
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ನಡೆಸಿದ್ದ ಪ್ರತಿಭಟನೆ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಹಗರಣ ಮತ್ತು ಅದರ ಬೆನ್ನಲ್ಲೇ ನಡೆದ ರಾಜಕೀಯ ಹೈಡ್ರಾಮಾಗಳು ಈಗ ಬೆಳ್ಳಿಪರದೆಗೆ ಬರಲು ಸಜ್ಜಾಗಿವೆ. ಸಿಜೆಪಿ ನಡೆಸಿದ ಈ ಹಠಾತ್ ಪ್ರತಿಭಟನೆಯ ತೆರೆಮರೆಯ ಕಥೆಯನ್ನಿಟ್ಟುಕೊಂಡು ದೊಡ್ಡ ಬಜೆಟ್ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಸಿದ್ಧತೆಗಳು ಶುರುವಾಗಿವೆ. ಈ ಚಿತ್ರಕ್ಕೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಎಂಬ ವಿಭಿನ್ನ ಶೀರ್ಷಿಕೆಯನ್ನು ಇಡಲಾಗಿದ್ದು, ಅದನ್ನು ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಲಾಗಿದೆ.
ಜೈಪುರ ಮೂಲದ ಗೋವಿಂದ್ ದೇವ್ ಬ್ರಹ್ಮ ಅವರು ಈ ಚಿತ್ರದ ಹಿಂದಿನ ಮಾಸ್ಟರ್ ಮೈಂಡ್. ಹಗರಣ ಮತ್ತು ಪ್ರತಿಭಟನೆಯ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಅವರು, ಚಿತ್ರಕಥೆಯನ್ನು ಸಿದ್ಧಪಡಿಸಿ ಅಧಿಕೃತವಾಗಿ ಈ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ ತಿಳಿಯದ, ಪ್ರತಿಭಟನೆಯ ಹಿಂದೆ ನಡೆದ ಹಲವು ಆಘಾತಕಾರಿ ಸತ್ಯಗಳು ಮತ್ತು ಆಂತರಿಕ ರಾಜಕೀಯ ತಂತ್ರಗಳು ಈ ಸಿನಿಮಾ ಮೂಲಕ ಜಗತ್ತಿನ ಮುಂದೆ ಬರಲಿವೆ ಎಂದು ಚಿತ್ರತಂಡ ಹೇಳಿದೆ.
ನೀಟ್ ಪೇಪರ್ ಲೀಕ್ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ಆ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದು ಕೇವಲ ಮೇಲ್ನೋಟಕ್ಕೆ ಕಂಡ ರಾಜಕೀಯ ಕಥೆಯಲ್ಲ, ಬದಲಿಗೆ ಈ ಇಡೀ ಚಳುವಳಿಯ ಸ್ಕ್ರಿಪ್ಟ್ ಬರೆದದ್ದು ಯಾರು? ಇದರ ಹಿಂದಿದ್ದವರು ಯಾರು? ಎನ್ನುವ ಅಂಶಗಳನ್ನು ಸಿನಿಮಾ ಒಳಗೊಂಡಿರಲಿದೆ.
A film will be made on the “Cockroach Janta Party” protest.
The film has officially been registered under the name “The Accidental Cockroach Party.”
Jaipur’s Govind Dev “Brahm” announced the film. pic.twitter.com/HXM6wseeJQ
— Spider (@SpiderAlert24) July 30, 2026
ಇದು ಯಾವುದೇ ಸಣ್ಣ ಬಜೆಟ್‌ನ ಸಾಕ್ಷ್ಯಚಿತ್ರವಲ್ಲ. ಬದಲಿಗೆ ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರಿ ಬಜೆಟ್‌ನ ಕಮರ್ಷಿಯಲ್ ಸಿನಿಮಾ. ಸದ್ಯ ಗೋವಿಂದ ದೇವ್ ‘ಬ್ರಹ್ಮ’ ಅವರ ನೇತೃತ್ವದಲ್ಲಿ ಚಿತ್ರಕಥೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಶೂಟಿಂಗ್ ಸ್ಪಾಟ್‌ಗಳ ಹುಡುಕಾಟ ಕೂಡ ಭರದಿಂದ ಸಾಗಿದೆ.
ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಲಕ್ಷ್ಮಣರೇಖೆ ಎಳೆದ ಬೆಂಗಳೂರು ಪೊಲೀಸರು, ಆಗಿದ್ದೇನು?
ಚಿತ್ರದ ನಾಯಕ ನಟರು ಹಾಗೂ ನಿರ್ದೇಶಕರ ಆಯ್ಕೆಗಾಗಿ ಮುಂಬೈನ ಪ್ರಮುಖ ಬಾಲಿವುಡ್ ನಿರ್ಮಾಪಕರೊಂದಿಗೆ ಮಾತುಕತೆ ಅಂತಿಮ ಹಂತ ತಲುಪಿದೆ. ತಾರಾಗಣದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ವೇಳೆಗೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.