‘ಕನ್ನಡತಿ’ ಧಾರಾವಾಹಿ (Kannadathi Serial) ಕಥಾನಾಯಕ ಹರ್ಷನ ಪಾತ್ರಕ್ಕೆ ಹಲವು ಶೇಡ್ಗಳಿವೆ. ಆತ ಕೆಲವೊಮ್ಮೆ ಪ್ರೇಮಿಯಾಗಿ, ಕೆಲವೊಮ್ಮೆ ಮುಂಗೋಪಿಯಾಗಿ, ಕೆಲವೊಮ್ಮೆ ಮುಗ್ಧ ಮಗುವಿನಂತೆ ವರ್ತಿಸುತ್ತಾನೆ. ಹರ್ಷ ಏನನ್ನಾದರೂ ನಿಯಂತ್ರಿಸುತ್ತಾನೆ, ಆದರೆ ತನ್ನದೇ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳೋಕೆ ಆತನಿಗೆ ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ರತ್ನಮಾಲಾಗೆ ಬೇಸರವಿದೆ. ಈಗ ಒಂದು ಘಟನೆಯಿಂದ ರತ್ನಮಾಲಾ ಮೌನಕ್ಕೆ ಜಾರಿದ್ದಾಳೆ. ಹರ್ಷ (Harsha) ನಡೆದುಕೊಂಡ ರೀತಿಗೆ ಅಮ್ಮಮ್ಮ ತೀವ್ರವಾಗಿ ಬೇಸರಗೊಂಡಿದ್ದಾಳೆ. ಮುಂದೆ ಧಾರಾವಾಹಿಯಲ್ಲಿ ಇದು ಪ್ರಮುಖ ತಿರುವಾಗಬಹುದು.
ಈ ವಾರ ನಡೆದ ಹಲವು ಘಟನೆಗಳಿಂದ ರತ್ನಮಾಲಾ ಮನೆ ಅಲ್ಲೋಲ ಕಲ್ಲೋಲವಾಗಿದೆ. ಭುವಿಯನ್ನು ಕೆಲಸದಿಂದ ತೆಗೆಸೋಕೆ ಸಾನಿಯಾ ಪ್ಲ್ಯಾನ್ ಮಾಡಿ ಯಶಸ್ಸು ಕಂಡಿದ್ದಳು. ಆದರೆ, ಈ ಯೋಜನೆಯನ್ನು ತಲೆಕೆಳಗೆ ಮಾಡಿದ್ದು ಹರ್ಷ. ಆತ ಸಾನಿಯಾಳ ನಡೆಯನ್ನು ಲೆಕ್ಕಾಚಾರ ಹಾಕಿ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಆಕೆಯನ್ನು ಬೆದರಿಸಿ ಸತ್ಯವನ್ನು ಬಾಯಿ ಬಿಡಿಸಿದ್ದಾನೆ. ಈ ವೇಳೆ ಆತ ನಡೆದುಕೊಂಡ ರೀತಿ ಅಮ್ಮಮ್ಮನಿಗೆ ಇಷ್ಟ ಆಗಿಲ್ಲ.
ರತ್ನಮಾಲಾ ಮನೆಯಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ಗನ್ ಹಿಡಿದು ಎಂಟ್ರಿ ಕೊಟ್ಟ ಹರ್ಷ ನೇರವಾಗಿ ಸಾನಿಯಾ ಎದುರು ಬಂದಿದ್ದಾನೆ. ಆಕೆಗೆ ಗನ್ ತೋರಿಸಿ ಅಸಲಿ ವಿಚಾರ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ಜತೆಗೆ ಗೋಡೆಗೆ ಒಂದು ಬುಲೆಟ್ ಫೈರ್ ಮಾಡಿದ್ದಾನೆ. ಇದರಿಂದ ಬೆದರಿದ ಸಾನಿಯಾ ಸತ್ಯ ಒಪ್ಪಿಕೊಂಡಿದ್ದಾಳೆ. ಇದೇ ಸಮಯಕ್ಕೆ ಪತ್ರಕರ್ತೆ ಒಬ್ಬಳು ರತ್ನಮಾಲಾ ಸಂದರ್ಶನ ಮಾಡಲು ಈ ಮನೆಗೆ ಬಂದಿದ್ದಳು. ಅವಳು ಈ ಘಟನೆಯನ್ನು ಶೂಟ್ ಮಾಡಿಕೊಂಡಿದ್ದಾಳೆ. ಜತೆಗೆ ಹರ್ಷನಿಗೆ ಬೆದರಿಕೆ ಒಡ್ಡಿದ್ದಾಳೆ.
‘ಗುಂಡು ಹಾರಿಸಿದ್ದು ಏಕೆ? ಈ ರೀತಿ ನಡೆದುಕೊಳ್ಳಲು ಕಾರಣ ಏನು? ಆಸ್ತಿ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದೀರಾ’ ಎಂಬಿತ್ಯಾದಿ ಪ್ರಶ್ನೆಗಳನ್ನು ಹರ್ಷನನ್ನು ಜರ್ನಲಿಸ್ಟ್ ಕೇಳಿದ್ದಾಳೆ. ಇದಕ್ಕೆ ಸಿಟ್ಟಾದ ಹರ್ಷ ಕ್ಯಾಮೆರಾ ಹಿಡಿದು ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ತಳ್ಳಿದ್ದಾನೆ. ‘ನೀವು ಇದಕ್ಕೆ ತಕ್ಕ ಶಾಸ್ತಿ ಅನುಭವಿಸುತ್ತೀರಾ’ ಎಂಬ ಬೆದರಿಕೆ ಒಡ್ಡಿ ಜರ್ನಲಿಸ್ಟ್ ಸ್ಥಳದಿಂದ ತೆರಳಿದ್ದಾಳೆ. ಇಷ್ಟಾದರೂ ಹರ್ಷನಿಗೆ ತಾನು ಮಾಡಿದ ತಪ್ಪು ಎಷ್ಟು ದೊಡ್ಡದು ಎಂಬುದು ಅರಿವಾಗಲೇ ಇಲ್ಲ.
ರತ್ನಮಾಲಾಗೆ ಈ ಘಟನೆ ಬೇಸರ ತಂದಿದೆ. ಏನೇ ಮಾಡಿದರೂ ಹರ್ಷ ಬದಲಾಗುವುದಿಲ್ಲ ಎಂಬುದು ಆಕೆಗೆ ಸಾಬೀತಾಗಿದೆ. ಹೀಗಾಗಿ, ಆತನ ಜತೆ ಮಾತನಾಡದೆ ಇರುವು ನಿರ್ಧಾರಕ್ಕೆ ಬಂದಿದ್ದಾಳೆ. ‘ಪದೇ ಪದೇ ತಪ್ಪು ಮಾಡುವವಳು ಸಾನಿಯಾ. ಆದರೆ, ಪ್ರತಿ ಬಾರಿ ಶಿಕ್ಷೆ ನನಗೆ. ಯಾವಾಗಲೂ ಹರ್ಷ ಮಾಡೋದೆ ತಪ್ಪು. ನಿನಗೆ ನಾನು ಮಾಡಿದ್ದು ಯಾವಾಗಲೂ ತಪ್ಪು ಎಂದೇ ಅನಿಸುತ್ತದೆ’ ಎಂದು ಅಸಮಾಧಾನ ಹೊರಹಾಕಿದ್ದಾನೆ ಹರ್ಷ. ಇದಕ್ಕೆ ಬೇಸರದಿಂದ ಉತ್ತರಿಸಿದ ರತ್ನಮಾಲಾ, ‘ನೀನು ಬದಲಾಗುತ್ತೀಯಾ ಎಂದು ನಾನು ಭಾವಿಸಿದ್ದೆ. ಆದರೆ, ಅದು ಪದೇ ಪದೇ ಸುಳ್ಳಾಗುತ್ತಿದೆ. ನಾನು ಸಾಯುವುದಕ್ಕೂ ಮೊದಲೂ ಇಡೀ ಮನೆ ಖುಷಿಯಿಂದ ನಗುನಗುತ್ತಾ ಇರುವ ಫೋಟೋ ನೋಡಬೇಕು ಎಂದುಕೊಂಡಿದ್ದೆ. ಆದರೆ, ಆ ಫೋಟೋ ನೋಡುವುದಕ್ಕೂ ಮೊದಲು ನನ್ನ ಹೆಣವೇ ಬೀಳುತ್ತದೆ’ ಎಂದು ರತ್ನಮಾಲಾ ಬೇಸರಗೊಂಡಿದ್ದಾಳೆ.
ಇದನ್ನೂ ಓದಿ: ‘ಸುಳ್ಳು ಆರೋಪ ಮಾಡಿ ಭುವಿಯನ್ನು ಕೆಲಸದಿಂದ ತೆಗೆಸಿದ್ದು ನಾನೇ’; ಕೊನೆಗೂ ತಪ್ಪು ಒಪ್ಪಿಕೊಂಡ ಸಾನಿಯಾ
ಕ್ಷಮೆ ಕೇಳಿದ ಸಾನಿಯಾ
ಭುವಿಯನ್ನು ಕೆಲಸದಿಂದ ತೆಗೆಸಿದ್ದು ಸಾನಿಯಾ. ಈ ಕಾರಣಕ್ಕೆ ಆಕೆ ಭುವಿಯ ಬಳಿ ತೆರಳಿ ಕ್ಷಮೆ ಕೇಳಿದ್ದಾಳೆ. ಆದರೆ, ಭುವಿ ಇದನ್ನು ಒಪ್ಪಿಲ್ಲ. ‘ನೀವು ಮಾಡಿದ್ದು ತಪ್ಪು’ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ.