‘ಲಿಯೋ’ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕ ಶೋಗಳ ಸಂಖ್ಯೆ ಎಷ್ಟು? ತಮಿಳಿಗೆ ಎಷ್ಟು ಶೋ?
Leo movie in Bengaluru: ವಿಜಯ್ ನಟನೆಯ 'ಲಿಯೋ' ಸಿನಿಮಾಕ್ಕೆ ಬೆಂಗಳೂರಿನಲ್ಲಿ ಎಷ್ಟು ಶೋ ದೊರೆತಿದೆ. ಇದೇ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕ ಶೋಗಳ ಸಂಖ್ಯೆ ಎಷ್ಟು?
ದಳಪತಿ ವಿಜಯ್ (Thalapathy Vijya) ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ‘ಲಿಯೋ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿಯೂ ಈ ಸಿನಿಮಾ ತೆರೆಗೆ ಬರುತ್ತಿದೆ. ಆದರೆ ಬೆಂಗಳೂರಿನಲ್ಲಿ ‘ಲಿಯೋ’ ಸಿನಿಮಾದ ಕನ್ನಡ ಆವೃತ್ತಿಗಿಂತಲೂ ಬೇರೆ ಭಾಷೆಗಳ ಆವೃತ್ತಿಗಳಿಗೆ ಹೆಚ್ಚಿನ ಶೋ ದೊರಕಿದೆ. ಹಾಗಾದರೆ ‘ಲಿಯೋ’ ಸಿನಿಮಾದ ಯಾವ ಭಾಷೆಯ ಆವೃತ್ತಿಗೆ ಬೆಂಗಳೂರಿನಲ್ಲಿ ಎಷ್ಟು ಶೋ ಸಿಕ್ಕಿದೆ? ಇಲ್ಲಿದೆ ಮಾಹಿತಿ.
ಸೋಮವಾರದ ಅಂತ್ಯಕ್ಕೆ ಬೆಂಗಳೂರಿನ 8 ಚಿತ್ರಮಂದಿರಗಳಲ್ಲಿ ಕೇವಲ 10 ಶೋಗಳನ್ನು ‘ಲಿಯೋ’ ಸಿನಿಮಾದ ಕನ್ನಡ ಆವೃತ್ತಿಗೆ ನೀಡಲಾಗಿದೆ. ಶೋ ಸಂಖ್ಯೆ ಇನ್ನೆರಡು ದಿನಗಳಲ್ಲಿ ತುಸು ಹೆಚ್ಚಾಗಬಹುದಾದರು 20ರ ಸಂಖ್ಯೆ ದಾಟುವುದಿಲ್ಲ ಅನ್ನಿಸುತ್ತದೆ. ಆದರೆ ‘ಲಿಯೋ’ ಸಿನಿಮಾದ ತೆಲುಗು ಹಾಗೂ ತಮಿಳು ಆವೃತ್ತಿಗಳಿಗೆ ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರ ಸಿಕ್ಕಿದೆ. ಇನ್ನು ‘ಲಿಯೋ’ ಸಿನಿಮಾದ ಹಿಂದಿ ಆವೃತ್ತಿಗೆ ಬೆಂಗಳೂರಿನಲ್ಲಿ ಒಂದೇ ಚಿತ್ರಮಂದಿರದಲ್ಲಿ ನಾಲ್ಕು ಶೋಗಳು ದೊರಕಿವೆ. ಇನ್ನು ಇದೇ ಸಿನಿಮಾದ ತೆಲುಗು ಆವೃತ್ತಿಗೆ ಎಂಟು ಶೋಗಳು ಮಾತ್ರವೇ ಲಭ್ಯವಾಗಿವೆ. ಈ ಸಂಖ್ಯೆ ಇನ್ನೆರಡು ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಸಿನಿಮಾದ ತಮಿಳು ಆವೃತ್ತಿಗೆ ಭಾರಿ ದೊಡ್ಡ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ದೊರಕಿವೆ. ತಮಿಳು 2ಡಿ ಹಾಗೂ ತಮಿಳು ಐಮ್ಯಾಕ್ಸ್ ಆವೃತ್ತಿ ಒಟ್ಟು ಸೇರಿ ಬೆಂಗಳೂರು ಒಂದರಲ್ಲಿಯೇ ಬರೋಬ್ಬರಿ 960 ಶೋಗಳು ‘ಲಿಯೋ’ ಸಿನಿಮಾಕ್ಕೆ ದೊರಕಿವೆ. ಅದೇ ದಿನ ಬಿಡುಗಡೆ ಆಗುತ್ತಿರುವ ಹಲವು ಕನ್ನಡ ಸಿನಿಮಾಗಳಿಗೆ ಇದರ ಅರ್ಧದಷ್ಟು ಶೋಗಳು ಸಹ ದೊರಕಿಲ್ಲ.
ಇದನ್ನೂ ಓದಿ:Vijay Deverakonda: ವಿಜಯ್ ದೇವರಕೊಂಡ ಈಗ ‘ಫ್ಯಾಮಿಲಿ ಸ್ಟಾರ್’: ಅಕ್ಟೋಬರ್ 16ಕ್ಕೆ ಸಿಗಲಿದೆ ಸರ್ಪ್ರೈಸ್
‘ಲಿಯೋ’ ಸಿನಿಮಾದ ತಮಿಳು ಆವೃತ್ತಿಗೆ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಶೋಗಳು ಲಭಿಸಿರುವುದು ಮಾತ್ರವೇ ಅಲ್ಲದೆ 2000 ರೂಗಳಿಗೂ ಹೆಚ್ಚಿನ ದರದಲ್ಲಿ ಸಿನಿಮಾದ ಐಮ್ಯಾಕ್ಸ್ ಟಿಕೆಟ್ಗಳು ಮಾರಾಟವಾಗುತ್ತಿವೆ. 2ಡಿ ಆವೃತ್ತಿಯ ಟಿಕೆಟ್ಗಳು ಸಹ 900-1000 ರೂಪಾಯಿ ಬೆಲೆಗೆ ಮಾರಾಟವಾಗುತ್ತಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಭಾರಿ ಹಣವನ್ನು ‘ಲಿಯೋ’ ಸಿನಿಮಾ ಬಾಚಿಕೊಳ್ಳುವುದು ಖಾತ್ರಿಯಾಗಿದೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ಪ್ರಸ್ತುತ ಭುಗಿಲೆದ್ದಿದೆ. ಈ ನಡುವೆ ‘ಲಿಯೋ’ ಸಿನಿಮಾ ಭಾರಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಇದು ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ. ‘ಲಿಯೋ’ ಸಿನಿಮಾದ ಬಿಡುಗಡೆ ದಿನ ಬೆಂಗಳೂರಿನ ಅಲ್ಲಲ್ಲಿ ಗಲಾಟೆಗಳಾಗುವ ಸಾಧ್ಯತೆಯೂ ಇದೆ.
‘ಲಿಯೋ’ ಸಿನಿಮಾದಲ್ಲಿ ವಿಜಯ್ ಎರಡು ಭಿನ್ನ ಷೇಡ್ಗಳ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ತ್ರಿಷಾ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟ ಅರ್ಜುನ್ ಸರ್ಜಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Mon, 16 October 23