Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಾನ್ನ, ಶಾಲೆ, ಸಿನಿಮಾ ಮತ್ತು ಅಪ್ಪು: ವೀಕೆಂಡ್ ವಿತ್ ರಮೇಶ್​ನಲ್ಲಿ ರಮ್ಯಾ ಜೀವನ ಪಯಣ ಅನಾವರಣ

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ಸಾಧಕರ ಕುರ್ಚಿಯ ಮೇಲೆ ಕೂತ ನಟಿ ರಮ್ಯಾ ತಮ್ಮ ಜೀವನದ ಹಲವು ಮಧುರ ಕ್ಷಣಗಳನ್ನು ಮೆಲುಕು ಹಾಕಿದರು. ಅವರು ಬಿಚ್ಚಿಟ್ಟ ಅಪರೂಪದ ಸಂಗತಿಗಳು ಇಲ್ಲಿವೆ...

ಚಿತ್ರಾನ್ನ, ಶಾಲೆ, ಸಿನಿಮಾ ಮತ್ತು ಅಪ್ಪು: ವೀಕೆಂಡ್ ವಿತ್ ರಮೇಶ್​ನಲ್ಲಿ ರಮ್ಯಾ ಜೀವನ ಪಯಣ ಅನಾವರಣ
ವೀಕೆಂಡ್ ವಿತ್ ರಮೇಶ್​ನಲ್ಲಿ ರಮ್ಯಾ
Follow us
ಮಂಜುನಾಥ ಸಿ.
|

Updated on:Mar 25, 2023 | 11:09 PM

ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh) ಶೋ ಇಂದು (ಮಾರ್ಚ್ 25) ಪ್ರಾರಂಭವಾಗಿದ್ದು. ಈ ಸೀಸನ್​ನ ಮೊದಲ ಅತಿಥಿ ರಮ್ಯಾರ (Ramya) ಜೀವನ ಪಯಣವನ್ನು ಭಾವುಕ ಚೌಕಟ್ಟಿನಲ್ಲಿ ಕಟ್ಟಿಕೊಟ್ಟರು ನಿರೂಪಕ ರಮೇಶ್ ಅರವಿಂದ್. ರಮ್ಯಾರ ಬಾಲ್ಯ, ಶಾಲೆ, ಗೆಳೆಯರು, ಶಿಕ್ಷಕರು, ಹವ್ಯಾಸ, ಆಟ ಎಲ್ಲವನ್ನೂ ಕೆದಕಿ ಖುಷಿ ಕೊಟ್ಟ ರಮೇಶ್ ಅರವಿಂದ್, ಬಳಿಕ ರಮ್ಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರೀತಿ, ಅಲ್ಲಿ ಸಿಕ್ಕಿದ ಗೆಳೆಯರು, ಸಿನಿಮಾಗಳ ನೆನಪುಗಳನ್ನು ಮೆಲುಕಿ ಹಾಕಿದರು. ಜೊತೆಗೆ ಎಲ್ಲಿಯೂ ಹಂಚಿಕೊಳ್ಳದ ಕೆಲವು ಅಪರೂಪದ ಸಂಗತಿಗಳನ್ನು ರಮ್ಯಾ ಸಾಧಕರ ಕುರ್ಚಿಯಲ್ಲಿ ಕುಳಿತು ಹಂಚಿಕೊಂಡರು.

ರಮ್ಯಾರಿಗೆ ಚಿತ್ರಾನ್ನ ಹಾಗೂ ಜಿಲೇಬಿ ಮೇಲಿರುವ ಪ್ರೀತಿಯನ್ನು ಹಾಗೂ ಅವರು ಹೇಗೆ ಚಿಪ್ಸ್ ಅನ್ನು ಸ್ಪೂನ್ ನಂತೆ ಬಳಸಿ ಚಿತ್ರಾನ್ನ ತಿನ್ನುತ್ತಾರೆಂಬುದು ಅವರ ಸಹೋದರಿಯಿಂದ ತಿಳಿದುಬಂತು. ಇನ್ನು, ತಾವು ಊಟಿಯಲ್ಲಿ ಓದಿದ ಬೋರ್ಡಿಂಗ್ ಶಾಲೆ, ಅಲ್ಲಿನ ಕಠಿಣ ನಿಯಮಗಳು, ಅಲ್ಲಿನ ಶಿಕ್ಷಕರು, ಅಲ್ಲಿನ ಗೆಳೆಯರ ನೆನಪುಗಳನ್ನೆಲ್ಲ ಮಾಡಿಕೊಂಡರು. ರಮ್ಯಾರನ್ನು ಕಾಣಲು ಅವರ ಬಾಲ್ಯದ ಗೆಳತಿಯರಿಬ್ಬರೂ ಬಹು ದೂರದಿಂದ ಬಂದಿದ್ದರು. ರಮ್ಯಾ ಹೇಗೆ ಕತ್ತಲಾಗುತ್ತಲೆ ದೆವ್ವದ ಕತೆಗಳನ್ನು ಹೇಳಿ ಎಲ್ಲರನ್ನೂ ಹೆದರಿಸುತ್ತಿದ್ದರು. ಹೇಗೆ ಇಷ್ಟವಾಗದ ಹಾಲು, ರಾಗಿ ಗಂಜಿಯನ್ನು ಯಾರಿಗೂ ಕಾಣದಂತೆ ಮಾಯ ಮಾಡುತ್ತಿದ್ದರು ಎಂಬ ಗುಟ್ಟುಗಳನ್ನು ರಟ್ಟು ಮಾಡಿದರು. ರಮ್ಯಾ ಬಹಳವಾಗಿ ಹೆದರುವ ಅವರ ಗಣಿತ ಶಿಕ್ಷಕಿ ಸಹ ಶೋಗೆ ಬಂದು ಶೋನಲ್ಲಿಯೂ ಗಣಿತದ ಲೆಕ್ಕ ಬಿಡಿಸಲು ಹೇಳಿದರು. ಆದರೆ ರಮ್ಯಾ ಲೆಕ್ಕ ಬಿಡಿಸಿ ಭೇಷ್ ಎನಿಸಿಕೊಂಡಿದ್ದು ಆಪ್ತವಾಗಿತ್ತು.

ಆ ಬಳಿಕ ರಮ್ಯಾ ಮೊದಲ ಸಿನಿಮಾಕ್ಕೆ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಹೇಳಿದರು. ಹೇಗೆ ರಾಘಣ್ಣ, ರಮ್ಯಾರನ್ನು ನೋಡಿದ ಕೂಡಲೇ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಆದರೆ ಅಪ್ಪು ಸಿನಿಮಾದ ಅವಕಾಶ ತಮಗೆ ತಪ್ಪಿ ನಂತರ ಅಭಿ ಸಿನಿಮಾದ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಅಣ್ಣಾವ್ರವನ್ನು ಭೇಟಿಯಾಗಿದ್ದು, ಪಾರ್ವತಮ್ಮನವರು ತಮಗೆ ರಮ್ಯಾ ಎಂದು ಹೆಸರಿಟ್ಟ ಆ ಕ್ಷಣ. ಮೊದಲ ಸಿನಿಮಾದಲ್ಲಿ ಅಪ್ಪು ತಮಗೆ ಮಾಡಿದ ಸಹಾಯ. ಮೊದಲ ಚೆಕ್ ಅನ್ನು ಅಪ್ಪುವಿಂದ ಪಡೆದುಕೊಂಡಿದ್ದು ಎಲ್ಲವನ್ನೂ ನೆನಪಿಸಿಕೊಂಡರು. ರಾಘಣ್ಣ ಹಾಗೂ ಶಿವಣ್ಣ ಅವರುಗಳು ವಿಡಿಯೋ ಸಂದೇಶ ಕಳಿಸಿ, ರಮ್ಯಾಗೆ ಶುಭ ಹಾರೈಸಿದರು. ‘ನಮ್ಮ ಸಂಸ್ಥೆಯಿಂದ ನೀವು ಬೆಳೆಯಲಿಲ್ಲ. ನಿಮ್ಮ ಪ್ರತಿಭೆಯಿಂದ ಬೆಳೆದಿರಿ’ ಎಂದರು ರಾಘಣ್ಣ.

ಅದಾದ ಬಳಿಕ ಅಭಿ ಸಿನಿಮಾದ ಸಹಾಯಕ ನಿರ್ದೇಶಕ ಹಾಗೂ ಆ ಬಳಿಕ ರಮ್ಯಾರ ಅರಸು, ಆಕಾಶ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಬಂದು ರಮ್ಯಾರ ಸಿಟ್ಟಿನ ಬಗ್ಗೆ ಹೇಳಿದರು. ‘ನನಗೆ ರಕ್ಷಿತಾಗೆ ಕಾಂಪಿಟೇಶನ್ ಗುಲ್ಲು ಹಬ್ಬಿಸಿದ್ದೆ ಇವರು’ ಎಂದು ಮಹೇಶ್​ರ ಕಾಲೆಳೆದರು ರಮ್ಯಾ. ಸಿನಿಮಾಗಳ ಮಾತುಕತೆ ನಡುವೆ ಅಪ್ಪುವನ್ನು ಬಹುವಾಗಿ ಸ್ಮರಿಸಿದ ರಮ್ಯಾ, ಅಪ್ಪುವಿನಿಂದ ತಾವು ಕಲಿತ ಕೆಲವು ವಿಷಯಗಳ ಬಗ್ಗೆ ಹಾಗೂ ಅವರೊಟ್ಟಿಗೆ ತಾವು ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು. ಅಪ್ಪು ಅಗಲಿಕೆಯಿಂದ ಅನುಭವಿಸಿದ ನೋವು, ಅಪ್ಪು ಅಗಲಿದ ಆ ದಿನದ ಬಗ್ಗೆಯೂ ರಮ್ಯಾ ನೆನಪಿಸಿಕೊಂಡು ಕಣ್ಣೀರು ಹಾಕಿದರು.

ಸೆಂಟಿಮೆಂಟ್ ದಾರಿಯಿಂದ ಶೋ ಅನ್ನು ಮತ್ತೆ ಫನ್ ದಾರಿಗೆ ಎಳೆದು ತಂದ ರಮೇಶ್ ಅರವಿಂದ್ ಎಕ್ಸ್​ಕ್ಯೂಸ್​ ಮೀ ಸಿನಿಮಾದ ವಿಷಯ ತೆಗೆದರು. ಎಕ್ಸ್​ಕ್ಯೂಸ್​ ಮೀ ಸಿನಿಮಾದ ನಿರ್ಮಾಪಕರು, ಆ ಸಿನಿಮಾದ ಇಬ್ಬರು ನಾಯಕರಾದ ಸುನಿಲ್ ರಾವ್ ಹಾಗೂ ಅಜಯ್ ಅವರುಗಳು ರಮ್ಯಾ ಕುರಿತಾಗಿ ಮಾತನಾಡಿದರು. ಆ ನಂತರ ಸಂಜು ವೆಡ್ಸ್ ಗೀತ ಸಿನಿಮಾದ ಬಗ್ಗೆ ಮಾತಿಗೆಳೆದ ರಮೇಶ್ ಅರವಿಂದ್, ಆ ಸಿನಿಮಾದ ನಿರ್ದೇಶಕ ನಾಗಶೇಖರ್ ವಿಡಿಯೋ ಪ್ರಸಾರ ಮಾಡಿದರು. ಆದರೆ ನಾಗಶೇಖರ್ ಹಾಗೂ ನಾಯಕ ಕಿಟ್ಟಿ ಇಬ್ಬರೂ ವೇದಿಕೆ ಬಂದು ರಮ್ಯಾಗೆ ಶಾಕ್ ನೀಡಿದರು. ಸಂಜು ವೆಡ್ಸ್ ಗೀತ ಸಿನಿಮಾದ ಕ್ಲಾಪ್ ಅನ್ನು ನಾಗಶೇಖರ್, ರಮ್ಯಾಗೆ ಉಡುಗೊರೆಯಾಗಿ ನೀಡಿದರು. ಸಂಜು ವೆಡ್ಸ್ ಗೀತಾ ಸಿನಿಮಾದ ದೃಶ್ಯವೊಂದನ್ನು ರಮ್ಯಾ-ಕಿಟ್ಟಿ ನಟಿಸಿ ತೋರಿಸಿದರು.

ನಗು, ಭಾವುಕತೆ, ನೆನಪು, ಪ್ರೀತಿ, ಸಾರ್ಥಕತ ಭಾವಗಳಿಂದ ತುಂಬಿತ್ತು ಮೊದಲ ಎಪಿಸೋಡ್. ನಾಳೆ (ಭಾನುವಾರ) ಪ್ರಸಾರವಾಗುವ ಎಪಿಸೋಡ್​ನಲ್ಲಿ ರಮ್ಯಾರ ಜೀವನ ಪಯಣದ ಇನ್ನೊಂದು ಮಜಲು ಬಿಚ್ಚಿಕೊಳ್ಳಲಿದೆ. ರಮ್ಯಾರ ರಾಜಕೀಯ ಪ್ರವೇಶ, ತಂದೆಯ ನಿರ್ಗಮನ, ಚಿತ್ರರಂಗದಿಂದ ದೂರ ಉಳಿಯುವ ನಿರ್ಣಯ, ಮತ್ತೆ ಎಂಟ್ರಿ ಹಲವು ವಿಷಯಗಳ ಬಗ್ಗೆ ರಮ್ಯಾ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 pm, Sat, 25 March 23