ನನ್ನ ಮದುವೆ ಹೀಗಿರಬೇಕು: ಮದುವೆ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ
Vijay Deverakonda: ನಟ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನನ್ನ ವೈವಾಹಿಕ ಜೀವನ ಹೀಗಿರಬೇಕು ಎಂದು ಉದಾಹರಣೆ ನೀಡಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಗಳಲ್ಲಿ ಒಬ್ಬರಾಗಿರುವ ವಿಜಯ್ ದೇವರಕೊಂಡ (Vijay Deverakonda), ತಮ್ಮ ಇತ್ತೀಚಿನ ಸೋಲಿನಿಂದ ಮೈ ಕೊಡವಿಕೊಂಡು ಹೊಸದೊಂದು ಸಾಹಸಕ್ಕೆ ತಯಾರಾಗಿದ್ದಾರೆ. ಅವರ ನಟನೆಯ ‘ಖುಷಿ‘ (Khushi) ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಸದ್ಯಕ್ಕೆ ಒಂದರಹಿಂದೊಂದು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿವೆ. ಹೊಸ ಹಾಡೊಂದರ ಬಿಡುಗಡೆ ಸಮಯದಲ್ಲಿ ವಿಜಯ್ ದೇವರಕೊಂಡ ತಮ್ಮ ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ಒಂದೊಮ್ಮೆ ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗಿರಬೇಕೆಂದು ಉದಾಹರಣೆಯೊಂದನ್ನು ಸಹ ನೀಡಿದ್ದಾರೆ.
‘ಖುಷಿ’ ಸಿನಿಮಾದ ಎರಡನೇ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ‘ಆರಾಧ್ಯ’ ಎಂದು ಪ್ರಾರಂಭವಾಗುವ ಹಾಡು ಮಧುರವಾಗಿದ್ದು ಸದ್ಯಕ್ಕೆ ವಿಡಿಯೋ ಸಹಿತ ಹಾಡಿನ ಬದಲಿಗೆ ಲಿರಿಕ್ಸ್ ಸಹಿತ ಕೆಲವಷ್ಟೆ ವಿಡಿಯೋ ತುಣುಕುಗಳನ್ನು ಒಳಗೊಂಡ ಹಾಡನ್ನು ಬಿಡುಗಡೆ ಮಾಡಲಾಗಿದೆ. ಹಾಡಿನ ಬಗ್ಗೆ ಮಾತನಾಡಿರುವ ವಿಜಯ್ ದೇವರಕೊಂಡ, ಹಾಡು ಹಾಗೂ ಹಾಡಿನ ಚಿತ್ರೀಕರಣ ಅದ್ಭುತವಾಗಿ ಮೂಡಿಬಂದಿದೆ. ಹೊಸದಾಗಿ ಮದುವೆಯಾಗಿರುವ ಜೋಡಿಯ ಮೊದಲ ಒಂದು ವರ್ಷದ ಸಮಯದಲ್ಲಿ ನಡೆಯುವ ಸರಸ, ತುಂಟಾಟ, ರೊಮ್ಯಾನ್ಸ್ ಅನ್ನು ಹಾಡಿನಲ್ಲಿ ತೋರಿಸಲಾಗಿದೆ. ಒಂದೊಮ್ಮೆ ನಾನು ಮದುವೆ ಆದರೆ ನನ್ನ ವೈವಾಹಿಕ ಜೀವನ ಹೀಗೆಯೇ ಇರಬೇಕು ಅಂದುಕೊಳ್ಳುತ್ತೇನೆ” ಎಂದಿದ್ದಾರೆ.
”ನನಗೆ ಮದುವೆ ಆಗಿಲ್ಲ, ಒಂದೊಮ್ಮೆ ಮದುವೆ ಆದರೆ ನನ್ನ ವೈವಾಹಿಕ ಜೀವನ ಆರಾಧ್ಯ ಹಾಡಿನಂತಿರಬೇಕು” ಎಂದಿರುವ ವಿಜಯ್, ಮುಂದುವರೆದು, ”ನನಗೆ ಮದುವೆ ಆಗದೇ ಇರಬಹುದು ಆದರೆ ಆ ಹಾಡಿನಲ್ಲಿ ತೋರಿಸಲಾಗಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂಥಹವೇ, ನಾನು ಅನುಭವಿಸಿರುವ ದೃಶ್ಯಗಳನ್ನೇ ಸೇರಿಸಿ ಆ ಹಾಡು ಮಾಡಲಾಗಿದೆ” ಎಂದಿದ್ದಾರೆ. ವಿಜಯ್ ಮದುವೆಯಾಗದಿದ್ದರೂ ವೈವಾಹಿಕ ಜೀವನ ಸರಸ, ತುಂಟಾಟ ಇತರೆಗಳನ್ನು ಹೇಗೆ ಅನುಭವಿಸಿದರು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:Rashmika Mandanna: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿರೋದು ನಿಜ; ವಿಡಿಯೋ ಸಾಕ್ಷಿ ತಂದ ಫ್ಯಾನ್ಸ್
‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಮಂತಾ ನಾಯಕಿಯಾಗಿ ನಟಿಸಿದ್ದಾರೆ. ಬಹಳ ಪ್ರೀತಿಸುವ ಇಬ್ಬರು ಪರಸ್ಪರ ಮದುವೆಯಾಗಿ ಸುಖ ಸಂಸಾರ ಸಾಗಿಸುವ ಆ ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಅದನ್ನು ಆ ಜೋಡಿ ಹೇಗೆ ಹ್ಯಾಂಡಲ್ ಎಂಬುದರ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಮಂತಾ ಅನಾರೋಗ್ಯದ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಿದೆ. ಆದರೆ ಇದೀಗ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ವಿಜಯ್ ದೇವರಕೊಂಡ ನಟಿಸಿದ್ದ ಈ ಹಿಂದಿನ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಹೀನಾಯ ಸೋಲು ಕಂಡಿತು. ಈ ಸಿನಿಮಾದ ಮೇಲೆ ವಿಜಯ್ ದೇವರಕೊಂಡ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದರು ಆದರೆ ತೀವ್ರವಾದ ಸೋಲನ್ನು ಸಿನಿಮಾ ಕಂಡಿತು. ನಿರ್ದೇಶಕ, ನಿರ್ಮಾಪಕರೂ ಆಗಿದ್ದ ಪುರಿ ಜಗನ್ನಾಥ್ ಆಸ್ತಿಗಳನ್ನು ಮಾರಿ ವಿತರಕರ ಹಣ ವಾಪಸ್ಸು ಮಾಡಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ