KBC 14: ‘ನಿಮ್ಮದು ಕೆಟ್ಟ ಸಿನಿಮಾವಂತೆ’: ಅಭಿಮಾನಿಯ ನೇರ ಮಾತಿಗೆ ಅಮಿತಾಭ್ ನೀಡಿದ ಪ್ರತಿಕ್ರಿಯೆ ಏನು?
Amitabh Bachchan: ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ಬಂದ ಸ್ಪರ್ಧಿಯೊಬ್ಬರು ನೇರವಾಗಿ ಇಂಥ ಮಾತು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡು ಅಮಿತಾಭ್ ಬಚ್ಚನ್ ಅವರಿಗೆ ಶಾಕ್ ಆಗಿದೆ.
ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ನಿರೂಪಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅವರು ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಕಾರ್ಯಕ್ರಮವನ್ನು ಕೋಟ್ಯಂತರ ಮಂದಿ ನೋಡುತ್ತಾರೆ. ಅಮಿತಾಭ್ ಬಚ್ಚನ್ ಅವರು ಕಾರ್ಯಕ್ರಮ ನಡೆಸಿಕೊಡುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಈ ಕಾರ್ಯಕ್ರಮದ 14ನೇ ಸೀಸನ್ (KBC 14) ನಡೆಯುತ್ತಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳ ಜೊತೆ ಬಿಗ್ ಬಿ ಅವರು ತುಂಬ ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಾರೆ. ಈಗ ಅಮಿತಾಭ್ ಬಚ್ಚನ್ ಅವರ ಅಭಿಮಾನಿಯೊಬ್ಬರು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ ಹಾಟ್ ಸೀಟ್ನಲ್ಲಿ ಕುಳಿತು ‘ನಿಮ್ಮದು ಕೆಟ್ಟ ಸಿನಿಮಾವಂತೆ’ ಎಂದು ನೇರವಾಗಿ ಹೇಳಿದ್ದಾರೆ. ಅದಕ್ಕೆ ಅಮಿತಾಭ್ ಬಚ್ಚನ್ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ದೇಶದ ಮೂಲೆಮೂಲೆಯಿಂದ ಹಲವು ವ್ಯಕ್ತಿಗಳು ಬರುತ್ತಾರೆ. ಈ ವಾರ ಕೃಷ್ಣ ದಾಸ್ ಎಂಬುವವರು ಬಂದಿದ್ದಾರೆ. ಅವರ ಜೊತೆ ಅಮಿತಾಭ್ ನಡೆಸಿದ ಮಾತುಕಥೆ ಸಖತ್ ಫನ್ನಿ ಆಗಿದೆ. ಅದರ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
‘ನನ್ನ ಪತ್ನಿ ನನ್ನನ್ನು ಪ್ರೀತಿ ಮಾಡುವುದಿಲ್ಲ ಎನಿಸುತ್ತದೆ’ ಎಂದು ಕೃಷ್ಣ ದಾಸ್ ಹೇಳಿದರು. ‘ಹಾಗೆ ಯಾಕೆ ಅಂದುಕೊಳ್ಳುತ್ತೀರಿ’ ಅಂತ ಅಮಿತಾಭ್ ಪ್ರಶ್ನೆ ಮಾಡಿದರು. ‘ಯಾಕೆಂದರೆ, ನಾನು ನಿಮ್ಮ ಸಿನಿಮಾಗಳನ್ನು ನೋಡುವಾಗಲೆಲ್ಲ ನನ್ನ ಹೆಂಡತಿ ಬಂದು ಅಂದೆಂಥ ಕೆಟ್ಟ ಸಿನಿಮಾ ನೋಡ್ತಿದ್ದೀರಿ ಅಂತ ಕೇಳ್ತಾಳೆ’ ಎಂದು ಕೃಷ್ಣ ದಾಸ್ ಹೇಳಿದರು. ಈ ಮಾತು ಕೇಳಿ ಅಮಿತಾಭ್ ಬಚ್ಚನ್ ಅವರಿಗೆ ಶಾಕ್ ಆಗಿದೆ.
‘ಮೊದಲು ನನಗೆ ಈ ನಿಮ್ಮ ಮಾತನ್ನು ಅರಗಿಸಿಕೊಳ್ಳಲು ಬಿಡಿ. ನಾನು ಕೆಟ್ಟ ಸಿನಿಮಾ ಮಾಡ್ತೇನಾ’ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡ ಅಮಿತಾಭ್ ಬಚ್ಚನ್ ಅವರು ಹಣೆ ಚಚ್ಚಿಕೊಂಡರು. ಇವರಿಬ್ಬರ ನಡುವಿನ ಸಂಭಾಷಣೆ ಕೇಳಿ ವೀಕ್ಷಕರೆಲ್ಲರೂ ಬಿದ್ದು ಬಿದ್ದು ನಕ್ಕರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
View this post on Instagram
ಅಮಿತಾಭ್ ಬಚ್ಚನ್ ಅವರಿಗೆ ಈಗ 79 ವರ್ಷ ವಯಸ್ಸು. ಅಕ್ಟೋಬರ್ 11ರಂದು ಅವರು 80ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಈ ಪ್ರಾಯದಲ್ಲೂ ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಅನೇಕ ಸಿನಿಮಾಗಳು ಅವರ ಕೈಯಲ್ಲಿವೆ. ಅವರು ನಟಿಸಿರುವ ‘ಬ್ರಹ್ಮಾಸ್ತ್ರ’, ‘ಗುಡ್ಬೈ’ ಮುಂತಾದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Wed, 7 September 22