Lakshana Serial: ನಕ್ಷತ್ರಳ ಪ್ರಾಣಕ್ಕೆ ಕುತ್ತು ತರಲು ಡೆವಿಲ್ ಹೊಸ ಪ್ಲಾನ್, ಕಾಪಾಡಲು ಬಂದೇ ಬಿಟ್ಟ ಮೌರ್ಯ
Lakshana: ನಕ್ಷತ್ರಳ ಪ್ರಾಣ ತೆಗೆಯಲು ಡೆವಿಲ್ಲ ಹೊಸ ಪ್ಲಾನ್ ಮಾಡಿದ್ದಾಳೆ. ನಕ್ಷತ್ರಳನ್ನು ಸುತ್ತುವರಿದ ರೌಡಿಗಳು ನಕ್ಷತ್ರಳನ್ನು ಕೊಲ್ಲಲು ಮುಂದಾದಾಗ ಮೌರ್ಯ ಸ್ಥಳಕ್ಕೆ ಬಂದು ನಕ್ಷತ್ರಳನ್ನು ಕಾಪಾಡುತ್ತಾಳೆ.
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಕ್ಷತ್ರ ಅಮಾಯಕಿ ಆಕೆಯದ್ದು ಯಾವುದೇ ತಪ್ಪಿಲ್ಲ ಎಂದು ತಿಳಿದ ಮೌರ್ಯನಿಗೆ ಪಶ್ಚಾತಾಪದ ಭಾವನೆ ಮೂಡಿ ನಕ್ಷತ್ರಳನ್ನು ಕೊಲ್ಲುವ ನಿರ್ಧಾರವನ್ನು ಕೈ ಬಿಟ್ಟು ವಾಪಸ್ ಹೋಗುತ್ತಾನೆ. ಈ ಸಂಚಿಕೆಯಲ್ಲಿ ನಿನ್ನೆಯ ಮುಂದುವರಿದ ಭಾಗವಾಗಿ ಮೌರ್ಯ ಒಬ್ಬನೇ ಕುಳಿತುಕೊಂಡು ನಕ್ಷತ್ರ ತಪ್ಪು ಮಾಡದೇ ಇರಬಹುದು ಆದರೆ ಸಿ.ಎಸ್ ಮೋಸ ಮಾಡಿ ತಾನೆ ಭೂಪತಿಯೊಂದಿಗೆ ನಕ್ಷತ್ರಳ ಮದುವೆ ಮಾಡಿದ್ದು. ಇದು ತಪ್ಪು ಅಂದ ಮೇಲೆ ಅವನಿಗೆ ಶಿಕ್ಷೆ ನೀಡಲೇಬೇಕು ಎಂದು ಹೇಳುವಾಗ ಅವನ ಮನಸಾಕ್ಷಿಯೂ ಅವರು ಮಾಡಿರುವುದು ತಪ್ಪಾದರೇ ನಿನ್ನ ಅಮ್ಮ ಮಾಡಿರುವಂತಹದ್ದು ತಪ್ಪೇ ಅಲ್ವ.
ನಕ್ಷತ್ರಳನ್ನು ಕಾಪಾಡಿದ ಮೌರ್ಯ
ಆವತ್ತು ಮದುವೆ ದಿನ ನಿನ್ನನ್ನು ಉಳಿಸುವ ಸಲುವಾಗಿ ಮದುವೆ ನಿಲ್ಲಸುವ ಬ್ಲಾಕ್‌ಮೇಲ್ ಮಾಡ್ಲಿಲ್ವ. ಮಕ್ಕಳ ಖುಷಿಗಾಗಿ ಪ್ರತಿಯೊಬ್ಬ ತಂದೆ ತಾಯಿಯು ಸ್ವಾರ್ಥಿಗಳಾಗುತ್ತಾರೆ. ಅದರಲ್ಲಿ ತಪ್ಪು ಹುಡುಕಬಾರದು ಎಂದು ಮೌರ್ಯನ ಮನಸಾಕ್ಷಿ ಅವನಿಗೆ ಹೇಳುತ್ತದೆ. ಇದರಿಂದ ಇನ್ನಷ್ಟು ಬದಲಾಗಿ ಸೇಡಿನ ಜ್ವಾಲೆಯನ್ನು ಮನಸ್ಸಿನಿಂದ ಕಿತ್ತು ಹಾಕುತ್ತಾನೆ.
ಇನ್ನು ಈ ಕಡೆ ಬೆಳಗಾಗುತ್ತಿದ್ದಂತೆ ನಕ್ಷತ್ರ ಗಂಡನ ಮನೆಗೆ ಹೊರಡಲು ತಯಾರಿ ನಡೆಸುತ್ತಿರುತ್ತಾಳೆ. ಆ ಸಂದರ್ಭದಲ್ಲಿ ಭೂಪತಿ ಫೋನ್ ಮಾಡಿ ಮೌರ್ಯ ನಕ್ಷತ್ರಳ ಜೀವಕ್ಕೆ ಕುತ್ತು ತರುತ್ತಾನೆ ಎನ್ನುವ ಭಯದಿಂದ ನಾನೇ ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ನನಗೆ ಯಾವ ತೊಂದರೆಯೂ ಇಲ್ಲ. ನಾನು ಅಪ್ಪನ ಜೊತೆಗೆ ಬರುತ್ತೇನೆ ಎಂದು ನಕ್ಷತ್ರ ಹೇಳುತ್ತಾಳೆ. ಆಗ ಭೂಪತಿಯೊಂದಿಗೆ ಸಿ.ಎಸ್ ಮಾತನಾಡಿ ನಿನ್ನ ಹಾಗೂ ಶಕುಂತಳಾದೇವಿ ಜೊತೆಗೆ ಪರ್ಸನಲ್ ವಿಷಯ ಮಾತನಾಡ್ಲಿಕ್ಕೆ ಇದೆ ನೀವು ಇವತ್ತು ಫ್ರೀ ಇದ್ದೀರಾ ಎಂದು ಕೇಳುತ್ತಾರೆ. ನಾನಿವತ್ತು ಮನೆಯಲ್ಲೇ ಇದ್ದೇನೆ ಎಂದು ಹೇಳಿದಾಗ ಸಿ.ಎಸ್ ಮಗಳನ್ನು ಕರೆದುಕೊಂಡು ಭೂಪತಿಯ ಮನೆ ಕಡೆ ಹೊರಡುತ್ತಾರೆ. ಇವರು ಹೊರಟ ತಕ್ಷಣ ಭಾರ್ಗವಿ ಆಕೆಯ ಮಗಳಾದ ಮಿಲ್ಲಿಗೆ ಫೋನ್ ಮಾಡಿ ಸಿ.ಎಸ್ ಎದುರಿಗೆನೆ ನಕ್ಷತ್ರಳನ್ನು ನರಳಾಡುವಂತೆ ಮಾಡಲು ಒಂದು ಪ್ಲಾನ್ ಹೇಳುತ್ತಾಳೆ.
ಆ ಪ್ಲಾನ್ ಪ್ರಕಾರ ಮಿಲ್ಲಿಯು ಸಿ.ಎಸ್, ನಕ್ಷತ್ರ ಹೋಗುವ ದಾರಿ ಮಧ್ಯೆ ಸಾಲಗಿ ದೊಡ್ಡ ಕಲ್ಲುಗಳನ್ನು ಇಟ್ಟು ರೋಡ್ ಬ್ಲಾಕ್ ಮಾಡಿ ಅಲ್ಲಿ ಐದಾರೂ ರೌಡಿ ಹುಡುಗರನ್ನು ಇರಿಸುತ್ತಾಳೆ. ಕೆಲಸ ಮುಗಿದ ಮೇಲೆ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಮಿಲ್ಲಿ ಫೋನ್ ಕಟ್ ಮಾಡುತ್ತಾಳೆ. ನಕ್ಷತ್ರಳ ಕಥೆ ಇವತ್ತಿಗೆ ಮುಗಿಯುತ್ತದೆ ಎಂದು ಭಾರ್ಗವಿ ಅತೀವ ಖುಷಿಯಲ್ಲಿರುತ್ತಾಳೆ.
ಇದನ್ನು ಓದಿ; ಮೌರ್ಯನ ಮನ ಪರಿವರ್ತನೆ ಇನ್ನಾದರೂ ನಕ್ಷತ್ರಳನ್ನು ಅತ್ತಿಗೆಯೆಂದು ಒಪ್ಪಿಕೊಳ್ಳುತ್ತಾನಾ?
ಅಂತೂ ನಕ್ಷತ್ರ, ಸಿ.ಎಸ್ ಬರುವಾಗ ರೊಡ್ ಮಧ್ಯೆ ಕಲ್ಲು ಇಟ್ಟಿರುವುದನ್ನು ಗಮನಿಸಿ ಇದೆಲ್ಲಾ ಮೌರ್ಯನದ್ದೇ ಕೆಲಸ ಎಂದು ಭಾವಿಸಿ, ಇವನಿಗೆ ನನ್ನ ಮಾತಲ್ಲೇ ಬುದ್ಧಿ ಕಲಿಸುತ್ತೇನೆ ಎಂದು ಗನ್ ತೆಗೆದುಕೊಂಡು ಸಿ.ಎಸ್ ಕಾರ್‌ನಿಂದ ಇಳಿಯಲು ಪ್ರಯತ್ನಿಸುತ್ತಾರೆ. ಅದೇ ಸಮಯದಲ್ಲಿ ಮಿಲ್ಲಿ ನೇಮಿಸಿರುವ ರೌಡಿಗಳು ಬಂದು ಸಿ.ಎಸ್‌ನ್ನು ಕಟ್ಟಿ ಹಾಕಿ ನಕ್ಷತ್ರಳನ್ನು ಅಪಹರಿಸಲು ನೋಡುತ್ತಾರೆ. ಆಗ ಮಗಳನ್ನು ಕಾಪಾಡುವಂತಹ ಪರಿಸ್ಥಿತಿಯಲ್ಲಿರದ ಸಿ.ಎಸ್ ಮಗಳನ್ನು ಓಡಿ ಹೋಗುವಂತೆ ಹೇಳುತ್ತಾರೆ. ಅಪ್ಪನ ಮಾತಿಗೆ ಬೆಲೆ ಕೊಟ್ಟು ನಕ್ಷತ್ರ ಓಡಿ ಹೋಗುತ್ತಾಳೆ. ಅವಳ ಹಿಂದೆ ರೌಡಿಗಳು ಓಡಿ ಹೋಗಿ ಒಂದು ಖಾಲಿ ಪ್ರದೇಶದಲ್ಲಿ ಸುತ್ತುವರೆದು, ಅದರಲ್ಲೊಬ್ಬ ಚಾಕು ತೆಗೆದು ನಕ್ಷತ್ರಳ ಹೊಟ್ಟೆಗೆ ಚುಚ್ಚಲು ಬರುತ್ತಾನೆ. ಅದೇ ಸಮಯಕ್ಕೆ ಮೌರ್ಯ ಅಲ್ಲಿಗೆ ಬಂದು ರೌಡಿಗಳ ಜೊತೆ ಗುದ್ದಾಡಿ ನಕ್ಷತ್ರಳನ್ನು ಕಾಪಾಡುತ್ತಾನೆ.
ಇದನ್ನೆಲ್ಲಾ ನಕ್ಷತ್ರ ಆಶ್ಚರ್ಯದಿಂದ ನೋಡುತ್ತಾ ನಿಲ್ಲುತ್ತಾಳೆ. ಮೌರ್ಯ ನಕ್ಷತ್ರಳನ್ನು ಕಾಪಾಡಿ ನಮ್ಮ ಪ್ಲಾನ್ ಹಾಳಾಯಿತೆಂದು ಮಿಲ್ಲಿ ಭಾರ್ಗವಿಗೆ ಹೇಳುತ್ತಾಳೆ. ಮೌರ್ಯನ ಈ ವಿಚಿತ್ರ ನಡೆಯ ಬಗ್ಗೆ ಯೋಚಿಸುತ್ತಾ ನೀವು ಅಲ್ಲಿಂದ ತಕ್ಷಣ ಹೊರಟು ಬನ್ನಿ ಎಂದು ಮಿಲ್ಲಿಗೆ ಭಾರ್ಗವಿ ಆದೇಶ ಕೊಡುತ್ತಾಳೆ. ಡೆವಿಲ್ ಆದೇಶದಂತೆ ಅವರೆಲ್ಲರೂ ತಪ್ಪಿಸಿಕೊಂಡು ಬರುತ್ತಾರೆ. ಅಲ್ಲೇ ಇದ್ದ ನಕ್ಷತ್ರ ಮೌರ್ಯನ ಮುಖವನ್ನೇ ನೋಡುತ್ತಾ ನಿಂತು ಬಿಡುತ್ತಾಳೆ. ಬದಲಾದ ಮೌರ್ಯನಿಗೆ ಭೂಪತಿ ಮನೆಯವರ ಕ್ಷಮೆ ಸಿಗುತ್ತಾ ಎಂಬುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Thu, 15 December 22