ಆ ಸಿನಿಮಾದಲ್ಲಿ ನಟಿಸಿ ನಿರ್ದೇಶಕನೊಟ್ಟಿಗೆ ಜಗಳವಾಡಿ ಮಾತು ಬಿಟ್ಟಿದ್ದ ದತ್ತಣ್ಣ: ಯಾವುದಾ ಸಿನಿಮಾ?
Weekend With Ramesh: ಹಿರಿಯ ನಟ ದತ್ತಣ್ಣ ಸಿನಿಮಾ ಒಂದರಲ್ಲಿ ನಟಿಸಿದ ಬಳಿಕ ಆ ಸಿನಿಮಾದ ನಿರ್ದೇಶಕನಿಗೆ ಕರೆ ಮಾಡಿ ಆ ಸಿನಿಮಾ ಮಾಡಿದ್ದಕ್ಕೆ ಚೆನ್ನಾಗಿ ಬೈದು ಮಾತು ಬಿಟ್ಟಿದ್ದರಂತೆ! ಯಾವುದು ಆ ಸಿನಿಮಾ? ಯಾರು ಆ ನಿರ್ದೇಶಕ?
ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದ ಭಾನುವಾರದ ಎಪಿಸೋಡ್ಗೆ ಅತಿಥಿಯಾಗಿ ಆಗಮಿಸಿದ್ದ ನಟ ದತ್ತಣ್ಣ (Dattanna), ತಮ್ಮ ಶಿಕ್ಷಣ, ಸೇನೆಯಲ್ಲಿ ತಮ್ಮ ಸೇವೆ, ನಾಟಕ ಹಾಗೂ ಸಿನಿಮಾ ಜರ್ನಿಯ ಕುರಿತು ಮಾತನಾಡಿದರು. ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದತ್ತಣ್ಣ ಬಹುತೇಕ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದರೂ ಸಹ ಅದು ಸಹ ಶುದ್ಧ ಹಾಸ್ಯದ ಪಾತ್ರಗಳಷ್ಟೆ. ಆದರೆ ಅವರ ಫೀಲ್ಮೋಗ್ರಫಿಯಲ್ಲಿ ಗುಂಪಿಗೆ ಸೇರದ ಸಿನಿಮಾ ಒಂದಿದೆ. ಆ ಸಿನಿಮಾದಲ್ಲಿ ನಟಿಸಿದ ಬಳಿಕ ಆ ಸಿನಿಮಾ ಮಾಡಿದ ನಿರ್ದೇಶಕರನ್ನು ಚೆನ್ನಾಗಿ ಬೈದು ಮಾತು ಬಿಟ್ಟಿದ್ದರಂತೆ ದತ್ತಣ್ಣ.
ನಟ ದತ್ತಣ್ಣ, ಕನ್ನಡದ ಜನಪ್ರಿಯ ಸಿನಿಮಾ, ಸೂಪರ್ ಹಿಟ್ ಸಿನಿಮಾ ನೀರ್ದೋಸೆಯಲ್ಲಿ (Neer Dose) ದತ್ತಾತ್ರೆಯ ಹೆಸರಿನ ಪೋಲಿ ತಾತನ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ನಿರ್ದೇಶನ ಮಾಡಿದ ವಿಜಯ ಪ್ರಸಾದ್, ಆ ಕತೆಯನ್ನು ಹೇಳಿದಾಗ ಕತೆ ಚೆನ್ನಾಗಿದೆ ಆದರೆ ಸಂಭಾಷಣೆ ಚೆನ್ನಾಗಿಲ್ಲ, ಜಾಸ್ತಿ ಪೋಲಿ ಸಂಭಾಷಣೆಗಳಾದವು ಬೇಡ ಎಂದಿದ್ದರಂತೆ. ಆದರೆ ವಿಜಯ ಪ್ರಸಾದ್, ಈ ವರೆಗೆ ಬಹಳ ಗಂಭೀರ ಪಾತ್ರಗಳನ್ನು ಮಾಡಿದ್ದೀರಿ ಈಗ ಈ ಪಾತ್ರ ಮಾಡಿಬಿಡಿ ಎಂದಿದ್ದಾರೆ ವಿಜಯ ಪ್ರಸಾದ್. ಅವರ ಪ್ರೀತಿಗೆ ಕಟ್ಟುಬಿದ್ದು ಸಿನಿಮಾದಲ್ಲೇನೊ ನಟಿಸಿಬಿಟ್ಟಿದ್ದಾರೆ ದತ್ತಣ್ಣ. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಮೇಲೆ ಟ್ರೈಲರ್ ನೋಡಿ ಉರಿದು ಹೋದ ನಟ ದತ್ತಣ್ಣ, ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಬೈದರಂತೆ. ನನ್ನ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ಬಿಟ್ಟರಂತೆ. ವಿಜಯ ಪ್ರಸಾದ್ ಜೊತೆ ಮಾತು ನಿಲ್ಲಿಸಿಬಿಟ್ಟಿದ್ದರಂತೆ. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ವಿಜಯ ಪ್ರಸಾದ್ ಅವರು ದತ್ತಣ್ಣ ಅವರನ್ನು ಕೇಳಿಕೊಂಡ ಬಳಿಕ ನೀರ್ ದೋಸೆ ಸಿನಿಮಾ ನೋಡಿ ಆಗ ಅವರ ಕೋಪ ಇಳಿಯಿತಂತೆ.
ಇದನ್ನೂ ಓದಿ: ಚಿತ್ರಾನ್ನ, ಶಾಲೆ, ಸಿನಿಮಾ ಮತ್ತು ಅಪ್ಪು: ವೀಕೆಂಡ್ ವಿತ್ ರಮೇಶ್ನಲ್ಲಿ ರಮ್ಯಾ ಜೀವನ ಪಯಣ ಅನಾವರಣ
ಶೋಗೆ ಆಗಮಿಸಿದ್ದ ನಿರ್ದೇಶಕ ವಿಜಯ ಪ್ರಸಾದ್, ದತ್ತಣ್ಣ ಬಗ್ಗೆ ಮಾತನಾಡುತ್ತಾ, ತಮ್ಮ ಅನುಭವದ ಮೂಲಕ ಹಲವು ನಿರ್ದೇಶಕರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಎಲ್ಲರೊಟ್ಟಿಗೂ ಬೆರೆಯುವ ದತ್ತಣ್ಣ ಅವರು, ಶೂಟಿಂಗ್ ಮುಗಿದ ಮೇಲೆ ನಮ್ಮೊಟ್ಟಿಗೆ ಕೂತು ಗುಂಡು ಹಾಕುತ್ತಾ ನಮ್ಮೊಡನೆ ಬೆರೆತುಬಿಡುತ್ತಾರೆ. ದತ್ತಣ್ಣ ಬ್ಯಾಗ್ ಇಲ್ಲದೆ ಎಲ್ಲಿಗೂ ಬರೊಲ್ಲ ಗುಂಡಿನ ವ್ಯವಸ್ಥೆ ಇಲ್ಲದೆ ಎಲ್ಲಿಯೂ ಉಳಿಯುವುದಿಲ್ಲ ಎಂದು ಜೋಕ್ ಮಾಡಿದರು ವಿಜಯ ಪ್ರಸಾದ್.
ಶೋಗೆ ದತ್ತಣ್ಣ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಲಿಂಗದೇವ್ರ, ಪಿ ಶೇಷಾದ್ರಿ ಅವರುಗಳು ಸಹ ಆಗಮಿಸಿದ್ದರು. ದತ್ತಣ್ಣ ಬಗ್ಗೆ ಮಾತನಾಡಿದ ನಿರ್ದೇಶಕ ಶೇಷಾದ್ರಿ ನಾನು ಮಾಡಿರುವ ಹನ್ನೆರಡು ಸಿನಿಮಾಗಳ ಕತೆಯ ಮೊದಲ ಕೇಳುಗ ದತ್ತಣ್ಣ. ನಾನು ಜೀವನದಲ್ಲಿ ನನ್ನ ಪತ್ನಿಯ ಬಳಿಕ ಅತಿ ಹೆಚ್ಚು ಜಗಳ ಆಡಿರುವುದು ದತ್ತಣ್ಣನ ಬಳಯೇ. ಅವನಿಗೆ ಒಂದೇ ಸಾಲಿನಲ್ಲಿ ನಾನು ಕತೆ ಹೇಳಬೇಕಿತ್ತು. ಕತೆಯನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಳವಾಗಿ ಅದನ್ನು ತೆರೆಗೆ ತರಲು ಸಾಧ್ಯ ಎಂಬುದು ಅವರ ನಂಬಿಕೆ ಎಂದ ಶೇಷಾದ್ರಿ, ದತ್ತಣ್ಣ ತಮ್ಮ ಅನುಭವದ ಮೂಲಕ ಅವರಿಗೆ ನೀಡಿದ ಮಾರ್ಗದರ್ಶನವನ್ನು ಮೆಲುಕು ಹಾಕಿ ಧನ್ಯವಾದ ತಿಳಿಸಿದರು.‘
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ