ವೀರಪ್ಪನ್ ಮಗಳು ಈಗ ಹೀರೋಯಿನ್; ‘ಮಾವೀರನ್ ಪಿಳ್ಳೈ’ ಚಿತ್ರದಲ್ಲಿ ಬಣ್ಣ ಹಚ್ಚಿದ ವಿಜಯಲಕ್ಷ್ಮೀ
ವೀರಪ್ಪನ್ ಮಗಳು ವಿಜಯಲಕ್ಷ್ಮೀ ಅವರಿಗೆ ಚಿಕ್ಕಂದಿನಿಂದಲೂ ಬಣ್ಣ ಹಚ್ಚಬೇಕು ಎನ್ನುವ ಆಸೆ ಇತ್ತು. ‘ಮಾವೀರನ್ ಪಿಳ್ಳೈ' ಸಿನಿಮಾ ಮೂಲಕ ಈ ಆಸೆ ಈಡೇರುತ್ತಿದೆ.
ಚಿತ್ರರಂಗ ಅನೇಕರನ್ನು ಆಕರ್ಷಿಸುತ್ತದೆ. ವಿವಿಧ ಕ್ಷೇತ್ರದವರು ಇಲ್ಲಿಗೆ ಬರುತ್ತಾರೆ. ವೀರಪ್ಪನ್ (Veerappan) ಮಗಳು ವಿಜಯಲಕ್ಷ್ಮೀ ಈಗ ಸಿನಿಮಾ ಲೋಕಕ್ಕೆ ಕಾಲಿಡುತ್ತಿದ್ದಾರೆ. ‘ಮಾವೀರನ್ ಪಿಳ್ಳೈ’ (Maaveeran Pillai ) ಹೆಸರಿನ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರದಲ್ಲೇ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಲಿದೆ. ಈ ಸಿನಿಮಾದಿಂದ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಇದೆ. ಈ ಕಾರಣಕ್ಕೆ ವಿಜಯಲಕ್ಷ್ಮೀ ಸಿನಿಮಾ ಒಪ್ಪಿಕೊಂಡಿದ್ದಾರೆ.
ಚೆನ್ನೈನಲ್ಲಿ ಇತ್ತೀಚೆಗೆ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆದಿದೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿ ಹಾಕಿದ್ದರು.
ವೀರಪ್ಪನ್ ಮಗಳು ವಿಜಯಲಕ್ಷ್ಮೀ ಅವರಿಗೆ ಚಿಕ್ಕಂದಿನಿಂದಲೂ ಬಣ್ಣ ಹಚ್ಚಬೇಕು ಎನ್ನುವ ಆಸೆ ಇತ್ತು. ‘ಮಾವೀರನ್ ಪಿಳ್ಳೈ’ ಸಿನಿಮಾ ಮೂಲಕ ಈ ಆಸೆ ಈಡೇರುತ್ತಿದೆ. ‘ಮೊದಲಿನಿಂದ ನಟಿಸುವ ಆಸೆ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆ ಕುರಿತು ಸಿನಿಮಾದ ಕಥೆ ಇದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.
ನಿರ್ಮಾಪಕ ರಾಜ ಮಾತನಾಡಿ, ‘ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದಿದ್ದಾರೆ.
ವೀರಪ್ಪನ್ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ನಿರ್ದೇಶಕ ಪೇರರಸು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ‘ತಮಿಳು ಚಿತ್ರರಂಗದಲ್ಲಿ ಮುಖ್ಯಮಂತ್ರಿ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್ ಮಗಳು ಸಹ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’ ಎಂದರು.
‘ವೋಟ್ ಬ್ಯಾಂಕ್ ದೃಷ್ಟಿಯಿಂದ ರಾಜಕಾರಿಣಿಗಳು ಕುಡಿತವನ್ನು ನಿಷೇಧಿಸುವ ಬಗ್ಗೆ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತದ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಕುಡಿತದಿಂದ ಪ್ರತೀದಿನ ನೂರಾರು ಜನ ಸಾಯುತ್ತಿದ್ದಾರೆ’ ಎಂದು ನಿರ್ದೇಶಕರು ಆತಂಕವ್ಯಕ್ತಪಡಿಸಿದರು.
ಇದನ್ನೂ ಓದಿ: ಇಲ್ಲಿರುವ ಗಡ್ಡಣ್ಣನವರ್ ಮತ್ತು ಮೀಸೆಯಪ್ಪನವರ್ ಪೈಕಿ ಯಾರೊಬ್ಬರೂ ವೀರಪ್ಪನ್ ಸಂಬಂಧಿಕರಲ್ಲ!
ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನಕಾರರಾಗಿ ದುಡಿದಿದ್ದಾರೆ.
Published On - 2:42 pm, Sat, 25 March 23