ಖ್ಯಾತ ನಟ ದಿಲೀಪ್ ಕುಮಾರ್ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ
Dilip Kumar Hospitalized: ದೇಶದೆಲ್ಲೆಡೆ ಕೊರೊನಾ ವೈರಸ್ ಎರಡನೇ ಅಲೆ ಹರಡಿದೆ. ಈ ಸಂದರ್ಭದಲ್ಲಿ ದಿಲೀಪ್ ಕುಮಾರ್ ಆರೋಗ್ಯದಲ್ಲಿ ವ್ಯತ್ಯಯ ಆಗಿರುವುದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಭಾರತೀಯ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಅವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಭಾನುವಾರ (ಜೂ.6) ಬೆಳಗ್ಗೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್ ಕುಮಾರ್ ಅವರಿಗೆ ಈಗ 98 ವರ್ಷ ವಯಸ್ಸು. ಹಾಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಸದ್ಯ ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ದಿಲೀಪ್ ಕುಮಾರ್ ಆರೋಗ್ಯ ಪರಿಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಕಳೆದ ತಿಂಗಳು ಕೂಡ ಇದೇ ಆಸ್ಪತ್ರೆಗೆ ದಿಲೀಪ್ ಕುಮಾರ್ ದಾಖಲಾಗಿದ್ದರು. ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅವರು ತೆರಳಿದ್ದರು ಎನ್ನಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈಗ ಅವರು ಮತ್ತೆ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಆರಂಭ ಆಗುತ್ತಿದ್ದಂತೆಯೇ ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಲು ಆರಂಭಿದ್ದರು.
ದಿಲೀಪ್ ಕುಮಾರ್ ಮತ್ತು ಅವರ ಪತ್ನಿ ಸೈರಾ ಬಾಬು ಅವರು ಲಾಕ್ಡೌನ್ ಆರಂಭ ಆಗುವುದಕ್ಕೂ ಮುನ್ನವೇ ಐಸೊಲೇಟ್ ಆಗಿದ್ದರು. ಡಿ.11ರಂದು ದಿಲೀಪ್ ಕುಮಾರ್ ಜನ್ಮದಿನ. ಆದರೆ, 2020ರಲ್ಲಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಅದೇ ವರ್ಷ ದಿಲೀಪ್ ಸಹೋದರರಾದ ಅಸ್ಲಮ್ ಖಾನ್ ಮತ್ತು ಎಹಸಾನ್ ಖಾನ್ ಅವರು ಕೊವಿಡ್ನಿಂದ ನಿಧರಾದರು. ಹಾಗಾಗಿ ಇಡೀ ಕುಟುಂಬ ನೋವಿನಲ್ಲಿ ಇದ್ದಿದ್ದರಿಂದ ಬರ್ತ್ಡೇ ಆಚರಣೆಗೆ ಬ್ರೇಕ್ ಹಾಕಲಾಗಿತ್ತು.
1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್ ಕುಮಾರ್ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್, ಮುಘಲ್-ಏ-ಆಜಮ್, ಶಕ್ತಿ, ನಯಾ ದೌರ್, ರಾಮ್ ಔರ್ ಶ್ಯಾಮ್ ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ದಿಲೀಪ್ ಕುಮಾರ್ ನಟಿಸಿದ ಕೊನೇ ಸಿನಿಮಾ ‘ಖಿಲಾ’ 1998ರಲ್ಲಿ ತೆರೆಕಂಡಿತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ಬಣ್ಣ ಹಚ್ಚಿಲ್ಲ.
ದೇಶದೆಲ್ಲೆಡೆ ಕೊರೊನಾ ವೈರಸ್ ಎರಡನೇ ಅಲೆ ಹರಡಿದೆ. ಈ ಸಂದರ್ಭದಲ್ಲಿ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:
‘ಅನಾರೋಗ್ಯ..ಸರ್ಜರಿ’: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪೋಸ್ಟ್ ನೋಡಿ ಅಭಿಮಾನಿಗಳಲ್ಲಿ ಆತಂಕ
ಶೋ ಶೂಟಿಂಗ್ ವೇಳೆ ಪ್ರಿಯಾಂಕಾ ಪತಿ ನಿಕ್ ಜೋನಸ್ಗೆ ಗಾಯ, ಆಸ್ಪತ್ರೆಗೆ ದಾಖಲು