
ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಸ್ಟಾರ್ ನಟ ಆದರೆ ಅವರ ಸಿನಿಮಾ ಯಶಸ್ಸಾಗಿ ವರ್ಷಗಳೇ ಆಗಿವೆ. ‘ಅರ್ಜುನ್ ರೆಡ್ಡಿ’ ಹಾಗೂ ‘ಗೀತಾ ಗೋವಿಂದಂ’ ಬಳಿಕ ವಿಜಯ್ ನಟಿಸಿದ ಇನ್ಯಾವ ಸಿನಿಮಾ ಸಹ ದೊಡ್ಡ ಯಶಸ್ಸು ಗಳಿಸಿಲ್ಲ. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನಟಿಸಿದ ಸಿನಿಮಾಗಳಂತೂ ಅಟ್ಟರ್ ಫ್ಲಾಫ್ ಆಗಿವೆ. ಇದೀಗ ‘ರಣಬಾಲಿ’ ಹೆಸರಿನ ಸಿನಿಮಾನಲ್ಲಿ ವಿಜಯ್ ನಟಿಸಿದ್ದು, ಈ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಆಗುವ ಮುಂಚೆಯೇ ವಿಜಯ್ ದೇವರಕೊಂಡ ತಮ್ಮ ಮೇಲೆ ತಮ್ಮ ಸಿನಿಮಾಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗುತ್ತಿದ್ದು, ತಮ್ಮ ಸಿನಿಮಾಗಳನ್ನು ಕೊಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ನಿನ್ನೆಯಷ್ಟೆ (ಅಕ್ಟೋಬರ್ 09) ‘ರಣಬಾಲಿ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ವಿಜಯ್ ದೇವರಕೊಂಡ ‘ಯೋಜಿತ ಆನ್ಲೈನ್ ದಾಳಿ’ಯ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನು ಹಾಗೂ ತಮ್ಮ ಸಿನಿಮಾಗಳನ್ನು ಗುರಿಯಾಗಿಸಿಕೊಂಡು ಹಲವು ವರ್ಷಗಳಿಂದಲೂ ಆನ್ಲೈನ್ ದಾಳಿಗಳು ನಡೆಯುತ್ತಲೇ ಇವೆ ಎಂದಿರುವ ವಿಜಯ್ ದೇವರಕೊಂಡ, ಪ್ರೇಕ್ಷಕರು ಅಂಥಹಾ ಉದ್ದೇಶಪೂರ್ವಕ ಟ್ರೋಲುಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದಿದ್ದಾರೆ.
‘ಸಿನಿಮಾ ಬಿಡುಗಡೆ ಆದಾಗೆಲ್ಲ ಒಮ್ಮೆಲೆ ಹಲವು ರೀಲುಗಳು ಸಿನಿಮಾದ ವಿರುದ್ಧ ಪ್ರಚಾರ ಮಾಡಲು ಆರಂಭವಾಗುತ್ತವೆ. ಇದು ಬೇಕೆಂದೇ ಮಾಡುತ್ತಿರುವ ಪಿತೂರಿ ಎಂದು ಅರ್ಥವಾಗುತ್ತದೆ. ಏಕೆಂದರೆ ಒಮ್ಮೆಲೆ ಒಂದೇ ರೀತಿಯ ವಿಷಯವುಳ್ಳ ರೀಲ್ಸ್ಗಳನ್ನು ಅಪ್ಲೋಡ್ ಮಾಡಲಾಗುತ್ತದೆ. 50-60 ಜನ ಪ್ರತಿಯೊಬ್ಬರು 20-30 ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಮಾಡಿಕೊಂಡು ಕೂತಿರುತ್ತಾರೆ. ಇಂಥವರು ಹಣ ಪಡೆದು ಕೆಲವರ ಸಿನಿಮಾಗಳ ವಿರುದ್ಧ ಯೋಜಿತ ದಾಳಿ ಮಾಡಿ ಸಿನಿಮಾ ಅನ್ನು ಥುಳಿಯುವ ಪ್ರಯತ್ನ ಮಾಡುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ:ವಿವಾದಾತ್ಮಕ ಶೋನಲ್ಲಿ ಅತಿಥಿಗಳಾಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
ಮುಂದುವರೆದು ಮಾತನಾಡಿ, ‘ಈಗ ನೋಡಿ ನಮ್ಮ ಸಿನಿಮಾ ಬಿಡುಗಡೆ ಆದ ಮೇಲೆ ಒಮ್ಮೆಲೆ ಒಂದೇ ರೀತಿಯ ನೆಗೆಟಿವ್ ರೀಲ್ಗಳು ಅಪ್ಲೋಡ್ ಆಗುತ್ತವೆ. ‘ಬಾ ಗುರು ‘ಜೈಲರ್ 2’ ನೋಡೋಕೆ ಹೋಗೋಣ, ‘ರಣಬಾಲಿ’ ಬೇಡ ಎಂಬ ರೀಲುಗಳು ಹರಿದಾಡುತ್ತವೆ. ಅಂಥಹುವನ್ನು ನೋಡಿದ ಕೂಡಲೇ ಗೊತ್ತಾಗಿ ಬಿಡುತ್ತದೆ. ಇದು ವಿಮರ್ಶೆ ಅಲ್ಲ ಬದಲಿಗೆ ಪೇಯ್ಡ್ ನಿಂದನೆ ಎಂದು, ಪ್ರೇಕ್ಷಕರು ಅಂಥಹಾ ಯೋಜಿತ ವಿಮರ್ಶೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು’ ಎಂದಿದ್ದಾರೆ.
‘ರಣಬಾಲಿ’ ಸಿನಿಮಾವು ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿದೆ. ಬ್ರಿಟೀಷರ ವಿರುದ್ಧ ನಡೆದ ಹೋರಾಟದ ಕತೆ ಸಿನಿಮಾನಲ್ಲಿದೆ. ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾನಲ್ಲಿ ಹಾಲಿವುಡ್ ಸ್ಟಾರ್ ಅರ್ನಾಲ್ಡ್ ವೋಸ್ಲೊ ವಿಲನ್ ಆಗಿ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Fri, 9 October 26