ಜೀ ಕನ್ನಡದಲ್ಲಿ ‘ಕರುನಾಡ ರತ್ನ’ ಕಾರ್ಯಕ್ರಮ; ಪುನೀತ್ ರಾಜ್ಕುಮಾರ್ಗೆ ವಿಶೇಷ ನಮನ
ಪುನೀತ್ ರಾಜ್‌ಕುಮಾರ್ ಅವರಿಗೆ ‘ಕರುನಾಡ ರತ್ನ’ ಕಾರ್ಯಕ್ರಮದ ಮೂಲಕ ಜೀ ಕನ್ನಡ ವಾಹಿನಿ ನಮನ ಸಲ್ಲಿಸಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ರವಿಚಂದ್ರನ್ ಮುಂತಾದವರು ಭಾಗವಹಿಸಿದ್ದರು.
ಡಾ. ರಾಜ್‌ಕುಮಾರ್ ರೀತಿಯೇ ಸಾಧನೆಯ ಹಾದಿಯಲ್ಲಿ ಸಾಗಿದ ಪುನೀತ್ ರಾಜ್‌ಕುಮಾರ್ ( Puneeth Rajkumar) ಅವರು ಕನ್ನಡಿಗರ ಪಾಲಿನ ಕರ್ನಾಟಕ ರತ್ನ. ಪುನೀತ್ ಅವರ ಸಿನಿ ಪಯಣವನ್ನು ಜೀ ಕನ್ನಡ (Zee Kannada) ವಾಹಿನಿ ಅತ್ಯಂತ ಗೌರವದಿಂದ ಮೆಲುಕು ಹಾಕಿದೆ. ಈ ವೇದಿಕೆಯಲ್ಲಿ ಶಿವರಾಜ್‌ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬದ ಅನೇಕರು ಉಪಸ್ಥಿತರಿದ್ದರು. ಜೀ ಕನ್ನಡ ವಾಹಿನಿ ನಡೆಸಿದ ‘ಕರುನಾಡ ರತ್ನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಾಜ್ ಕುಟುಂಬದವರು ಮಾತ್ರವಲ್ಲದೇ ಅಲ್ಲದೇ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು.
46 ವರ್ಷ ಸಿನಿಮಾರಂಗದಲ್ಲಿಯೇ ಕಳೆದ ಪುನೀತ್ ರಾಜ್‌ಕುಮಾರ್ ಅವರು ಮಾಡಿದ ಸಾಧನೆ ದೊಡ್ಡದು. ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿರುವ ಕೊಡುಗೆಯನ್ನು ಮರೆಯುವಂತಿಲ್ಲ. ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಅವರಿಗೆ ಈ ಕಾರ್ಯಕ್ರಮದ ಮೂಲಕ ಜೀ ಕನ್ನಡ ವಾಹಿನಿ ನಮನ ಸಲ್ಲಿಸಿದೆ. ಈ ವೇದಿಕೆಯಲ್ಲಿ ಶಿವರಾಜ್‌ಕುಮಾರ್ ಅವರು ‘ಬಾನ ದಾರಿಯಲ್ಲಿ..’ ಹಾಡನ್ನು ಹಾಡಿದ್ದಷ್ಟೇ ಅಲ್ಲದೆ ಪುನೀತ್ ಇಷ್ಟಪಟ್ಟು ಹಾಡುತ್ತಿದ್ದ ಬಾಬಿ ಸಿನಿಮಾದ ‘ಮೇ ಶಾಯರ್ ತೋ ನಹಿ’ ಹಾಡನ್ನು ಕೂಡ ಹಾಡಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರ ಜರ್ನಿಯನ್ನು, ಅವರ ನೆನಪುಗಳನ್ನು ಶ್ರೀಮಂತವಾಗಿಸಲು ಜೀ ಕನ್ನಡ ವಾಹಿನಿ, ವರುಣ್ ಸ್ಟುಡಿಯೋಸ್ ಹಾಗೂ GKGS ಟ್ರಸ್ಟ್ ಸಾಕಷ್ಟು ಶ್ರಮವಹಿಸಿದೆ. ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಇದೇ ಡಿಸೆಂಬರ್ 19ರ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
‘ನಾದಬ್ರಹ್ಮ’ ಹಂಸಲೇಖ ಕೂಡ ಈ ಕಾರ್ಯಕ್ರಮಕ್ಕಾಗಿ ಒಂದು ಟ್ಯೂನ್ ಹಾಕಿ ಸಾಹಿತ್ಯ ರಚಿಸಿದ್ದರು. ಆ ಹಾಡಿಗೂ ‘ಕರುನಾಡ ರತ್ನ’ ವೇದಿಕೆ ಸಾಕ್ಷಿಯಾಗಿದೆ. ಸರಿಗಮಪ ಪ್ರತಿಭೆ ಕಂಬದ ರಂಗಯ್ಯ ಮಹಾಗುರು ಹಂಸಲೇಖ ಅವರು ಸಂಯೋಜಿಸಿದ ಟ್ಯೂನ್‌ಗೆ ಧ್ವನಿಯಾಗಿದ್ದಾರೆ. ಇದು ಈ ಕಾರ್ಯಕ್ರಮದ ಹೈಲೈಟ್‌ಗಳಲ್ಲೊಂದು.
ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಒಳ್ಳೆಯ ವ್ಯಕ್ತಿತ್ವ, ನಟನೆ, ಸರಳತೆ ಹಾಗೂ ವಿನಯವಂತಿಕೆಯಿಂದ ಅವರು ಎಲ್ಲರಿಗೂ ಪ್ರಿಯವಾಗಿದ್ದರು. ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರಿಗೂ ಅಪ್ಪು ಇಷ್ಟ. ಇಂದು ಪುನೀತ್ ರಾಜ್‌ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅವರು ಮಾಡಿದ ಕಾರ್ಯಗಳಿಂದಾಗಿ ಅವರ ನೆನಪು ಸದಾ ಜೀವಂತ. ಮುಗ್ಧ ನಗುವಿನಿಂದ ಕನ್ನಡಿಗರ ಹೃದಯದಲ್ಲಿ ರಾರಾಜಿಸುತ್ತಿರುವ ಕರ್ನಾಟಕದ ಈ ಅಮೂಲ್ಯ ರತ್ನ ಎಂದೆಂದಿಗೂ ಅಮರರಾಗಿರುತ್ತಾರೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ಗಾಗಿ ಫ್ಯಾನ್ಸ್ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ
ಪುನೀತ್ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ