Mohanlal Birthday: ಮಲಯಾಳಂ ಚಿತ್ರರಂಗದ ‘ಲಾಲೇಟ್ಟನ್’ ಎಂಬ ಮೋಹನ್​ಲಾಲ್​ಗೆ ಇಂದು 61ನೇ ಹುಟ್ಟುಹಬ್ಬ

Happy Birthday Mohanlal: ಮೋಹನ್​ಲಾಲ್ ಅವರ ಕಳ್ಳ ನಗು, ಕಣ್ಣಲ್ಲೇ ಎಲ್ಲವನ್ನೂ ಹೇಳುವ ರೀತಿ, ಮೀಸೆ ತಿರುವಿ, ಭುಜ ಸ್ವಲ್ಪ ವಾಲಿಸಿ ನಡೆಯುವ ಗತ್ತು ಮತ್ತು ಸಂಭಾಷಣೆಗಳು ಸಿನಿಮಾ ಪ್ರೇಮಿಗಳನ್ನು ಆಕರ್ಷಿಸುತ್ತಲೇ ಇರುತ್ತವೆ.

Mohanlal Birthday: ಮಲಯಾಳಂ ಚಿತ್ರರಂಗದ 'ಲಾಲೇಟ್ಟನ್' ಎಂಬ ಮೋಹನ್​ಲಾಲ್​ಗೆ ಇಂದು 61ನೇ ಹುಟ್ಟುಹಬ್ಬ
ಮೋಹನ್​ಲಾಲ್
Rashmi Kallakatta

|

May 21, 2021 | 10:34 AM

ಮಲಯಾಳಂ ಚಿತ್ರರಂಗದ ಹೆಮ್ಮೆ,The Complete Actor ಮೋಹನ್​ಲಾಲ್​ಗೆ  ಇವತ್ತು 61ನೇ ಹುಟ್ಟುಹಬ್ಬ. ಮೋಹನ್​ಲಾಲ್ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಮಲಯಾಳಿಗಳ ಸಿನಿಮೀಯ ಕನಸುಗಳಿಗೆ ಒಂದು ನೋಟ ಮತ್ತು ಭಾವನೆಯನ್ನು ನೀಡಿದ ಮೋಹನ್ ಲಾಲ್, ಜನರು ಅಕ್ಕರೆಯಿಂದ ಕರೆಯುವ ಹೆಸರೇ ಲಾಲೇಟ್ಟನ್.

‘ತಿರನ್ನೋಟ್ಟಂ’ ಎಂಬ ಸಿನಿಮಾ ಮೂಲಕ ಅವರು ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೋಹನ್​ಲಾಲ್ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಮೋಹನ್​ಲಾಲ್ ಅವರ ಕಳ್ಳ ನಗು, ಕಣ್ಣಲ್ಲೇ ಎಲ್ಲವನ್ನೂ ಹೇಳುವ ರೀತಿ, ಮೀಸೆ ತಿರುವಿ, ಭುಜ ಸ್ವಲ್ಪ ವಾಲಿಸಿ ನಡೆಯುವ ಗತ್ತು ಮತ್ತು ಸಂಭಾಷಣೆಗಳು ಸಿನಿಮಾ ಪ್ರೇಮಿಗಳನ್ನು ಆಕರ್ಷಿಸುತ್ತಲೇ ಇರುತ್ತವೆ.  ಮೋಹನ್​ಲಾಲ್ ಮಲಯಾಳಂ ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ಭಾಷೆಗಳಲ್ಲಿಯೂ ಅದ್ಭುತವಾಗಿ ನಡೆಸಿ ಭಾರತೀಯ ಚಿತ್ರರಂಗದಲ್ಲಿನ ಅದ್ಭುತ ಪ್ರತಿಭೆ ಎಂದು ಜಗತ್ತೇ ಕರತಾಡನ ಮಾಡುವಂತೆ ಮಾಡಿದವರು. ಎರಡು ಬಾರಿ ಶೇಷ್ಠ ನಟ, ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ಲಾಲೇಟ್ಟನ್ ಮಲಯಾಳಂ ಜೊತೆಗೆ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಮಿಂಚಿದ್ದಾರೆ.

ನಡೆದು ಬಂದದಾರಿ

ಮೋಹನ್​ಲಾ​ಲ್ ಅವರು ಮೇ 21, 1960 ರಂದು ಪತ್ತನಂತಿಟ್ಟ ಜಿಲ್ಲೆಯ ಇಲಾಂತೂರ್​ನಲ್ಲಿ ವಿಶ್ವನಾಥನ್ ನಾಯರ್ ಮತ್ತು ಶಾಂತಕುಮಾರಿಯವರ ಎರಡನೆಯ ಮಗನಾಗಿ ಜನಿಸಿದರು. ಮೋಹನ್ ಲಾಲ್ ಅವರ ತಂದೆ ವಿಶ್ವನಾಥನ್ ನಾಯರ್ ಅವರು ಕೇರಳ ಸಚಿವಾಲಯದ ಕಾನೂನು ವಿಭಾಗದಲ್ಲಿ ಅಧಿಕಾರಿಯಾಗಿದ್ದರು. ಮೋಹನ್​ಲಾಲ್ ಅವರ ಬಾಲ್ಯವನ್ನು ತಿರುವನಂತಪುರದ ಮುಡವನ್ ಮುಗಳಿಲ್ ನಲ್ಲಿರುವ ಅಜ್ಜಿ ಮನೆಯಲ್ಲಿ ಕಳೆದರು. ಮೋಹನ್ ಲಾಲ್ ಅವರ ಏಕೈಕ ಸಹೋದರ ಪ್ಯಾರೆಲಾಲ್ ಮತ್ತು ತಂದೆ ವಿಶ್ವನಾಥನ್ ನಾಯರ್ ಈಗಿಲ್ಲ. ‘ಕಿಳಿಕೊಂಜಲ್ ‘ ಚಿತ್ರದಲ್ಲಿ ನಟಿಸಿದ ಪ್ಯಾರೆಲಾಲ್ 2000 ರಲ್ಲಿ ನಿಧನರಾದರು. ಅವರ ತಂದೆ ವಿಶ್ವನಾಥನ್ ನಾಯರ್ ಕೂಡ 2007 ರಲ್ಲಿ ನಿಧನರಾದರು. ವಿಶ್ವಶಾಂತಿ ಫೌಂಡೇಶನ್ ಅನ್ನು ಅವರ ತಂದೆ ವಿಶ್ವನಾಥನ್ ನಾಯರ್ ಮತ್ತು ತಾಯಿ ಶಾಂತಕುಮಾರಿ ಹೆಸರಿನಲ್ಲಿ ಪ್ರಾರಂಭಿಸಲಾಯಿತು.

ಜೀವನವನ್ನು ಬದಲಾಯಿಸಿದ ಮಾಡೆಲ್ ಸ್ಕೂಲ್ ಮೋಹನ್​ಲಾಲ್ ತಿರುವನಂತಪುರಂನ ಮಾಡೆಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ನಟ ಮೋಹನ್​ಲಾಲ್ ಅವರನ್ನು ರೂಪಿಸುವಲ್ಲಿ ಆ ಶಾಲಾ ಜೀವನ ಮತ್ತು ಅವರ ಸ್ನೇಹಿತರು ದೊಡ್ಡ ಪಾತ್ರ ವಹಿಸಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಮತ್ತು ಗಾಯಕ ಎಂ.ಜಿ. ಶ್ರೀಕುಮಾರ್ ಮತ್ತು ಇತರರು ಶಾಲೆಯಲ್ಲಿ ಮೋಹನ್ ಲಾಲ್ ಅವರ ಸಹಪಾಠಿಗಳಾಗಿದ್ದರು. ಆನಂತರ ಇವರು ತಿರುವನಂತಪುರಂನ ಮಾಡೆಲ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ಮೋಹನ್​ಲಾಲ್ ಅವರು ತಮ್ಮ ಶಾಲಾ ದಿನಗಳಲ್ಲಿ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಶಾಲಾ ನಾಟಕಗಳಲ್ಲಿ ಸಕ್ರಿಯರಾಗಿದ್ದರು. ಶಾಲಾ ಕಲೋತ್ಸವದಲ್ಲಿ ಅತ್ಯುತ್ತಮ ನಟನಾಗಿ ಆಯ್ಕೆಯಾದಾಗ ಮೋಹನ್​ಲಾಲ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ‘ಕಂಪ್ಯೂಟರ್ ಬಾಯ್’ ಎಂಬ ನಾಟಕದಲ್ಲಿ ಕುಂಜುಲಾಲ್ ಎಂಬ ತೊಂಬತ್ತು ವರ್ಷದ ವೃದ್ಧನ ಪಾತ್ರವಾಗಿತ್ತು ಅದು.

ಪ್ರಿಯದರ್ಶನ್ ಮತ್ತು ಮಣಿಯನ್ ಪಿಳ್ಳ ರಾಜು ಮೋಹನ್​ಲಾಲ್ ಅವರ ಸ್ನೇಹಿತರಾಗಿದ್ದು, ಶಾಲೆ ಶಿಕ್ಷಣ ನಂತರ ತಿರುವನಂತಪುರಂ ಎಂ.ಜಿ ಕಾಲೇಜಿಗೆ ಸೇರಿದರು. ಅವರ ಜೀವನದಲ್ಲಿ ಸದಾ ಜತೆಯಾಗಿದ್ದ ಆ ಗೆಳೆತನ ಮಲಯಾಳಂ ಚಿತ್ರರಂಗದ ನಾಯಕನಾಗುವ ಮೋಹನ್​ಲಾಲ್ ಅವರ ಪಯಣದ ಮೇಲೆ ಭಾರಿ ಪರಿಣಾಮ ಬೀರಿತು.

ವೃತ್ತಿಜೀವನ ಸ್ನೇಹಿತರು ಪ್ರಾರಂಭಿಸಿದ ಭಾರತ್ ಸಿನಿ  ಗ್ರೂಪ್ ನಿರ್ಮಾಣ ಸಂಸ್ಥೆಯ ‘ತಿರನೋಟಂ’ ಚಿತ್ರದಲ್ಲಿ ಮೋಹನ್ ಲಾಲ್ ಸಿನಿಮಾಗೆ ಪಾದಾರ್ಪಣೆ ಮಾಡಿದರು. 1978 ರಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ಮೋಹನ್​ಲಾಲ್ ಹಾಸ್ಯ ಪಾತ್ರದಲ್ಲಿ ನಟಿಸಿದ್ದರು . ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಚಿತ್ರ ಬಿಡುಗಡೆಯಾಗಲಿಲ್ಲ. 1980 ರಲ್ಲಿ ತನ್ನ 20 ನೇ ವಯಸ್ಸಿನಲ್ಲಿ ಬಿಡುಗಡೆಯಾದ ‘ಮಂಞಿಲ್ ವಿರಿಞಪೂಕ್ಕಳ್’ ಸಿನಿಮಾದಲ್ಲಿ ಅವರ ಖಳನಾಯಕ ನರೇಂದ್ರನ್ ಎಂಬ ಪಾತ್ರ ಮೋಹನ್ ಲಾಲ್ ಅವರ ಜೀವನದ ಹಾದಿಯನ್ನು ಬದಲಾಯಿಸಿದರು. ಅಂದಿನಿಂದ ಮೋಹನ್ ಲಾಲ್ ಅವರ ವಿಜಯೋತ್ಸವ ಮೆರವಣಿಗೆ ಮುಂದುವರೆಯಿತು. 1983 ರಲ್ಲಿ ಮೋಹನ್ ಲಾಲ್ ಸುಮಾರು 25 ಚಿತ್ರಗಳಲ್ಲಿ ನಟಿಸಿದರು. ಲಾಲ್ ಖಳನಾಯಕನಾದನು ಮತ್ತು ನಂತರ ನಾಯಕನಾದನು.

ಮಲಯಾಳಂ ಚಿತ್ರರಂಗದ ಸುವರ್ಣಯುಗ ಎಂದು ಬಣ್ಣಿಸಬಹುದಾದ ಎಂಭತ್ತರ ಮತ್ತು ತೊಂಬತ್ತರ ದಶಕವೂ ಮೋಹನ್​ಲಾಲ್ ಅವರ ವೃತ್ತಿಜೀವನದಲ್ಲಿ ಗಮನಾರ್ಹ ವರ್ಷವಾಗಿತ್ತು. ಮೋಹನ್​ಲಾಲ್ ಅವರು ಆ ಕಾಲದ ಕೆಲವು ಅತ್ಯುತ್ತಮ ನಿರ್ದೇಶಕರು ಮತ್ತು ಚಿತ್ರಕಥೆಗಾರರೊಂದಿಗೆ ಸತ್ಯನ್ ಅಂದಿಕ್ಕಾಡ್, ಲೋಹಿತ್ ದಾಸ್, ಸಿಬಿ ಮಲಯಿಲ್, ಶ್ರೀನಿವಾಸನ್, ಫಾಸಿಲ್ ಮತ್ತು ಐ.ವಿ.ಶಶಿ ಅವರೊಂದಿಗೆ ಕೆಲಸ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯುವ ಅನೇಕ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗಕ್ಕೆ ನೀಡಿದ್ದಾರೆ.

ಪ್ರಶಸ್ತಿಗಳು

2001 ರಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಅವರಿಗೆ ನೀಡಲಾಯಿತು. 2009 ರಲ್ಲಿ ಅವರನ್ನು ಭಾರತೀಯ ಪ್ರಾದೇಶಿಕ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಯಿತು. ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಮೋಹನ್ ಲಾಲ್ ಅವರಿಗೆ ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ.

ಇದನ್ನೂ ಓದಿ: Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​

ವಿಜಯನ್ ಮಾತಾಡ್ತಿರೋದು, ಏನ್ ಸಮಾಚಾರ ಅಂತ ಫೋನ್ ಮಾಡಿ ವಿಚಾರಿಸುತ್ತಾರೆ ; ಪಿಣರಾಯಿ ವಿಜಯನ್ ಬಗ್ಗೆ ಮೋಹನ್​ಲಾಲ್ ಮಾತು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada