‘ಕರ್ಣ’ ಧಾರಾವಾಹಿ ಪ್ರಸಾರ ಆಗದಿರಲು ಕಾರಣವಾಗಿದ್ದು ಭವ್ಯಾ ಗೌಡ? ನಡೆದಿದ್ದು ಏನು?
ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ‘ಕರ್ಣ’ ಧಾರಾವಾಹಿಯ ಪ್ರಸಾರವನ್ನು ಮುಂದೂಡಲಾಗಿದೆ. ಭವ್ಯಾ ಗೌಡ ಅವರ ಹಿಂದಿನ ಒಪ್ಪಂದದಿಂದಾಗಿ ಈ ವಿಳಂಬ ಉಂಟಾಗಿದೆ ಎಂದು ವರದಿಯಾಗಿದೆ. ಅವರು ಬೇರೆ ಚಾನೆಲ್‌ನೊಂದಿಗೆ ಒಪ್ಪಂದ ಹೊಂದಿದ್ದರು. ಪ್ರೋಮೋಗಳು ತೆಗೆದುಹಾಕಲ್ಪಟ್ಟಿದೆ. ಭವ್ಯಾ ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ "ಪ್ರಕ್ರಿಯೆಯನ್ನು ನಂಬಿ" ಎಂದು ಪೋಸ್ಟ್ ಮಾಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕರ್ಣ’ (Karna Serial) ಧಾರಾವಾಹಿಯು ಇಂದು (ಜೂನ್ 16) ಸಂಜೆ 8 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಧಾರಾವಾಹಿಯು ಪ್ರಸಾರ ಕಾಣುತ್ತಿಲ್ಲ ಮತ್ತು ಹೊಸ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಜೀ ಕನ್ನಡವು ಮಾಹಿತಿ ನೀಡಿತು. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ರಿವೀಲ್ ಮಾಡಿರಲಿಲ್ಲ. ಈಗ ಕೇಳಿ ಬರುತ್ತಿರುವ ಹೊಸ ವರದಿಯ ಪ್ರಕಾರ ಭವ್ಯಾ ಗೌಡ ಅವರ ಕಾರಣಕ್ಕೆ ಧಾರಾವಾಹಿಯ ಪ್ರಸಾರ ಮುಂದೂಡಲ್ಪಟ್ಟಿದೆಯಂತೆ. ಹೌದು, ಈ ಮೊದಲು ಬೇರೆ ಚಾನೆಲ್ ಜೊತೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಭವ್ಯಾಗೆ ಇಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದರು. ಟಾಪ್ 6ರಲ್ಲಿ ಭವ್ಯಾ ಗೌಡ ಇದ್ದರು. ಆ ಬಳಿಕ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಶೋನಲ್ಲಿ ಭವ್ಯಾ ಗೌಡ ಅವರು ಸ್ಪರ್ಧೆ ಮಾಡಲೇ ಇಲ್ಲ. ಅನಾರೋಗ್ಯದ ಕಾರಣವನ್ನು ಅವರು ನೀಡಿದರು ಮತ್ತು ಶೋನಿಂದ ಹೊರ ಬಂದರು. ಆ ಬಳಿಕ ಅವರಿಗೆ ಸಿಕ್ಕ ಆಫರ್ ‘ಕರ್ಣ’ ಧಾರಾವಾಹಿ.
View this post on Instagram
ಈ ಧಾರಾವಾಹಿಯ ಪ್ರೋಮೋಶೂಟ್ ಈಗಾಗಲೇ ಆಗಿತ್ತು. ಕಿರಣ್ ರಾಜ್ ಅವರು ಧಾರಾವಾಹಿಯಲ್ಲಿ ನಟಿಸಿದ್ದಾರೆ ಮತ್ತು ಇಂದಿನಿಂದ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಆದರೆ, ಭವ್ಯಾಗೆ ಈ ಮೊದಲು ಬೇರೆ ವಾಹಿನಿ ಜೊತೆ ಮಾಡಿಕೊಂಡ ಒಪ್ಪಂದ ಮುಗಿದಿರಲಿಲ್ಲ. ಈ ಕಾರಣದಿಂದ ವಾಹಿನಿಯವರು ಈ ಧಾರಾವಾಹಿಗೆ ಸ್ಟೇ ತಂದಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಧಾರಾವಾಹಿ ಪ್ರಸಾರವು ಸ್ಥಗಿತಗೊಂಡಿದೆ. ಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಧಾರಾವಾಹಿಯು ಪ್ರಸಾರ ಆರಂಭಿಸಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಗೆ ವಿಘ್ನ; ಇಂದು ಪ್ರಸಾರ ಆಗಲ್ಲ ಸೀರಿಯಲ್
ಭವ್ಯಾ ಗೌಡ ಅವರ ಖಾತೆಯಿಂದ ಈಗಾಗಲೇ ಧಾರಾವಾಹಿಗೆ ಸಂಬಂಧಿಸಿದ ಎಲ್ಲ ಪ್ರೋಮೋಗಳನ್ನು ಡಿಲೀಟ್ ಮಾಡಲಾಗಿದೆ. ಇಷ್ಟೇ ಅಲ್ಲ, ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಅವರು ‘ಪ್ರಕ್ರಿಯೆಯನ್ನು ನಂಬಿ’ ಎಂಬ ಪೋಸ್ಟ್ನ ಹಾಕಿದ್ದಾರೆ. ಈ ಎಲ್ಲ ಕಾರಣದಿಂದ ಧಾರಾವಾಹಿ ಅವರ ಕಾರಣಕ್ಕೆ ನಿಂತಿದ್ದು ಬಹುತೇಕ ಖಚಿತವಾಗಿದೆ ಎನ್ನಬಹುದು. ಶೀಘ್ರವೇ ಧಾರಾವಾಹಿಯ ಹೊಸ ಪ್ರಸಾರ ದಿನಾಂಕವನ್ನು ವಾಹಿನಿ ಘೋಷಿಸಬಹುದು. ಈಗ ಎಂದಿನಂತೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಒಂದು ಗಂಟೆ ಪ್ರಸಾರ ಕಾಣಲಿದೆ. ಭವ್ಯಾ ಗೌಡ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



