‘ಕಿತ್ತೋಗಿರೋ ಪ್ರೋಗ್ರಾಂ’: ಬಿಗ್ ಬಾಸ್ಗೆ ಅವಮಾನ ಮಾಡಿದ ಲಾಯರ್ ಜಗದೀಶ್; ಕಾದಿದೆ ಗ್ರಹಚಾರ
ದೊಡ್ಮನೆಯೊಳಗೆ ಲಾಯರ್ ಜಗದೀಶ್ ಮಾತುಗಳು ಮಿತಿಮೀರಿವೆ. ಬಿಗ್ ಬಾಸ್ ಕ್ಯಾಮೆರಾದ ಎದುರು ನಿಂತುಕೊಂಡೇ ನಾಲಿಗೆ ಹರಿಬಿಟ್ಟಿದ್ದಾರೆ. ಇಡೀ ಕಾರ್ಯಕ್ರಮಕ್ಕೆ ಅವಮಾನ ಆಗುವ ರೀತಿಯಲ್ಲಿ ಪದ ಬಳಕೆ ಮಾಡಿದ್ದಾರೆ. ಅವರು ತೋರಿದ ಈ ಉದ್ಧಟತನಕ್ಕೆ ಖಂಡಿತಾ ಶಿಕ್ಷೆ ಆಗಲಿದೆ. ಕಿಚ್ಚ ಸುದೀಪ್ ತುಂಬ ಖಾರವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ದಟ್ಟವಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಆವೃತ್ತಿಯಲ್ಲಿ, ಯಾವುದೇ ಸ್ಪರ್ಧಿಯೂ ಈ ರೀತಿಯ ಮಾತುಗಳನ್ನು ಆಡಿರಲಿಲ್ಲ. ಅಷ್ಟು ಹೀನಾಯವಾಗಿ ಲಾಯರ್ ಜಗದೀಶ್ ಮಾತನಾಡಿದ್ದಾರೆ. ‘ಬಿಗ್ ಬಾಸ್ಗೆ ಬನ್ನಿ ಅಂತ ನೀವೇ ನನ್ನ ಬಳಿ ಮನವಿ ಮಾಡಿದ್ದು. ನಾನು ಬಂದು ನಿಮ್ಮನ್ನು ಕೇಳಿಲ್ಲ. ಬಿಗ್ ಬಾಸ್ಗೆ ಬಂದು ನಾನು ಹೆಸರು ಮಾಡಬೇಕಿಲ್ಲ. ನನ್ನಲ್ಲಿ ಎಷ್ಟು ಕೂದಲು ಇದೆಯೋ ಅಷ್ಟು ಲಕ್ಷ ರೂಪಾಯಿ ಹಣ ನಾನು ನೋಡಿದ್ದೇನೆ. ಪ್ರತಿ ತಿಂಗಳು ನಮ್ಮ ಮನೆಯ ನಾಯಿಗೆ ನಾನು ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತೇನೆ. ಆದರೆ ದೌಲತ್ತು ತೋರಿಸಿಲ್ಲ. ಜನರ ನಡುವೆ ಒಬ್ಬನಾಗಿ ಇರೋಕೆ ಇಷ್ಟಪಟ್ಟಿದ್ದೇನೆ. ಆದರೆ ಈ ಜನರು ನನಗೆ ಹೋಗಲೇ ಅಂದರು. ನಾನು ಇಂದಲ್ಲಾ ನಾಳೆ ಸಿಎಂ ಆಗುವವನು. ನನ್ನನ್ನು ತಡೆಯೋಕೆ ಆಗಲ್ಲ’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
‘ನಾನೊಬ್ಬ ರಿಯಲ್ ಹೀರೋ. ಯಾವನನ್ನೂ ಬಿಟ್ಟಿಲ್ಲ. ನಾನು ಸಿಂಹ. ಗುಂಪಲ್ಲಿ ಇರೋಕೆ ನಾನು ತೋಳ ಅಲ್ಲ. ನಿಮ್ಮ ಶೋ ನೀವೇ ಮಾಡಿಕೊಳ್ಳಿ. ನನ್ನ ಘನತೆ ಗೌರವ ನನಗೆ ಆಚೆ ಕಡೆ ಇದೆ. ನನ್ನನ್ನು ಹೊರಗೆ ಹಾಕಿ. ನಾನು ಆಟ ಮುಗಿಸುತ್ತೇನೆ. ಕಿತ್ತೋಗಿರೋ 50 ಲಕ್ಷ ಗೆಲ್ಲೋಕೆ ಈ ಕಿತ್ತೋಗಿರೋ ಪ್ರೋಗ್ರಾಂ ಮಾಡಿಕೊಂಡಿದ್ದೀರಿ. ಒಬ್ಬರ ಮೇಲೆ ಇನ್ನೊಬ್ಬರು ಕಿತ್ತಾಡಿಕೊಂಡಿದ್ದೀರಿ. ನಾನು ಮನಸ್ಸ ಮಾಡಿದರೆ ಹೆಲಿಕಾಪ್ಟರ್ ತರಿಸುತ್ತೇನೆ. ನಾನು ಯಾರು ಎಂಬುದು ನಿಮಗೆ ಗೊತ್ತಿಲ್ಲ. ನಿಮ್ಮ ಪ್ರೋಗ್ರಾಂ ಹಾಳು ಮಾಡುತ್ತೇನೆ’ ಎಂದಿದ್ದಾರೆ ಲಾಯರ್ ಜಗದೀಶ್.
‘ನೀವು (ಸ್ಪರ್ಧಿಗಳು) ನಡೆಸುವ ಮಾಫಿಯಾ, ಅವರು (ಬಿಗ್ ಬಾಸ್) ನಡೆಸುವ ಮಾಫಿಯಾವನ್ನು ನಾನು ಎಕ್ಸ್ಪೋಸ್ ಮಾಡುತ್ತೇನೆ. ನನಗೆ ಇಲ್ಲಿಇರೋಕೆ ಇಷ್ಟ ಇಲ್ಲ. ಧನ್ಯವಾದಗಳು.. ನಾನು ಹೊರಡುತೇನೆ. ದುಡ್ಡು ಕೊಟ್ಟು ಬಿಗ್ ಬಾಸ್ ಕೊಂಡುಕೊಳ್ಳಬಹುದು’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ದೊಡ್ಮನೆಯಲ್ಲಿ ಇರುವ ಎಲ್ಲರ ಜೊತೆಗೂ ಅವರು ಕಿರಿಕ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾನೂನು ಮಾತಾಡುವ ಜಗದೀಶ್ ಕೈಯಿಂದಲೇ ಆಯ್ತು ರೂಲ್ಸ್ ಬ್ರೇಕ್; ಕಾದಿದೆ ಶಿಕ್ಷೆ
ರಾತ್ರಿ ಇಷ್ಟೆಲ್ಲ ಗಲಾಟೆ ಮಾಡಿಕೊಂಡ ಲಾಯರ್ ಜಗದೀಶ್ ಅವರು ಬೆಳಗ್ಗೆ ಎದ್ದು ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಇಡೀ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಅವರು ಕ್ಷಮೆ ಕೇಳಿದ್ದಾರೆ. ಹಾಗಂತ ಆಡಿದ ಮಾತುಗಳನ್ನು ಹಾಗೆಯೇ ಬಿಟ್ಟು ಬಿಡಲು ಸಾಧ್ಯವೇ? ಖಂಡಿತಾ ಇಲ್ಲ. ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.