ಟಿವಿಯಲ್ಲೂ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’; ಜೀ ಕನ್ನಡದಲ್ಲಿ ಪ್ರಸಾರ

ಥಿಯೇಟರ್, ಒಟಿಟಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಕೂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಬ್ಬರಿಸಿದೆ. ‘ಜೀ ಕನ್ನಡ’ದಲ್ಲಿ ಪ್ರಸಾರವಾದ ಈ ಸಿನಿಮಾವನ್ನು ಟಿವಿ ಪ್ರೇಕ್ಷಕರು ದಾಖಲೆ ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಒಟ್ಟು 11.56 ಟಿವಿಆರ್ ದಾಖಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಟಿವಿಯಲ್ಲೂ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’; ಜೀ ಕನ್ನಡದಲ್ಲಿ ಪ್ರಸಾರ
Rishab Shetty

Updated on: Feb 09, 2026 | 5:38 PM

‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿತು. ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ಈ ಸಿನಿಮಾ ಹಲವು ದಾಖಲೆಗಳನ್ನು ಬರೆಯಿತು. ಅಲ್ಲದೇ, ಕಿರುತೆರೆಯಲ್ಲಿ ಪ್ರಸಾರ ಆದಾಗಲೂ ಬ್ಲಾಕ್‌ ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ಆಯಿತು. ಅದರಲ್ಲಿ ಅತ್ಯುತ್ತಮ ಟಿಆರ್‌ಪಿ ಗಳಿಸಿದೆ. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2026ರ ಜನವರಿ 24ರಂದು ಸಂಜೆ 7 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಸಾರ ಆಯಿತು. ಈ ಪ್ರೀಮಿಯರ್​ನಿಂದ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಒಟ್ಟು 11.56 ಟಿವಿಆರ್ ದಾಖಲಿಸಿತು. ನಗರ ಪ್ರದೇಶದಲ್ಲಿ 9.30 ಟಿವಿಆರ್ ದಾಖಲಿಸಿದೆ. ಇದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ.

2025ರ ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ರಿಷಬ್ ಶೆಟ್ಟಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಿಸಿದ್ದಾರೆ.

‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಅರವಿಂದ್ ಎಸ್. ಕಶ್ಯಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಟಿವಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ ಮುಂದಿನ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚುವಂತಾಗಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ: ಪತ್ನಿ ಪ್ರಗತಿ ಶೆಟ್ಟಿಗೆ ಹೊಗಳಿಕೆಯ ಸುರಿಮಳೆ

ಟ್ರೇಡ್ ವಿಶ್ಲೇಷಕರ ಪ್ರಕಾರ, ಪ್ರೈಮ್-ಟೈಮ್‌ನಲ್ಲಿ ಕನ್ನಡ ಸಿನಿಮಾವೊಂದರ ಟೆಲಿವಿಷನ್ ಪ್ರೀಮಿಯರ್ ಈ ಮಟ್ಟದ ರೇಟಿಂಗ್ ಪಡೆಯುವುದು ಅಪರೂಪ. ಇದು ‘ಕಾಂತಾರ ಚಾಪ್ಟರ್ 1’ ಚಿತ್ರದ ಸಾಂಸ್ಕೃತಿಕ ಪ್ರಭಾವ ಮತ್ತು ಕಮರ್ಷಿಯಲ್ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಸಿನಿಮಾದಲ್ಲಿ ಇರುವ ಗಟ್ಟಿಯಾದ ಕಥಾಹಂದರವು ಕುಟುಂಬ ಸಮೇತರಾಗಿ ವೀಕ್ಷಿಸುವ ಪ್ರೇಕ್ಷಕರನ್ನು ಸೆಳೆದುಕೊಂಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us