ಆಗಸ್ಟ್ 2ರಂದು ಬಾಕ್ಸ್ ಆಫೀಸ್ನಲ್ಲಿ ಈ ಸೆಲೆಬ್ರಿಟಿಗಳ ಮುಖಾಮುಖಿ; ಇಲ್ಲಿದೆ ರಿಲೀಸ್ ವಿವರ
ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ. 2ನೇ ವಾರ ಮತ್ತು 3ನೇ ವಾರದಲ್ಲಿ ಪೈಪೋಟಿ ಜೋರಾಗಿ ಇರಲಿದೆ. ಮೊದಲ ವಾರ (ಆಗಸ್ಟ್ 2) ಸಹ ಹಲವು ಸಿನಿಮಾಗಳು ಜನರ ಎದುರು ಬರುತ್ತಿವೆ. ಹೊಸಬರ ಸಿನಿಮಾಗಳ ಜೊತೆ ಜೊತೆಗೆ ಸ್ಟಾರ್ ಕಲಾವಿದರ ಸಿನಿಮಾಗಳು ಕೂಡ ಬಿಡುಗಡೆ ಆಗುತ್ತಿವೆ. ಪ್ರೇಕ್ಷಕಪ್ರಭು ಯಾವ ಸಿನಿಮಾಗೆ ಮೆಚ್ಚುಗೆ ಸೂಚಿಸುತ್ತಾನೆ ಅಂತ ತಿಳಿಯುವ ಸಮಯ ಬಂದಿದೆ.
ಸಿನಿಮಾ ಮಂದಿಗೆ ಪ್ರತಿ ಶುಕ್ರವಾರ ಕೂಡ ಸ್ಪೆಷಲ್. ಯಾಕೆಂದ್ರೆ, ಹೊಸ ಸಿನಿಮಾಗಳ ಬಿಡುಗಡೆಗೆ ಈ ದಿನವೇ ಬೆಸ್ಟ್. ಪ್ರತಿ ವಾರ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಶುರುವಾಗುವುದು ಶುಕ್ರವಾರದ ಮೊದಲ ಶೋನಿಂದ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬಂದೇ ಬರುತ್ತಾರೆ ಎಂಬ ಹೊಸ ಭರವಸೆ, ಹೊಸ ಆಶಾಭಾವದೊಂದಿಗೆ ಸಿನಿಮಂದಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾರೆ. ಈ ಶುಕ್ರವಾರ (ಆಗಸ್ಟ್ 2) ಕೂಡ ಒಂದಷ್ಟು ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತಿವೆ. ಕನ್ನಡ, ಹಿಂದಿ, ತೆಲುಗು ಮುಂತಾದ ಭಾಷೆಗಳಲ್ಲಿ ಈ ವಾರ ರಿಲೀಸ್ ಆಗಲಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..
ಈ ವಾರ (ಆ.2) ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಬದಲಿಗೆ, ಹೊಸಬರು ಎಂಟ್ರಿ ನೀಡುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಇರುವ ‘ಅಡವಿಕಟ್ಟೆ’ ಸಿನಿಮಾ ತೆರೆಗೆ ಬರುತ್ತಿದೆ. ಅಭಿಜಿತ್, ಅನು ಪ್ರೇಮಾ, ನಾಗರಾಜ್ ಎನ್, ಶಂಕರ್, ಮಂಜುಳಾ ರೆಡ್ಡಿ, ಶಾಂತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯೂತ್ಫುಲ್ ಕಾಮಿಡಿ ಕಥಾವಸ್ತು ಇರುವ ‘ಇಶ್ಕ್’ ಸಿನಿಮಾ ಕೂಡ ಈ ವಾರವೇ ಬಿಡುಗಡೆ ಆಗುತ್ತಿದೆ. ರಾಜು, ಶ್ವೇತಾ ಭಟ್, ಚೇತನ್ ದುರ್ಗಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ನ ಅನುಭವಿ ಕಲಾವಿದರಾದ ಅಜಯ್ ದೇವಗನ್, ಟಬು ಅವರು ನಟಿಸಿದ ‘ಔರೋ ಮೇ ಕಹಾ ಧಮ್ ತಾ’ ಸಿನಿಮಾ ಆಗಸ್ಟ್ 2ರಂದು ಬಿಡುಗಡೆ ಆಗುತ್ತಿದೆ. ಒಂದು ಭಿನ್ನವಾದ ಪ್ರೇಮ್ ಕಹಾನಿ ಈ ಸಿನಿಮಾದಲ್ಲಿ ಇದೆ. ಟ್ರೇಲರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಈ ಸಿನಿಮಾದ ಜೊತೆ ಹಿಂದಿಯ ‘ಉಲಜ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ‘ಉಲಜ್’ ಚಿತ್ರದಲ್ಲಿ ಜಾನ್ವಿ ಕಪೂರ್, ರೋಷನ್ ಮ್ಯಾಥೀವ್, ಗುಲ್ಶನ್ ದೇವಯ್ಯ, ಆದಿಲ್ ಹುಸೇನ್ ಮುಂತಾದವರು ನಟಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಇದರೊಂದಿಗೆ ಹಾರರ್ ಕಹಾನಿ ಇರುವ ‘ಬಾರ್ಡೋವಿ’ ಸಿನಿಮಾ ಕೂಡ ತೆರೆಕಾಣುತ್ತಿದೆ. ಅದರಲ್ಲಿ ಛಾಯಾ ಕದಂ, ಚಿತ್ತರಂಜನ್ ಗಿರಿ, ವಿರಾಟ್ ಮಡ್ಕೆ ಮುಂತಾದವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಶೇ.2 ಸೆಸ್ ವಿಧಿಸಿದ್ದಕ್ಕೆ ಚಿತ್ರರಂಗದ ವಿರೋಧ; ಮಂಡಳಿ ಅಧ್ಯಕ್ಷರು ಹೇಳಿದ್ದೇನು?
ತೆಲುಗಿನಲ್ಲಿ ಈ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕೃಷ್ಣ ವಂಶಿ ನಟನೆಯ ‘ಅಲನಾಟಿ ರಾಮಚಂದ್ರುಡು’, ಪವನ್ ಕುಮಾರ್ ಕೆ. ಅಭಿನಯದ ‘ಅರ್ವೇಜ್ ಸ್ಟುಡೆಂಟ್ ನಾನಿ’, ಅಲ್ಲಿ ಸಿರೀಶ್ ಮುಖ್ಯ ಪಾತ್ರ ಮಾಡಿರುವ ‘ಬಡ್ಡಿ’, ಅಶ್ವಿನ್ ಬಾಬು ನಟಸಿರುವ ‘ಶಿವಂ ಭಜೆ’, ರಾಜ್ ತರುಣ್ ನಟನೆಯ ‘ತಿರಗಬದರಸಾಮಿ’, ಶ್ರೀ ಕಮಲ್ ಅಭಿನಯಿಸಿದ ‘ಉಷಾ ಪರಿಣಯಂ’, ವರುಣ್ ಸಂದೇಶ್ ನಟನೆಯ ‘ವಿರಾಜ್’ ಚಿತ್ರಗಳು ತೆರೆಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.