‘ಪದವಿ ಪೂರ್ವ’, ‘ಜಮಾಲಿಗುಡ್ಡ’ ಜತೆ ಬರ್ತಿವೆ ಹಲವು ಸಿನಿಮಾ; ವರ್ಷದ ಕೊನೇ ವಾರವೂ ಸಖತ್ ಪೈಪೋಟಿ
New Kannada Movies: ಕನ್ನಡದ 9 ಸಿನಿಮಾಗಳು ಈ ವಾರ (ಡಿ.30) ಬಿಡುಗಡೆ ಆಗುತ್ತಿವೆ. ಅವುಗಳ ಜೊತೆಗೆ ಪರಭಾಷೆಯ ಚಿತ್ರಗಳು ಕೂಡ ಪೈಪೋಟಿ ನೀಡುತ್ತಿವೆ.
2022ರ ಮುಕ್ತಾಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳು ಬಿಡುಗಡೆಯಾಗಿ ಸದ್ದು ಮಾಡಿವೆ. ಈಗ ವರ್ಷದ ಕೊನೇ ಶುಕ್ರವಾರದ ಡಿಸೆಂಬರ್ 30ರಂದು ಕೂಡ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಭಿನ್ನ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣ ಆಗಿರುವ ಈ ಸಿನಿಮಾಗಳ ನಡುವೆ ಪೈಪೋಟಿ ಜೋರಾಗಿದೆ. ಡಾಲಿ ಧನಂಜಯ್ ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ (Once upon a Time in Jamaligudda), ಹೊಸ ಹುಡುಗರ ‘ಪದವಿ ಪೂರ್ವ’ (Padavi Poorva), ಸ್ಟಾರ್ಟಪ್ ಕನಸಿನ ಕಥೆ ಹೇಳುವ ‘ಮೇಡ್ ಇನ್ ಬೆಂಗಳೂರು’ (Made in Bengaluru) ಸೇರಿದಂತೆ ಹಲವು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ. ಪ್ರೇಕ್ಷಕರು ಯಾರಿಗೆ ವಿಜಯದ ಮಾಲೆ ಹಾಕಲಿದ್ದಾರೆ ಎಂಬುದು ಸದ್ಯದ ಕುತೂಹಲ.
‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’:
ನಟ ಧನಂಜಯ್ ಅವರು ಒಂದೇ ರೀತಿಯ ಪಾತ್ರಗಳಿಗೆ ಜೋತುಬಿದ್ದಿಲ್ಲ. ಡಾಲಿ ಪಾತ್ರವನ್ನು ಅವರ ಅಭಿಮಾನಿಗಳು ಸಖತ್ ಇಷ್ಟಪಟ್ಟರೂ ಕೂಡ ಅದೇ ಇಮೇಜ್ನಲ್ಲಿ ಧನಂಜಯ್ ಮುಂದುವರಿಯಲಿಲ್ಲ. ಡಿಫರೆಂಟ್ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ. ಅಂಥ ಭಿನ್ನ ಪ್ರಯತ್ನವಾಗಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ ಅವರ ಜೊತೆ ಅದಿತಿ ಪ್ರಭುದೇವ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ.
ಹೊಸ ಪ್ರತಿಭೆಗಳ ‘ಪದವಿ ಪೂರ್ವ’:
ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಅವರು ನಿರ್ದೇಶನ ಮಾಡಿರುವ ‘ಪದವಿ ಪೂರ್ವ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಗಮನ ಸೆಳೆದಿವೆ. ಪೃಥ್ವಿ ಶ್ಯಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್ ಮುಂತಾದ ಹೊಸ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
‘ಮೇಡ್ ಇನ್ ಬೆಂಗಳೂರು’:
ಹೊಸ ಆಲೋಚನೆಗಳಿಗೆ ಬೆಂಗಳೂರು ಹೆಸರುವಾಸಿ. ಅನೇಕ ಯಶಸ್ವಿ ಸ್ಟಾರ್ಟಪ್ಗಳು ಶುರುವಾಗಿದ್ದು ಇದೇ ನೆಲದಲ್ಲಿ. ಅಂಥ ಒಂದು ಕಥೆಯನ್ನು ಇಟ್ಟುಕೊಂಡು ‘ಮೇಡ್ ಇನ್ ಬೆಂಗಳೂರು’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್, ಮಧುಸೂದನ್ ಗೋವಿಂದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ.
ಇದನ್ನೂ ಓದಿ: Dhananjay: ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಡಾಲಿ ಧನಂಜಯ್
‘ನಾನು ಅದು ಮತ್ತು ಸರೋಜ’:
ಲೋಸ್ ಮಾದ ಯೋಗಿ, ಅಪೂರ್ವಾ ಭಾರದ್ವಜ್, ದತ್ತಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನಾನು ಅದು ಮತ್ತು ಸರೋಜ’ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಪ್ರೇಕ್ಷಕರ ವಲಯದಲ್ಲಿ ಈ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ‘ಅದು’ ಎಂದರೆ ಏನು ಅಂತ ತಿಳಿಯಲು ಸಿನಿಮಾ ನೋಡಬೇಕು ಎಂದು ಸಿನಿಪ್ರಿಯರು ಕಾದಿದಾರೆ.
ಇದನ್ನೂ ಓದಿ: ಡಿ.30ಕ್ಕೆ ಹೊಸ ಹುಡುಗರ ‘ಪದವಿ ಪೂರ್ವ’ ಸಿನಿಮಾ ರಿಲೀಸ್; ಇದು ಪಿಯುಸಿ ದಿನಗಳ ಕಹಾನಿ
ಮರ್ಡರ್ ಮಿಸ್ಟರಿ ಕಥಾಹಂದರ ಇರುವ ‘ದ್ವಿಪಾತ್ರ’ ಸಿನಿಮಾದ ಜೊತೆಗೆ ‘ಜೋರ್ಡನ್’, ‘ಆಲ್ಫಾ’, ‘ಲವ್ ಸ್ಟೋರಿ 1998’, ‘ರುಧೀರ ಕಣಿವೆ’ ಸಿನಿಮಾಗಳು ಕೂಡ ಈ ವಾರ ಬಿಡುಗಡೆ ಆಗಿತ್ತಿವೆ. ಪರಭಾಷೆಯ ಕೆಲವು ಚಿತ್ರಗಳು ಸಹ ಪೈಪೋಟಿಗೆ ಇಳಿಯುತ್ತಿವೆ. ಈಗಾಗಲೇ ಉತ್ತಮ ಪ್ರದರ್ಶನ ಕಾಣುತ್ತಿರುವ ‘ವೇದ’ ಚಿತ್ರವೂ ಜನರನ್ನು ಸೆಳೆದುಕೊಳ್ಳುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Thu, 29 December 22