Narendra Modi: ‘ದಿ ಕಪಿಲ್ ಶರ್ಮಾ ಶೋ’ಗೆ ಬರಲು ಮೋದಿಗೆ ನೀಡಲಾಗಿತ್ತು ಆಹ್ವಾನ; ಒಪ್ಪಿಕೊಂಡ್ರಾ ಪಿಎಂ?
The Kapil Sharma Show | Zwigato: ಸೋನಿ ಟಿವಿಯಲ್ಲಿ ‘ದಿ ಕಪಿಲ್ ಶರ್ಮಾ ಶೋ’ ಜನಪ್ರಿಯವಾಗಿದೆ. ಈ ಕಾರ್ಯಕ್ರಮಕ್ಕೆ ಬರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗಿತ್ತು.
ಕರ್ನಾಟಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಾಗ ರಾಜ್ಯಕ್ಕೆ ಭೇಟಿ ನೀಡಿ ಗಮನ ಸೆಳೆಯುತ್ತಿದ್ದಾರೆ. ಇದೇ ವೇಳೆ ಮೋದಿಗೆ ಸಂಬಂಧಿಸಿದ ಇನ್ನೊಂದು ವಿಷಯವನ್ನು ಕಾಮಿಡಿಯನ್ ಕಪಿಲ್ ಶರ್ಮಾ ಅವರು ಬಹಿರಂಗಪಡಿಸಿದ್ದಾರೆ. ‘ದಿ ಕಪಿಲ್ ಶರ್ಮಾ ಶೋ’ಗೆ (The Kapil Sharma Show) ಬರುವಂತೆ ಮೋದಿಗೆ ಆಹ್ವಾನ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಕಪಿಲ್ ಶರ್ಮಾ ನಟನೆಯ ‘ಸ್ವಿಗಾಟೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಮೋದಿ ವಿಷಯ ಕೂಡ ಪ್ರಸ್ತಾಪ ಆಗಿದೆ. ತಮ್ಮ ಕಾಮಿಡಿ ಶೋಗೆ ಬರುವಂತೆ ಮೋದಿಗೆ ಆಹ್ವಾನ ನೀಡಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಕಪಿಲ್ ಶರ್ಮಾ (Kapil Sharma) ಈಗ ನೆನಪು ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಕಪಿಲ್ ಶರ್ಮಾಗೆ ಸಿಕ್ಕಿತ್ತು. ಆಗ ಅವರು ‘ದಿ ಕಪಿಲ್ ಶರ್ಮಾ ಶೋ’ಗೆ ಬನ್ನಿ ಎಂದು ಆಹ್ವಾನ ನೀಡಿದ್ದರಂತೆ. ‘ಸರ್ ನೀವು ನಮ್ಮ ಕಾರ್ಯಕ್ರಮಕ್ಕೆ ಬರಬೇಕು ಅಂತ ನಾನು ಕರೆದೆ. ಅವರು ಇಲ್ಲ ಅಂತ ಹೇಳಲಿಲ್ಲ. ಯಾವಾಗಲಾದರೂ ಬರುವುದಾಗಿ ತಿಳಿಸಿದರು. ವಿರೋಧ ಪಕ್ಷದವರೇ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಿದ್ದಾರೆ ಅಂತ ಹೇಳಿದರು. ಅವರು ನಮ್ಮ ಶೋಗೆ ಬಂದರೆ ನಮ್ಮ ಸೌಭಾಗ್ಯ’ ಎಂದಿದ್ದಾರೆ ಕಪಿಲ್ ಶರ್ಮಾ.
ಇದನ್ನೂ ಓದಿ: ಅಕ್ಕಿಗೆ ಕಪಿಲ್ ಶರ್ಮಾ ನಂಬಿಕೆ ದ್ರೋಹ; ‘ದಿ ಕಪಿಲ್ ಶರ್ಮಾ ಶೋ’ ಬೈಕಾಟ್ ಮಾಡಿದ ಅಕ್ಷಯ್ ಕುಮಾರ್
ಹಾಸ್ಯ ಪ್ರಧಾನವಾದ ಟಾಕ್ ಶೋಗಳ ಮೂಲಕ ಕಪಿಲ್ ಶರ್ಮಾ ಫೇಮಸ್ ಆಗಿದ್ದಾರೆ. ಅವರು ನಡೆಸಿಕೊಡುವ ‘ದಿ ಕಪಿಲ್ ಶರ್ಮಾ ಶೋ’ ಸೋನಿ ಟಿವಿಯಲ್ಲಿ ಜನಪ್ರಿಯವಾಗಿದೆ. ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ತಮ್ಮ ಸಿನಿಮಾಗಳ ಪ್ರಚಾರ ಮಾಡಿದ್ದಾರೆ. ಇತ್ತೀಚೆಗೆ ಸಿಸಿಎಲ್ ಸಲುವಾಗಿ ‘ಗೋಲ್ಡನ್ ಸ್ಟಾರ್’ ಗಣೇಶ್ ಕೂಡ ಈ ಕಾರ್ಯಕ್ರಮಕ್ಕೆ ತೆರಳಿದ್ದರು. ಅಕ್ಷಯ್ ಕುಮಾರ್, ನೋರಾ ಫತೇಹಿ, ಕೃತಿ ಸನೊನ್ ಮುಂತಾದವರು ಲೇಟೆಸ್ಟ್ ಎಪಿಸೋಡ್ಗಳಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್ ಶರ್ಮಾ ಶೋ’ ಹಾಸ್ಯನಟ
ಕಾಮಿಡಿ ಶೋ ನಿರೂಪಕನಾಗಿ ಮಾತ್ರವಲ್ಲದೇ ಸಿನಿಮಾ ನಟನಾಗಿಯೂ ಕಪಿಲ್ ಶರ್ಮಾ ಅವರು ಗುರುತಿಸಿಕೊಂಡಿದ್ದಾರೆ. ಅವರು ಅಭಿನಯಿಸಿರುವ ಹೊಸ ಸಿನಿಮಾ ‘ಸ್ವಿಗಾಟೋ’ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 17ರಂದು ರಿಲೀಸ್ ಆಗಲಿರುವ ಈ ಚಿತ್ರಕ್ಕೆ ನಂದಿತಾ ದಾಸ್ ನಿರ್ದೇಶನ ಮಾಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಯುವಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಕೆಲವು ಫಿಲ್ಮ್ ಫೆಸ್ಟಿವಲ್ಗಳಲ್ಲಿ ಈ ಚಿತ್ರ ಈಗಾಗಲೇ ಪ್ರದರ್ಶನ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Sun, 12 March 23