Weekend With Ramesh: ‘ಕರುಣಾಳು ಬಾ ಬೆಳಕೆ’ ಕತೆಗಾರನ ಜೀವನದ ಮೇಲೆ ಬೆಳಕು
Weekend With Ramesh: ಶಿಕ್ಷಣ ಕ್ಷೇತ್ರದ ಸಾಧಕ, ಶಿಕ್ಷಕರ ಶಿಕ್ಷಕ ಗುರುರಾಜ ಕರಜಗಿಯವರು ವೀಕೆಂಡ್ ವಿತ್ ರಮೇಶ್ಗೆ ಅತಿಥಿಯಾಗಿ ಆಗಮಿಸಿ ತಮ್ಮ ಜೀವನವನ್ನು ವೀಕ್ಷಕರಿಗೆ ಪರಿಚಯಿಸಿದರು.
ವೀಕೆಂಡ್ ವಿತ್ ರಮೇಶ್ನ (Weekend With Ramesh) ಸಾಧಕರ ಕುರ್ಚಿಯ ಮೇಲೆ ಸಿನಿಮಾ ತಾರೆಯರೇ ಕೂತಿದ್ದು ಹೆಚ್ಚು. ಈ ಕಾರ್ಯಕ್ರದ ಬಗ್ಗೆ ಕೆಲವರ ಟೀಕೆಯು ಇದೇ ಆಗಿದೆ. ಆದರೆ ಈ ವಾರ ಸಾಧಕರ ಕುರ್ಚಿಯ ಗೌರವ ಹೆಚ್ಚಿಸುವ ಸಾಧಕರು ಅದರ ಮೇಲೆ ಕುಳಿತಿದ್ದರು. ಅವರೇ ಗುರುರಾಜ ಕರಜಗಿ. ಶಿಕ್ಷಕರ ತರಬೇತಿ, ವಿದ್ಯಾರ್ಥಿಗಳ ಮನೋವಿಕಾಸ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಾಧನೆಗೈದಿರುವ ಗುರುರಾಜ ಕರಜಗಿಯವರ (Gururaja Karajagi) ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ (ಏಪ್ರಿಲ್ 30) ವೀಕೆಂಡ್ ವಿತ್ ರಮೇಶ್ ಎಪಿಸೋಡ್ನಲ್ಲಿ ಆಯಿತು.
ಬಾಗಲಕೋಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಗುರುರಾಜ ಕರಜಗಿ ಅವರು ಬಾಲ್ಯದಿಂದಲೇ ಶಿಕ್ಷಣದ ಕಡೆಗೆ ಒಲವು. ಮನೆಯಲ್ಲಿಯೂ ಶಿಕ್ಷಣದ್ದೇ ವಾತಾವರಣ. ಕರಜಗಿಯವರ ಅಕ್ಕ ಮಹಾನ್ ಬುದ್ಧಿವಂತೆ, ಗುರುರಾಜರು ಹೇಳಿರುವಂತೆ ”ಈವರೆಗೆ ಹಲವು ನೋಬೆಲ್ ಪುರಸ್ಕೃತರನ್ನು ನಾನು ಭೇಟಿಯಾಗಿದ್ದೇನೆ ಆದರೆ ನನ್ನ ಅಕ್ಕನಂಥಹಾ ಬುದ್ಧಿವಂತೆಯನ್ನು ನಾನು ನೋಡಿದ್ದೇ ಇಲ್ಲ” ಅವರ ಅಕ್ಕನ ಕುರಿತಾಗಿ ಪುಸ್ತಕವನ್ನೇ ಬರೆದಿದ್ದಾರೆ ಕರಜಗಿ. ಅವರ ತಂಗಿಯೂ ಸಂಸ್ಕೃತ ಪ್ರವೀಣೆ. ಅಕ್ಕ-ತಂಗಿಯೆಂದರೆ ಕರಜಗಿಯವರಿಗೆ ಮಹಾನ್ ಪ್ರೀತಿ, ಗೌರವ.
ಶಿಸ್ತಿನ ಕುಟುಂಬದಲ್ಲಿ ಜನಿಸಿದ ಕರಜಗಿಯವರ ತಂದೆ ಸರ್ಕಾರಿ ನೌಕರರು, ಮಹಾ ಪ್ರಾಮಾಣಿಕರು. ಕರಜಗಿಯವರು ಹತ್ತನೇ ತರಗತಿಯಲ್ಲಿದ್ದಾಗ ಫೇಲ್ ಆಗಿಬಿಟ್ಟಿದ್ದರಂತೆ. ಆದರೆ ರಿಸಲ್ಟ್ ಬಂದಿದ್ದೇ ಇವರಿಗೆ ಗೊತ್ತಿಲ್ಲ ಕುಟುಂಬದವರೆಲ್ಲ ಪ್ರವಾಸಕ್ಕೆ ಹೋಗಿಬಿಟ್ಟಿದ್ದರು. ಆದರೆ ಅವರ ಶಿಕ್ಷಕರೇ, ಪೋಷಕರಂತೆ ಸಹಿ ಮಾಡಿ ರೀ ವ್ಯಾಲ್ಯುವೇಷನ್ಗೆ ಅರ್ಜಿ ಸಲ್ಲಿಸಿದಾಗ ಗೊತ್ತಾಗಿದೆ ಕರಜಗಿಯವರು ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದಿದ್ದಾರೆ ಎಂದು. ಆ ವಿಷಯವನ್ನು ಅವರ ಗುರುಗಳು ಮನೆಗೆ ಬಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ ಪ್ರಸಂಗವನ್ನು ಭಾವುಕವಾಗಿ ವಿವರಿಸಿದರು ಗುರುರಾಜರು. ”ನನ್ನ ಶಿಕ್ಷಕರು ನನಗೆ ತೋರಿದ ಪ್ರೀತಿಯ 100 ರಲ್ಲಿ ಒಂದು ಭಾಗವನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಕೊಟ್ಟರೆ ಸಾಕು” ಎಂದು ತಮ್ಮ ಗುರುಗಳ ಪ್ರೀತಿಯನ್ನು ವಿವರಿಸಿದರು. ಮಾತ್ರವಲ್ಲದೆ, ತಮ್ಮ ಜೀವನದಲ್ಲಿ ತಮಗೆ ದೊರೆತ ಹಲವು ಅದ್ಭುತ ಶಿಕ್ಷಕರನ್ನು ಸ್ಮರಿಸಿಕೊಂಡರು. ಆ ಶಿಕ್ಷಕರ ಕಠಿಣತೆಯಲ್ಲಿದ್ದ ಪ್ರೀತಿಯನ್ನು ಹೆಕ್ಕಿ-ಹೆಕ್ಕಿ ಹೇಳಿದರು.
ಕಾಲೇಜು ದಿನಗಳಲ್ಲಿ ದ.ರಾ.ಬೇಂದ್ರೆಯವರೊಡನೆ ಸಿಕ್ಕ ಒಡನಾಟದ ಸವಿ ನೆನಪಿಸಿಕೊಂಡ ಗುರುರಾಜರು, ಅವರ ಕೃಪೆಯಿಂದ ರಾಜರತ್ನಂ ಅವರ ಒಡನಾಟ ದೊರೆತಿದ್ದು, ಪಾಲಿ ಭಾಷೆ ಕಲಿತು, 15 ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ನೆನಪಿಸಿಕೊಂಡರು. ಜೊತೆಗೆ ಮಾಸ್ತಿ, ಡಿವಿಜಿ, ಕೆಎಸ್ ನರಸಿಂಹಸ್ವಾಮಿ ಅವರಂಥಹಾ ಮಹಾನ್ ಸಾಹಿತಿಗಳ ಮುಂದೆ 23ನೇ ವಯಸ್ಸಿನಲ್ಲಿಯೇ ಮಾಡಿದ ಭಾಷಣ, ಹೇಳಿದ ಅಂಗುಲಿಮಾಲನ ಕತೆಯನ್ನು ಮತ್ತೊಮ್ಮೆ ವೀಕೆಂಡ್ ವಿತ್ ರಮೇಶ್ನಲ್ಲಿ ಹೇಳಿದರು.
ವಿದ್ಯಾವರ್ಧಕ ಕಾಲೇಜು ಸೇರಿದ್ದು, ಕಡಿಮೆ ವಯಸ್ಸಿಗೆ ಪ್ರಿನ್ಸಿಪಲ್ ಆಗಿದ್ದು, ಕೇವಲ ಒಂದೂವರೆ ವರ್ಷದಲ್ಲಿಯೇ ಪಿಎಚ್ಡಿ ಮುಗಿಸಿದ್ದು ಆಗ ಸಿಕ್ಕ ಅದ್ಭುತ ಗುರುಗಳ ಸಾಂಗತ್ಯ ಎಲ್ಲವನ್ನೂ ಸ್ಮರಿಸಿದ ಗುರುರಾಜರು, ತಮ್ಮ ಕಾಲೇಜಿನ ಮೇಲಿದ್ದ ಪ್ರೀತಿಯ ಬಗ್ಗೆ ವಿವರಿಸುತ್ತಾ, ನಾನು ವಿದೇಶಗಳಲ್ಲೆಲ್ಲ ಸುತ್ತಿದ್ದೇನೆ, ಉಪನ್ಯಾಸಗಳನ್ನು ನೀಡಿದ್ದೇನೆ, ನಾನು ಹೋದಲ್ಲೆಲ್ಲ ಒಂದು ಬ್ಯಾಗು ತೆಗೆದುಕೊಂಡು ಹೋಗುತ್ತೇನೆ ಆ ಬ್ಯಾಗಿನ ಒಂದು ಸಣ್ಣ ಪೌಚ್ನಲ್ಲಿ ನನ್ನ ಕಾಲೇಜಿನ ಮಣ್ಣು ಸದಾ ಇರುತ್ತಿತ್ತು ಎಂದರು.
1979 ರಲ್ಲಿ ಸೋದರ ಮಾವನ ಮಗಳನ್ನೇ ಮದುವೆಯಾದ ಗುರುರಾಜರುವ ತಮ್ಮ 45 ವರ್ಷಗಳ ದಾಂಪತ್ಯದಲ್ಲಿ ಒಮ್ಮೆಯೂ ಜಗಳವೇ ಆಡಿಲ್ಲವಂತೆ! ಶೋನಲ್ಲಿ ಈ ದಂಪತಿಗಳ ಮಕ್ಕಳು, ಮೊಮ್ಮಕ್ಕಳು, ಸೊಸೆ ತಮ್ಮ ಪ್ರೀತಿಯ ಕುಟುಂಬದ ಹಿರಿಯನ ಬಗ್ಗೆ ಗೌರವದ ಮಾತುಗಳನ್ನಾಡಿದರು. ನಂತರ ಗುರುರಾಜರು ತಾವು ಅಬ್ದುಲ್ ಕಲಾಂ ಅವರೊಟ್ಟಿಗೆ ಕಳೆದ ನೆನಪುಗಳ ಪುಟವನ್ನು ತೆರೆದರು.
ಜೊತೆಗೆ ಕರುಣಾಳು ಬಾ ಬೆಳಕೆ ಅಂಕಣ ಪ್ರಾರಂಭವಾದ ಬಗೆ ವಿವರಿಸಿದ ಕರಜಗಿ, ಪ್ರಜಾವಾಣಿ ಪತ್ರಿಕೆಯ ಆಗಿನ ಸಂಪಾದಕ ಪದ್ಮರಾಜ ದಂಡಾವತಿ ಕರೆ ಮಾಡಿ ಅಂಕಣ ಬರೆಯಲು ಹೇಳಿದರು. ನಾನು ಕೇವಲ ಪಾಸಿಟಿವ್ ವಿಷಯಗಳನ್ನಷ್ಟೆ ಬರೆಯುವ ನಿರ್ಧಾರ ಮಾಡಿ ಕರುಣಾಳು ಬಾ ಬೆಳಕೆ ಅಂಕಣ ಆರಂಭಿಸಿದೆ ಎಂದರು. ಆ ಅಂಕಣಕ್ಕೆ ನನ್ನ ಇಂಗ್ಲೀಷ್ ಗುರುಗಳು ಕಲಿಸಿದ್ದ ಪದ್ಯ ಹಾಗೂ ಅದನ್ನು ಬಿಎಂಶ್ರೀ ಅವರು ಕನ್ನಡಕ್ಕೆ ತಂದಿದ್ದ ಪದ್ಯ ಕರುಣಾಳು ಬಾ ಬೆಳಕೆ ಸ್ಪೂರ್ತಿಯಾಗಿ ಅಂಕಣಕ್ಕೆ ಅದೇ ಹೆಸರು ಇಟ್ಟಿದ್ದೇನೆ. ಹಲವು ವರ್ಷಗಳಿಂದಲೂ ಅದನ್ನು ಬರೆಯುತ್ತಲೇ ಬರುತ್ತಿದ್ದೇನೆ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ