
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ (Thug Life Movie) ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿಲ್ಲ. ‘ಥಗ್ ಲೈಫ್’ ಚಿತ್ರ ಹೀನಾಯ ವಿಮರ್ಶೆ ಪಡೆಯಿತು. ಅಲ್ಲದೆ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿಲ್ಲ. ಈ ಚಿತ್ರದಿಂದ ಕಮಲ್ ಹಾಸನ್ ದೊಡ್ಡ ನಷ್ಟ ಅನುಭವಿಸಿದರು. ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರುವುದಕ್ಕೆ ಅವರಿಗೆ ಆದ ನಷ್ಟ ಎಷ್ಟು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದರು. ಈ ಹೇಳಿಕೆ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತು. ಅವರು ಕ್ಷಮೆ ಕೇಳಬೇಕು ಎಂದು ಹೇಳಿದರೂ ಕ್ಷಮೆ ಕೇಳಿಲ್ಲ. ಈ ಕಾರಣಕ್ಕೆ ಸಿನಿಮಾ ರಿಲೀಸ್ಗೆ ಕರ್ನಾಟಕದಲ್ಲಿ ಅವಕಾಶ ನೀಡಿಲ್ಲ. ಕರ್ನಾಟಕದ ಕಲೆಕ್ಷನ್ ಸೇರಿದ್ದರೆ ಸಿನಿಮಾ ಸ್ವಲ್ಪ ಚೇತರಿಕೆ ಕಾಣುತ್ತಿತ್ತೇನೋ. ಆದರೆ, ಹಾಗಾಗಿಲ್ಲ.
ಜೂನ್ 5ರಂದು ‘ಥಗ್ ಲೈಫ್ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಈವರೆಗೆ ಕರ್ನಾಟಕದಲ್ಲಿ ಬಿಡುಗಡೆ ಕಂಡಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದ ಕಾರಣ ಸುಮಾರು 30 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದು ಊಹಿಸಲಾಗಿದೆ. ತಮಿಳು ಸಿನಿಮಾಗಳಿಗೆ ಬೆಂಗಳೂರಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಈ ಮೊದಲು ಅನೇಕ ತಮಿಳು ಚಿತ್ರಗಳು ಕರ್ನಾಟಕದಿಂದ ಒಳ್ಳೆಯ ಕಮಾಯಿ ಮಾಡಿದ ಉದಾಹರಣೆ ಇದೆ.
ಈ ಪ್ರಕರಣದಲ್ಲಿ ಕಮಲ್ ಹಾಸನ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಸಿನಿಮಾ ರಿಲೀಸ್ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಯಾವುದೇ ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರದ ಕಡೆಯಿಂದ ಸೂಕ್ತ ಭದ್ರತೆ ಒದಗಿಸುವಂತೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ‘ಥಗ್ ಲೈಫ್’ ಬಿಡುಗಡೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ
‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್, ತ್ರಿಷಾ, ಅಭಿರಾಮಿ, ಸಿಂಬು ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಕಮಲ್ ಹಾಸನ್ ಅವರದ್ದೇ ನಿರ್ಮಾಣ ಇದೆ. ಮಣಿರತ್ನ. ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.