Couple’s Kitchen: ಜುಲೈ 22ರಿಂದ ಜೀ ಕನ್ನಡ ವಾಹಿನಿಯಲ್ಲಿ ‘ಕಪಲ್ಸ್ ಕಿಚನ್’; ಈ ಹೊಸ ಕಾರ್ಯಕ್ರಮದ ವಿಶೇಷ ಏನು?
Zee Kannada: ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ಕ್ಕೆ ಈ ಶೋ ಪ್ರಸಾರ ಆಗಲಿದೆ. ಮೊದಲ ವೀಕೆಂಡ್ನ ಗೆಸ್ಟ್ ಆಗಿ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ, ಅಭಿಜಿತ್-ರೋಹಿಣಿ ದಂಪತಿಗಳು ಆಗಮಿಸಲಿದ್ದಾರೆ.
ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಜೀ ಕನ್ನಡ’ (Zee Kannada) ಈಗಾಗಲೇ ಅನೇಕ ಬಗೆಯ ರಿಯಾಲಿಟಿ ಶೋಗಳನ್ನು ಪರಿಚಯಿಸಿದೆ. ಧಾರಾವಾಹಿಗಳ ಜೊತೆಯಲ್ಲಿ ರಿಯಾಲಿಟಿ ಶೋಗಳು ಜನಮನ ಗೆದ್ದಿವೆ. ‘ವೀಕೆಂಡ್ ವಿತ್ ರಮೇಶ್’ ಮುಂತಾದ ಕಾರ್ಯಕ್ರಮಗಳು ತಮ್ಮದೇ ಛಾಪು ಮೂಡಿಸಿವೆ. ವೀಕೆಂಡ್ನ ಮನರಂಜನೆಗಾಗಿ ಈಗ ಹೊಸ ಶೋ ಬರಲಿದೆ. ‘ಕಪಲ್ಸ್ ಕಿಚನ್’ (Couple’s Kitchen) ಎಂಬುದು ಈ ಕಾರ್ಯಕ್ರಮದ ಹೆಸರು. ಶೀರ್ಷಿಕೆಯೇ ಸೂಚಿಸುವಂತೆ ಇದು ಅಡುಗೆಗೆ ಸಂಬಂಧಿಸಿದ ಶೋ. ಇದರಲ್ಲಿ ಸೆಲೆಬ್ರಿಟಿ ಕಪಲ್ ಭಾಗಿ ಆಗಲಿದ್ದಾರೆ. ಅಡುಗೆಯ ಜೊತೆಜೊತೆಗೆ ಮನರಂಜನೆ ಮತ್ತು ಮಾಹಿತಿ ನೀಡುವುದು ಇದರ ಉದ್ದೇಶ. ಖ್ಯಾತ ನಟ, ನಿರೂಪಕ ಮಾಸ್ಟರ್ ಆನಂದ್ (Master Anand) ಅವರು ‘ಕಪಲ್ಸ್ ಕಿಚನ್’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಜುಲೈ 22ರಿಂದ ಜೀ ಕನ್ನಡ ವಾಹಿನಿಯಲ್ಲಿ ‘ಕಪಲ್ಸ್ ಕಿಚನ್’ ಶೋ ಆರಂಭ ಆಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಮೊದಲ ವೀಕೆಂಡ್ನ ಗೆಸ್ಟ್ ಆಗಿ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ, ಅಭಿಜಿತ್-ರೋಹಿಣಿ ದಂಪತಿಗಳು ಆಗಮಿಸಲಿದ್ದಾರೆ. ಅಡುಗೆ ಮಾಡುವುದರ ಜೊತೆಗೆ ತಮ್ಮ ಜೀವನದ ಬಗೆಗಿನ ಕೆಲವು ಸ್ಪೆಷಲ್ ವಿಷಯಗಳನ್ನು ಈ ಸೆಲೆಬ್ರಿಟಿಗಳು ಹಂಚಿಕೊಳ್ಳಲಿದ್ದಾರೆ.
ಕಿರುತೆರೆಯಲ್ಲಿ ಅಡುಗೆಗೆ ಸಂಬಂಧಿಸಿದಂತೆ ಅನೇಕ ಶೋಗಳು ಈಗಾಗಲೇ ಬಂದು ಹೋಗಿವೆ. ಅದಕ್ಕಿಂತಲೂ ಸ್ವಲ್ಪ ಭಿನ್ನವಾಗಿ ‘ಕಪಲ್ಸ್ ಕಿಚನ್’ ಮೂಡಿಬರಲಿದೆ. ಈ ಕಾರ್ಯಕ್ರಮಕ್ಕೆ ಬರುವ ಪ್ರತಿ ಸಲಬ್ರಿಟಿ ಜೋಡಿಯ ಕೈಯಲ್ಲಿ ಹೊಸ ರುಚಿಯನ್ನು ಮಾಡಿಸಲಾಗುತ್ತದೆ. ಅದನ್ನ ಸವಿಯುತ್ತಾ ಅವರ ಲವ್ ಸ್ಟೋರಿಯನ್ನು, ಮದುವೆಯ ಕಥೆಯನ್ನು ವೀಕ್ಷಕರ ಎದುರು ಎಳೆಎಳೆಯಾಗಿ ಬಿಚ್ಚಿಡಲಾಗುತ್ತದೆ. ಕ್ಯಾಮೆರಾ ಮುಂದೆ ನಿಂತು ನಟಿಸುವ ಸೆಲೆಬ್ರಿಟಿಗಳು ನಿಜ ಜೀವನದಲ್ಲಿ ಸೌಟು ಹಿಡಿದು ನಿಲ್ಲೋದನ್ನು ‘ಕಪಲ್ಸ್ ಕಿಚನ್’ ಶೋನಲ್ಲಿ ನೋಡಬಹುದು.
ಇದನ್ನೂ ಓದಿ: ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
ಅಡುಗೆ ಮಾಡೋಕೆ ಒಲೆ ಹಚ್ಚಲಾಗುತ್ತದೆ. ಅದೇ ವೇಳೆ ಸೆಲೆಬ್ರಿಟಿಗಳ ಪ್ರೇಮ್ ಕಹಾನಿ ತೆರೆದುಕೊಳ್ಳುತ್ತದೆ. ಅಡುಗೆಗೆ ಮಸಾಲೆ ಬೀಳುತ್ತಿರುವಾಗಲೇ ತಮ್ಮ ರಿಯಲ್ ಲೈಫ್ನ ಸುಂದರವಾದ ಕ್ಷಣವನ್ನ ಅವರು ರಸವತ್ತಾಗಿ ವಿವರಿಸಲಿದ್ದಾರೆ. ಗೃಹಿಣಿಯರಿಗೆ ಮಾತ್ರವಲ್ಲದೇ ಕುಟುಂಬದ ಎಲ್ಲರಿಗೂ ಈ ಕಾರ್ಯಕ್ರಮ ಇಷ್ಟ ಆಗಲಿದೆ. ಹೊಸ ಅಡುಗೆಯ ಬಗ್ಗೆ ತಿಳಿದುಕೊಳ್ಳುವ ಚಾನ್ಸ್ ಕೂಡ ಈ ಶೋನಲ್ಲಿ ಸಿಗಲಿದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಸೆಟ್ ಹಾಕಲಾಗಿದೆ. ಸ್ಪೆಷಲ್ ಶೆಫ್ಗಳು ಸಹ ಇದರಲ್ಲಿ ಭಾಗಿ ಆಗಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸೆಲೆಬ್ರಿಟಿಗಳು ಹೊಸ ಅಡುಗೆ ಕಲಿಯಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.