ಮೂರು ದಿನ ‘ಜಿ ಕನ್ನಡ ಕುಟುಂಬ ಅವಾರ್ಡ್ಸ್’; ಸೆಲೆಬ್ರಿಟಿಗಳ ಸಮಾಗಮ, ಇಲ್ಲಿದೆ ವಿವರ
Zee Kannada Kutumba Awards 2025: ಮೂರು ದಿನಗಳ ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025 ಅಕ್ಟೋಬರ್ 17 ರಿಂದ 19 ರಂದು ಅದ್ಧೂರಿಯಾಗಿ ನಡೆಯಲಿದೆ. ಜೀ ಕನ್ನಡ ಕಲಾವಿದರು, ಅಕುಲ್ ಬಾಲಾಜಿ, ಅನುಶ್ರೀ, ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ (Zee Kannada) ವಾಹಿನಿ ಮುಂಚೂಣಿಯಲ್ಲಿ ಇದೆ. ಟಿಆರ್ಪಿಯಲ್ಲಿ ವಾಹಿನಿ ಅಗ್ರ ಸ್ಥಾನ ಪಡೆದಿದೆ. ಈಗ ಜೀ ಕನ್ನಡ ವಾಹಿನಿಯ ದೊಡ್ಡ ಹಬ್ಬ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅದುವೇ ಜೀ ಕನ್ನಡದ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025’. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ. ಅಕ್ಟೋಬರ್ 17,18 ಹಾಗೂ 19ರಂದು ಈ ಕಾರ್ಯಕ್ರಮ ನಡೆಯಲಿದೆ.
ಜೀ ಕನ್ನಡದಲ್ಲಿ ಹಲವು ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇವೆ. ಎಲ್ಲಾ ಕಲಾವಿದರು ಶೂಟಿಂಗ್ ಸಮಯದಲ್ಲಿ ಒಟ್ಟಿಗೆ ಸಿಗೋಕೆ ಆಗೋದಿಲ್ಲ. ಈ ಕಾರಣಕ್ಕೆ ಕುಟುಂಬದವರನ್ನು ಒಂದುಗೂಡಿಸಲು ಪ್ರತಿ ವರ್ಷ ‘ಜೀ ಕುಟುಂಬ ಅವಾರ್ಡ್ಸ್’ ಹಮ್ಮಿಕೊಳ್ಳಲಾಗುತ್ತದೆ. ಕಲಾವಿದರಿಗೆ ಇದೊಂದು ರೀತಿಯಲ್ಲಿ ಹಬ್ಬವೇ ಸರಿ. ಈ ದಿನದಂದು ಕುಣಿದು, ಕುಪ್ಪಳಿಸಿ, ಅವಾರ್ಡ್ ಪಡೆದು ಎಲ್ಲರೂ ಸಂಭ್ರಮಿಸೋದನ್ನು ಕಾಣಬಹುದು.
ಮೂರು ದಿನಗಳ ಕಾಲ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ರಿಂದ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ ಎಂಬುದು ವಿಶೇಷ. ಅನುಶ್ರೀ ಅವರು ವಿವಾಹದ ಬಳಿಕ ಕಾಣಿಸಿಕೊಳ್ಳುತ್ತಿರುವ ಶೋ ಇದಾಗಿದೆ.
ಅವಾರ್ಡ್ಗಳ ಪಟ್ಟಿ
ಜೀ ಕನ್ನಡ ಕುಟುಂಬ ಅವಾರ್ಡ್ಸ್ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಸೀರಿಯಲ್, ಫೇವರಿಟ್ ಜೋಡಿ, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಎಂಬ ಆರು ಪ್ರಮುಖ ಕೆಟಗರಿ ಇರಲಿವೆ. ಇದರ ಜೊತೆಗೆ ಇನ್ನೂ ಹಲವು ವಿಭಾಗಗಳಲ್ಲಿ ಅವಾರ್ಡ್ ನೀಡಲಾಗುತ್ತಿದೆ.
ಇದನ್ನೂ ಓದಿ:ಧಾರಾವಾಹಿ ಮುಗಿಯುತ್ತಿದ್ದಂತೆ ವೆಕೇಶನ್ ಹೋದ ದಿವ್ಯಾ ಉರುಡುಗ
ಸೆಲೆಬ್ರಿಟಿಗಳ ದಂಡು
ಜೀ ಕನ್ನಡ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಆಗಮಿಸಲಿದ್ದಾರೆ. ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಆಗಮಿಸಿ ಕಾರ್ಯಕ್ರಮದ ರಂಗು ಹೆಚ್ಚಿಸಲಿದ್ದಾರೆ. ‘ವೀಕೆಂಡ್ ವಿತ್ ರಮೇಶ್ ಮಿನಿಯೇಚರ್’ ಕೂಡ ಇರಲಿದೆ. ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಮಾತುಕತೆ ಈ ಚೇರ್ನಲ್ಲಿ ನಡೆಯಲಿದ್ದು, ಇದು ಕಾರ್ಯಕ್ರಮದ ಮತ್ತೊಂದು ಹೈಲೈಟ್.
ಈ ಬಗ್ಗೆ ಜೀ ಕನ್ನಡ ಮತ್ತು ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿದ್ದಾರೆ. ‘ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಜೀ ಕನ್ನಡ 20 ವರ್ಷ ಪೂರೈಸಿದೆ. ಹೀಗಾಗಿ, ವೀಕ್ಷಕರಿಗೆ ಮತ್ತಷ್ಟು ಮನರಂಜನೆ ಕೊಡುವ ಉದ್ದೇಶ ಹೊಂದಿದ್ದೇವೆ. ‘ನಾ ನಿನ್ನ ಬಿಡಲಾರೆ’, ‘ಕರ್ಣ’ ಮತ್ತು ’ಶ್ರೀ ರಾಘವೇಂದ್ರ ಮಹಾತ್ಮೆ’ ಹೆಸರಿನ ಧಾರಾವಾಹಿಗಳ ಜೊತೆಗೆ ‘ನಾವು ನಮ್ಮವರು’ ಎಂಬ ವಿಭಿನ್ನ ರಿಯಾಲಿಟಿ ಶೋ ವನ್ನು ಜನರ ಮುಂದಿಟ್ಟಿದ್ದೇವೆ’ ಎಂದರು. ‘ಜೀ5’ ಮೂಲಕ ಒಟಿಟಿ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪೋ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ, ಮೈಕ್ರೋ ವೆಬ್ ಸೀರಿಸ್ ಮತ್ತು ವೆಬ್ ಸೀರಿಸ್ಗಳನ್ನು ತರಲಾಗುತ್ತಿದೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್ನ ಟಿವಿ ಹಾಗೂ ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 15 October 25



