‘ಮರಾಠ ಮಂದಿರ್’ ಮಾಲೀಕರನ್ನು ಭೇಟಿ ಆದ ವಿಜಯ್ ದೇವರಕೊಂಡ; ತಪ್ಪು ತಿಳಿವಳಿಕೆಗೆ ಫುಲ್ ಸ್ಟಾಪ್
Vijay Devarakonda | Manoj Desai: ವಿಜಯ್ ದೇವರಕೊಂಡ ಮತ್ತು ಮನೋಜ್ ದೇಸಾಯಿ ಪರಸ್ಪರ ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚಿತ್ರರಂಗದಲ್ಲಿ ಕೆಲವೊಮ್ಮೆ ವಿನಾ ಕಾರಣ ವಿವಾದಗಳು ಹುಟ್ಟಿಕೊಳ್ಳುತ್ತವೆ. ನಟ ವಿಜಯ್ ದೇವರಕೊಂಡ (Vijay Devarakonda) ಅವರಿಗೆ ಹಾಗೆಯೇ ಆಗಿದೆ. ‘ಲೈಗರ್’ (Liger) ಸಿನಿಮಾ ಪ್ರಮೋಷನ್ ವೇಳೆ ಅವರು ನೀಡಿದ ಒಂದು ಹೇಳಿಕೆಯಿಂದ ಪರ-ವಿರೋಧದ ಚರ್ಚೆ ಶುರುವಾಯಿತು. ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎಂದು ಅವರು ಹೇಳಿದ್ದಕ್ಕೆ ಮುಂಬೈನ ‘ಮರಾಠ ಮಂದಿರ್’ (Maratha Mandir) ಚಿತ್ರಮಂದಿರದ ಮಾಲಿಕರಾದ ಮನೋಜ್ ದೇಸಾಯಿ ಗರಂ ಆಗಿ ಪ್ರತಿಕ್ರಿಯಿಸಿದರು. ‘ವಿಜಯ್ ದೇವರಕೊಂಡ ಅವರದ್ದು ಅಹಂಕಾರದ ಸ್ವಭಾವ’ ಎಂದು ಅವರು ಹೇಳಿದರು. ಆದರೆ ಈ ವಿವಾದಕ್ಕೆ ಈಗ ತೆರೆ ಬಿದ್ದಿದೆ. ವಿಜಯ್ ದೇವರಕೊಂಡ ಮತ್ತು ಮನೋಜ್ ದೇಸಾಯಿ ಅವರು ಪರಸ್ಪರ ಭೇಟಿಯಾಗಿ ಮಾತುಕಥೆ ನಡೆಸಿದ್ದಾರೆ. ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದಾರೆ.
‘ಲೈಗರ್’ ಸಿನಿಮಾ ತೆರೆಕಾಣುವುದಕ್ಕೂ ಮುನ್ನ ಈ ಚಿತ್ರವನ್ನು ಬಹಿಷ್ಕಾರ ಮಾಡಲು ಕೆಲವರು ಹುನ್ನಾರ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ್ ದೇವರಕೊಂಡ ಅವರು, ‘ತಾಯಿಯ ಆಶೀರ್ವಾದ ಇದೆ. ಜನರ ಪ್ರೀತಿ, ದೇವರ ಬೆಂಬಲ ಹಾಗೂ ನಮ್ಮೊಳಗೆ ಕಿಚ್ಚು ಇದೆ. ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎಂದು ಹೇಳಿಕೆ ನೀಡಿದ್ದರು. ಅದನ್ನು ನೋಡಿ ಮನೋಜ್ ದೇಸಾಯಿ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದರು.
ಮನೋಜ್ ದೇಸಾಯಿ ಅವರು ತಮ್ಮ ವಿರುದ್ಧ ಮಾತನಾಡಿದ್ದು ತಿಳಿಯುತ್ತಿದ್ದಂತೆಯೇ ವಿಜಯ್ ದೇವರಕೊಂಡ ಅವರು ಮುಂಬೈಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರೂ ಪರಸ್ಪರ ಕುಳಿತು ಮಾತನಾಡಿದ್ದಾರೆ. ಆ ಮೂಲಕ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದಾರೆ. ನಂತರ ಮನೋಜ್ ದೇಸಾಯಿ ಅವರ ಕಾಲಿಗೆ ನಮಸ್ಕರಿಸಿದ ವಿಜಯ್ ದೇವರಕೊಂಡ ಅವರು ಆಶೀರ್ವಾದ ಪಡೆದಿದ್ದಾರೆ.
‘ವಿಜಯ್ ದೇವರಕೊಂಡ ತುಂಬ ಒಳ್ಳೆಯ ಹುಡುಗ. ವಿನಯವಂತ ವ್ಯಕ್ತಿ. ಆತನಿಗೆ ನನ್ನ ಪ್ರೀತಿ ಯಾವಾಗಲೂ ಇರಲಿದೆ. ಅವನಿಗೆ ಒಳ್ಳೆಯ ಭವಿಷ್ಯ ಇದೆ. ಆತನ ಎಲ್ಲ ಸಿನಿಮಾಗಳನ್ನು ನಾನು ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತೇನೆ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಮನೋಜ್ ದೇಸಾಯಿ ಹೇಳಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಮನೋಜ್ ದೇಸಾಯಿ ಅವರ ಭೇಟಿಯ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಜಯ್ ದೇವರಕೊಂಡ ಅವರ ವಿನಯವಂತಿಕೆಯನ್ನು ಕಂಡು ಜನರು ಭೇಷ್ ಎನ್ನುತ್ತಿದ್ದಾರೆ. ಸದ್ಯ, ‘ಲೈಗರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ದೇವರಕೊಂಡ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Mon, 29 August 22








