ಆರ್ಯವರ್ಧನ್-ಅನು ಮದುವೆಗೆ ಮೊದಲು ಇದ್ದ ಪ್ಲ್ಯಾನ್ ಬೇರೆ; ಆ ಕನಸಿಗೆ ಕಲ್ಲು ಹಾಕಿದ್ದು ಯಾರು?
Jothe Jotheyali Kannada Serial: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೊತೆ ಜೊತೆಯಲಿ ಧಾರಾವಾಹಿಯ ಮದುವೆ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿತ್ತು. ಆದರೆ ಅದಕ್ಕೊಂದು ಅಡ್ಡಿ ಉಂಟಾಯಿತು.
ಕನ್ನಡ ಕಿರುತೆರೆ ಲೋಕದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಸಖತ್ ಜನಪ್ರಿಯವಾಗಿದೆ. ಈಗಂತೂ ಈ ಸೀರಿಯಲ್ನಲ್ಲಿ ಮದುವೆ ಸಂಭ್ರಮ ಕಳೆಕಟ್ಟಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿವಾಹ ಸಮಾರಂಭವನ್ನು ಚಿತ್ರೀಕರಿಸಲಾಗುತ್ತಿದೆ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಸಡಗರಕ್ಕಾಗಿ ಭಾರಿ ಹಣ ಖರ್ಚಾಗುತ್ತಿದೆ. ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ಹಾಗೂ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಮಿಂಚುತ್ತಿದ್ದಾರೆ. ಈಗೇನೋ ಈ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ ನಿಜ. ಆದರೆ ಧಾರಾವಾಹಿ ತಂಡದ ಪ್ಲ್ಯಾನ್ ಬೇರೆಯೇ ಆಗಿತ್ತು. ಕಾರಣಾಂತರಗಳಿಂದ ಅದು ಕ್ಯಾನ್ಸಲ್ ಆಯಿತು.
ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮದುವೆ ದೃಶ್ಯದ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲು ಧಾರಾವಾಹಿ ಟೀಮ್ ಯೋಜನೆ ಹಾಕಿಕೊಂಡಿತ್ತು. ರಿಯಲ್ ಲೈಫ್ನಲ್ಲಿ ಅನೇಕ ಸೆಲೆಬ್ರಿಟಿಗಳು ವಿದೇಶದಲ್ಲಿ ಮದುವೆಯಾಗಿ ವೈಭವ ಮೆರೆದ ಉದಾಹಣೆ ಇದೆ. ‘ಜೊತೆ ಜೊತೆಯಲಿ’ ಸೀರಿಯಲ್ನಲ್ಲೂ ಅಂಥ ವೈಭವ ತೋರಿಸಬೇಕು ಎಂಬ ಆಲೋಚನೆ ಇತ್ತು. ಅದಕ್ಕೆ ಅಡ್ಡಿ ಉಂಟು ಮಾಡಿದ್ದು ಕೊರೊನಾ!
ಎರಡನೇ ಅಲೆಯ ಕಾರಣಕ್ಕೆ ಲಾಕ್ಡೌನ್ ಜಾರಿ ಆಗಿದ್ದರಿಂದ ವಿದೇಶದಲ್ಲಿ ಆರ್ಯವರ್ಧನ್ ಮತ್ತು ಅನು ಮದುವೆಯನ್ನು ಚಿತ್ರೀಕರಿಸಬೇಕು ಎಂಬ ಐಡಿಯಾವನ್ನು ಧಾರಾವಾಹಿ ತಂಡ ಕೈ ಬಿಡಬೇಕಾಯಿತು. ಹಾಗಿದ್ದರೂ ಈ ಮದುವೆಯ ಅದ್ದೂರಿತನಕ್ಕೆ ಏನೂ ಕೊರತೆ ಆಗಿಲ್ಲ. ರಾಜವೈಭೋಗದ ರೀತಿಯಲ್ಲಿ ವಿವಾಹ ಸಮಾರಂಭ ನಡೆಯುತ್ತಿದೆ.
ಅರೂರು ಜಗದೀಶ್ ನಿರ್ದೇಶನ ಮಾಡುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಅನು ಸಿರಿಮನೆ ಮತ್ತು ಆರ್ಯವರ್ಧನ್ ಮದುವೆ ಆಗುತ್ತಾರೋ ಇಲ್ಲವೋ ಎಂಬ ಕುತೂಹಲ ಹಲವು ದಿನಗಳಿಂದ ವೀಕ್ಷಕರನ್ನು ಕಾಡುತ್ತಿತ್ತು. ಅಂತೂ ಇಬ್ಬರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನೆರವೇರುತ್ತಿದೆ. ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.
ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆಯ ಸೆಟ್ ಹಾಕಲಾಗಿದೆ. ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ದಾರಿಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಲಾಗಿದೆ. ನೂರಾರು ವಾದ್ಯಗಳನ್ನು ನುಡಿಸಲಾಗುತ್ತಿದೆ. ನಿಜವಾದ ಮದುವೆಯೂ ಕೂಡ ಇಷ್ಟು ಸಡಗರದಲ್ಲಿ ನಡೆಯುವುದು ಅನುಮಾನ ಎಂಬ ರೀತಿಯಲ್ಲಿ ಅದ್ದೂರಿತನ ಮೆರೆಯಲಾಗುತ್ತಿದೆ. ಅನು ಮತ್ತು ಆರ್ಯವರ್ಧನ್ ಮದುವೆ ಸಂಚಿಕೆಗಳು ಮನ ಸೆಳೆಯುತ್ತಿವೆ.
ಇದನ್ನೂ ಓದಿ:
ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ ವಿಷ್ಣುವರ್ಧನ್ ಅಳಿಯ ಅನಿರುದ್ಧ್