‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಹಲವು ಕಾರಣಗಳಿಂದಾಗಿ ಅಭಿಮಾನಿಗಳನ್ನು ಸೆಳೆದುಕೊಂಡಿದೆ. ಈ ಬಾರಿಯ BBK9 ಶೋ ಸ್ವಲ್ಪ ಭಿನ್ನವಾಗಿದೆ. ಈ ಹಿಂದಿನ ಸೀಸನ್ನಲ್ಲಿ ಭಾಗವಹಿಸಿದ್ದ ಹಳೇ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದಾರೆ. ಹಳಬರ ಬದಲಿಗೆ ಹೊಸ ಸ್ಪರ್ಧಿಗಳನ್ನೇ ಆಯ್ಕೆ ಮಾಡಬೇಕಿತ್ತು ಎಂಬ ಅಭಿಪ್ರಾಯ ಕೂಡ ಪ್ರೇಕ್ಷಕರ ವಲಯದಲ್ಲಿ ಇದೆ. ಅದೇನೇ ಇರಲಿ, ಹೊಸ ಸ್ಪರ್ಧಿಗಳು ಕೂಡ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಆಟ ಆಡುತ್ತಿದ್ದಾರೆ. ವಾರದಿಂದ ವಾರಕ್ಕೆ ಪ್ರತಿಯೊಬ್ಬರ ಚಾರ್ಮ್ ಹೆಚ್ಚುತ್ತಿದೆ. ಅದರಲ್ಲೂ ಹಾಸ್ಯ ನಟ ವಿನೋದ್ ಗೊಬ್ಬರಗಾಲ (Vinod Gobbaragala) ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಆರಂಭದಲ್ಲಿ ವಿನೋದ್ ಗೊಬ್ಬರಗಾಲ ಅವರು ಸೈಲೆಂಟ್ ಆಗಿದ್ದರು. ಅಗತ್ಯವಿದ್ದಷ್ಟು ಮಾತ್ರ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಅವರು ಎಲ್ಲರೊಂದಿಗೆ ಆಪ್ತವಾಗಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಂಡರು. ಈಗಂತೂ ತಮ್ಮ ಮಾತುಗಳಿಂದ ಎಲ್ಲರಿಗೂ ಕಾಮಿಡಿ ಕಚಗುಳಿ ಇಡುತ್ತಿದ್ದಾರೆ. ವೀಕೆಂಡ್ ಎಪಿಸೋಡ್ನಲ್ಲೂ ವಿನೋದ್ ಅವರು ಶೈನ್ ಆಗುತ್ತಿದ್ದಾರೆ.
ಬಿಗ್ ಬಾಸ್ ವೀಕ್ಷಕರಿಗೆ ಮನರಂಜನೆ ಮುಖ್ಯ. ಜಗಳ, ಹಾಡು, ಕಾಮಿಡಿ, ಟಾಸ್ಕ್.. ಹೀಗೆ ಯಾವುದಾದರೊಂದು ರೀತಿಯಲ್ಲಿ ಜನರನ್ನು ರಂಜಿಸಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ವಿನೋದ್ ಗೊಬ್ಬರಗಾಲ ಅವರ ಶಕ್ತಿಯೇ ಕಾಮಿಡಿ. ತಮ್ಮ ಪಂಚಿಂಗ್ ಡೈಲಾಗ್ಗಳ ಮೂಲಕ ಅವರು ನಗಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ಸೈಲೆಂಟ್ ಆಗಿರಬೇಕು ಎಂಬ ಅಭಿಪ್ರಾಯ ದೊಡ್ಮನೆಯ ಸದಸ್ಯರಿಂದ ಕೇಳಿಬಂದಿದೆ.
ಪ್ರತಿ ಭಾನುವಾರ ಕಿಚ್ಚ ಸುದೀಪ್ ಅವರು ‘ಯೆಸ್ ಅಥವಾ ನೋ’ ರೌಂಡ್ ನಡೆಸುತ್ತಾರೆ. ಅವರು ಹೇಳುವ ಕೆಲವು ಹೇಳಿಕೆಗಳಿಗೆ ಸ್ಪರ್ಧಿಗಳು ಹೌದು ಅಥವಾ ಇಲ್ಲ ಎಂದು ಉತ್ತರ ನೀಡಬೇಕು. ಇನ್ನು ಕೆಲವೊಮ್ಮೆ ಸುದೀಪ್ ಕೇಳುವ ನೇರ ಪ್ರಶ್ನೆಗೆ ಉತ್ತರ ನೀಡಬೇಕು. ಈ ವಾರ ಇಂಥದ್ದೊಂದು ಪ್ರಶ್ನೆ ಎದುರಾಗಿದೆ. ‘ಬಿಗ್ ಬಾಸ್ ಮನೆಯಲ್ಲಿ ಯಾರು ಸ್ವಲ್ಪ ಸೈಲೆಂಟ್ ಆಗಿದ್ದರೆ ಚೆನ್ನಾಗಿರುತ್ತದೆ’ ಎಂದು ಕೇಳಿದ್ದಕ್ಕೆ ನಟಿ ಅಮೂಲ್ಯ ಗೌಡ ಅವರು ವಿನೋದ್ ಹೆಸರನ್ನು ಹೇಳಿದರು.
ಅಮೂಲ್ಯ ಈ ರೀತಿ ಹೇಳಿದ್ದು ಕೇಳಿ ವಿನೋದ್ ಗೊಬ್ಬರಗಾಲ ಅವರಿಗೆ ಗೊಂದಲ ಮೂಡಿತು. ‘ನಾನು ಜಾಸ್ತಿ ಮಾತಾಡಲ್ಲ ಅಂತ ನಿನ್ನೆ ಇವರೇ ನನ್ನನ್ನು ನಾಮಿನೇಷನ್ಗೆ ಹಾಕಿದ್ದರು. ಈಗ ನೋಡಿದ್ರೆ ಸೈಲೆಂಟ್ ಆಗಿರಬೇಕು ಅಂಥಾರಲ್ಲ..’ ಎಂದು ವಿನೋದ್ ಹೇಳಿದ್ದು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಈ ಸಂಚಿಕೆ ನ.13ರ ರಾತ್ರಿ ಪ್ರಸಾರ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Sun, 13 November 22