್ತೊಂದು ಶಾಕ್ ನೀಡಿದರು.
ಮಹಿಳಾ ಸದಸ್ಯರ ಬಗ್ಗೆ ಜಗದೀಶ್ ಅವರು ಅವಾಚ್ಯ ಪದಗಳಲ್ಲಿ ಮಾತನಾಡಿದಾಗ ರಂಜಿತ್ ಅವರು ಉಗ್ರ ರೂಪ ತಾಳಿದ್ದರು. ಜಗಳ ಮಾಡುವ ಭರದಲ್ಲಿ ಅವರು ದೈಹಿಕವಾಗಿ ಹಲ್ಲೆಗೆ ಮುಂದಾಗಿದ್ದರು. ಜಗದೀಶ್ ಅವರನ್ನು ರಂಜಿತ್ ತಳ್ಳಿದ್ದರು. ಇದರಿಂದಾಗಿ ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘನೆ ಆಯಿತು. ಹಾಗಾಗಿ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು.
ರಂಜಿತ್ ಕೂಡ ಮುಖ್ಯದ್ವಾರದಿಂದ ಕೂಡಲೇ ಮನೆಯಿಂದ ಹೊರಗೆ ಬರಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದಾಗ ಎಲ್ಲರಿಗೂ ಶಾಕ್ ಆಯಿತು. ದಯವಿಟ್ಟು ರಂಜಿತ್ ಅವರನ್ನು ಎಲಿಮಿನೇಟ್ ಮಾಡಬೇಡಿ ಎಂದು ಎಲ್ಲರೂ ಬೇಡಿಕೊಂಡರು. ರಂಜಿತ್ ಅವರ ಉದ್ದೇಶ ಕೆಟ್ಟದ್ದಾಗಿರಲಿಲ್ಲ ಎಂದು ಎಲ್ಲರೂ ಸಮರ್ಥನೆ ನೀಡಿದರೂ ಕೂಡ ಬಿಗ್ ಬಾಸ್ ಅದನ್ನು ಒಪ್ಪಿಕೊಳ್ಳಲಿಲ್ಲ. ಮುಖ್ಯದ್ವಾರ ಓಪನ್ ಆಯಿತು. ಎಲ್ಲರಿಗೂ ವಿದಾಯ ಹೇಳಿ ರಂಜಿತ್ ಅವರು ಹೊರಗೆ ನಡೆದರು.
ಇದನ್ನೂ ಓದಿ: ‘ಬಿಗ್ ಬಾಸ್ನ ಮಿಸ್ ಮಾಡಿಕೊಳ್ಳುತ್ತೇನೆ’; ದೊಡ್ಮನೆಯಿಂದ ಹೊರ ಬಂದ ಜಗದೀಶ್ ಮೊದಲ ರಿಯಾಕ್ಷನ್
ಮಾನಸಾ ಅವರು ಬಿಕ್ಕಿ ಬಿಕ್ಕಿ ಅತ್ತರು. ರಂಜಿತ್ ಅವರ ಸ್ನೇಹಿತ ತ್ರಿವಿಕ್ರಮ್ ಕೂಡ ಸಿಕ್ಕಾಪಟ್ಟೆ ಕಣ್ಣೀರು ಹಾಕಿದರು. ಗೌತಮಿ ಜಾಧವ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಭವ್ಯಾ ಸೇರಿದಂತೆ ಅನೇಕರು ಗಳಗಳನೆ ಅಳಲು ಶುರು ಮಾಡಿದರು. ರಂಜಿತ್ ಅವರ ಎಲಿಮಿನೇಷನ್ನಿಂದ ಇಡೀ ಮನೆಗೆ ಮಂಕು ಕವಿದಂತೆ ಆಯಿತು. ಒಂದು ರಾತ್ರಿ ಕಳೆದ ನಂತರವೂ ಹಂಸಾ ಅವರ ಕಣ್ಣೀರು ನಿಲ್ಲಲಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಏನು ಮಾತನಾಡುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.