Rasik Dave Death: ‘ಮಹಾಭಾರತ’ ಖ್ಯಾತಿಯ ನಟ ರಸಿಕ್ ದವೆ ನಿಧನ
ರಸಿಕ್ ಅವರು ಬಣ್ಣದ ಬದುಕು ಆರಂಭಿಸಿದ್ದು 1982ರಲ್ಲಿ. ಗುಜರಾತಿ ಭಾಷೆಯ ‘ಪುತ್ರ ವಧು’ ಅವರ ಮೊದಲ ಚಿತ್ರ. ನಂತರ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
‘ಮಹಾಭಾರತ’ ಸೀರಿಸ್ (Mahabharat Series) ಮೂಲಕ ಸಾಕಷ್ಟು ಖ್ಯಾತಿ ಪಡೆದ ನಟ ರಸಿಕ್ ದವೆ (Rasik Dave) ಅವರು ಶುಕ್ರವಾರ (ಜುಲೈ 29) ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ರಸಿಕ್ ಅವರು ಡಯಲಿಸಿಸ್ಗೆ ಒಳಗಾಗುತ್ತಿದ್ದರು. ಇಂದು (ಜುಲೈ 30) ಅವರ ಅಂತ್ಯಕ್ರಿಯೆ ನೆರವೇರಲಿದೆ. ಹಿಂದಿ ಧಾರಾವಾಹಿ ಹಾಗೂ ಗುಜರಾತಿ ಸಿನಿಮಾಗಳಲ್ಲಿ ರಸಿಕ್ ನಟಿಸಿದ್ದರು. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ರಸಿಕ್ ಅವರು ಖ್ಯಾತ ನಟಿ ಕೇತಕಿ ದೇವಿ ಅವರನ್ನು ಮದುವೆ ಆಗಿದ್ದರು. ‘ಕ್ಯುಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಮೂಲಕ ಕೇತಕಿ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದರು. ಅವರು ಈ ಧಾರಾವಾಹಿಯಲ್ಲಿ ದಕ್ಷಾ ಹೆಸರಿನ ಪಾತ್ರ ಮಾಡಿದ್ದರು. ರಸಿಕ್ ಹಾಗೂ ಕೇತಕಿ ಇಬ್ಬರೂ ಗುಜರಾತಿ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಆ್ಯಕ್ಟೀವ್ ಆಗಿದ್ದರು. ಪತಿಯ ನಿಧನದಿಂದ ಕೇತಕಿ ಸಾಕಷ್ಟು ದುಃಖ ತಪ್ತರಾಗಿದ್ದಾರೆ.
ರಸಿಕ್ ಅವರು ಬಣ್ಣದ ಬದುಕು ಆರಂಭಿಸಿದ್ದು 1982ರಲ್ಲಿ. ಗುಜರಾತಿ ಭಾಷೆಯ ‘ಪುತ್ರ ವಧು’ ಅವರ ಮೊದಲ ಚಿತ್ರ. ನಂತರ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. 1980ರ ಸಮಯದಲ್ಲಿ ಪ್ರಸಾರ ಕಂಡ ‘ಮಹಾಭಾರತ’ ಸೀರಿಸ್ನಲ್ಲಿ ನಂದ ಪಾತ್ರವನ್ನು ಮಾಡಿದ್ದರು ರಸಿಕ್. 2006ರಲ್ಲಿ ಪ್ರಸಾರ ಕಂಡ ‘ನಚ್ ಬಲಿಯೇ’ ಡಾನ್ಸಿಂಗ್ ರಿಯಾಲಿಟಿ ಶೋನಲ್ಲಿ ರಸಿಕ್ ಹಾಗೂ ಕೇತಕಿ ಭಾಗಿ ಆಗಿದ್ದರು.
ಕಳೆದ ಎರಡು ವರ್ಷಗಳಿಂದ ರಸಿಕ್ ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದರು. ಕಳೆದ ಒಂದು ತಿಂಗಳಿಂದ ಅವರ ಆರೋಗ್ಯ ತೀವ್ರ ಗತಿಯಲ್ಲಿ ಹದಗೆಟ್ಟಿತ್ತು. ಅವರು ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನ ಹೊಂದಿದ್ದಾರೆ. ರಸಿಕ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: ಮಲಯಾಳಂನ ನಟ ಶರತ್ ಚಂದ್ರನ್ ಇನ್ನಿಲ್ಲ; ಸಣ್ಣ ವಯಸ್ಸಿಗೆ ನಿಧನ ಹೊಂದಿದ ಹೀರೋ
ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ರಸಿಕ್ ಸಾವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಮುಂಬೈನಲ್ಲಿ ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.