Vallabhaneni Janardhan: ‘ಮಾನಸ ಸರೋವರ’ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಿ ಗೆದ್ದಿದ್ದ ವಲ್ಲಭನೇನಿ ಜನಾರ್ಧನ್ ನಿಧನ
Vallabhaneni Janardhan Death: 100ಕ್ಕೂ ಅಧಿಕ ಸಿನಿಮಾಗಳಲ್ಲಿ ವಲ್ಲಭನೇನಿ ಜನಾರ್ಧನ್ ಬಣ್ಣ ಹಚ್ಚಿದ್ದರು. ತೀವ್ರ ಅನಾರೋಗ್ಯದಿಂದ ಅವರು 63ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದಾರೆ.
2022ರಲ್ಲಿ ತೆಲುಗು ಚಿತ್ರರಂಗ (Tollywood) ಅನೇಕ ಹಿರಿಯರನ್ನು ಕಳೆದುಕೊಂಡಿದೆ. ‘ಸೂಪರ್ ಸ್ಟಾರ್’ ಕೃಷ್ಣ ನಿಧನದ ಬಳಿಕ ಕೈಕಾಲ ಸತ್ಯನಾರಾಯಣ, ಚಲಪತಿ ರಾವ್ ಅವರು ಇಹಲೋಕ ತ್ಯಜಿಸಿದ ಸುದ್ದಿ ಆಘಾತ ಉಂಟು ಮಾಡಿತ್ತು. ಅದರ ಬೆನ್ನಲ್ಲೇ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ವಲ್ಲಭನೇನಿ ಜನಾರ್ಧನ್ (Vallabhaneni Janardhan) ಅವರು ಕೊನೆಯುಸಿರು ಎಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಗುರುವಾರ (ಡಿ.29) ಅವರು ನಿಧನಾದರು. ವಲ್ಲಭನೇನಿ ಜನಾರ್ಧನ್ ಅಗಲಿಕೆಗೆ (Vallabhaneni Janardhan Death) ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ವಲ್ಲಭನೇನಿ ಜನಾರ್ಧನ್ ಅವರಿಗೆ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಇತ್ತು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗುರುತಿಸಿಕೊಂಡಿದ್ದರು. 21ನೇ ವಯಸ್ಸಿನಲ್ಲಿಯೇ ಅವರಿಗೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಮೂಡಿತ್ತು. ಅವರು ನಿರ್ಮಾಣ ಮಾಡಿದ ಮೊದಲ ಸಿನಿಮಾ ಪೂರ್ಣಗೊಳ್ಳಲೇ ಇಲ್ಲ. ಬಳಿಕ ಕನ್ನಡದ ‘ಮಾನಸ ಸರೋವರ’ ಚಿತ್ರವನ್ನು 1983ರಲ್ಲಿ ತೆಲುಗಿಗೆ ರಿಮೇಕ್ ಮಾಡಿ ದೊಡ್ಡ ಗೆಲುವು ಪಡೆದರು.
ತೆಲುಗಿನಲ್ಲಿ ವಲ್ಲಭನೇನಿ ಜನಾರ್ಧನ್ ನಿರ್ಮಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆದವು. 1991ರಲ್ಲಿ ಚಿರಂಜೀವಿ ನಟನೆಯ ‘ಗ್ಯಾಂಗ್ ಲೀಡರ್’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್ ಕಲಾವಿದರ ಜೊತೆಗೂ ಅವರು ನಟಿಸಿದ್ದರು. ಧಾರಾವಾಹಿಯಲ್ಲೂ ನಟಿಸಿ ಅವರು ಫೇಮಸ್ ಆಗಿದ್ದರು.
100ಕ್ಕೂ ಅಧಿಕ ಸಿನಿಮಾಗಳಲ್ಲಿ ವಲ್ಲಭನೇನಿ ಜನಾರ್ಧನ್ ಬಣ್ಣ ಹಚ್ಚಿದ್ದರು. ಅವರ ಪುತ್ರಿ ಅಭಿನಯ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲಿ ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Thu, 29 December 22