ಪಾಕ್ ವಿರುದ್ಧ ಭಾರತ ಯುದ್ಧ ಮಾಡುವ ಅಗತ್ಯ ಇಲ್ಲ: ವಿಜಯ್ ದೇವರಕೊಂಡ ಹೀಗೆ ಹೇಳಿದ್ದು ಯಾಕೆ?
ಹಲವು ಸೆಲೆಬ್ರಿಟಿಗಳು ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ವಿಜಯ್ ದೇವರಕೊಂಡ ಅವರು ಈ ಕುರಿತು ಮಾತನಾಡಿದರು. ‘ಕಾಶ್ಮೀರ ಎಂದಿಗೂ ಭಾರತಕ್ಕೆ ಸೇರಿದ್ದು’ ಎಂದಿದ್ದಾರೆ ವಿಜಯ್ ದೇವರಕೊಂಡ.

ಭಯೋತ್ಪಾದಕರು ಪಹಲ್ಗಾಮ್ ಹತ್ಯಾಕಾಂಡ (Pahalgam Attack) ನಡೆಸಿದ್ದರ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ‘ರೆಟ್ರೋ’ (Retro) ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ನಡೆಯಿತು. ಸೂರ್ಯ ನಟನೆಯ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ಗೆ ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಕಾಶ್ಮೀರದ ಬಗ್ಗೆ ಮಾತನಾಡಿದರು. ವಿಜಯ್ ದೇವರಕೊಂಡ (Vijay Deverakonda) ನಟಿಸಿದ್ದ ‘ಖುಷಿ’ ಸಿನಿಮಾದ ಶೂಟಿಂಗ್ ಕೂಡ ಕಾಶ್ಮೀರದಲ್ಲಿ ನಡೆದಿತ್ತು.
‘ಈ ಭಯೋತ್ಪಾದಕರಿಗೆ ಬುದ್ಧಿ ಇಲ್ಲ. ಅವರಿಗೆ ಶಿಕ್ಷಣ ಇಲ್ಲ. ಪಾಕಿಸ್ತಾನದವರಿಗೆ ಯಾವುದೇ ಮೂಲ ಸೌಕರ್ಯ ಸರಿಯಾಗಿ ಇಲ್ಲ. ಅವರ ಸಮಸ್ಯೆಗಳನ್ನೇ ಅವರಿಗೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ಕಾಶ್ಮೀರದ ಮೇಲೆ ದಾಳಿ ಮಾಡುವ ಉದ್ಧಟತನ ತೋರಿಸುತ್ತಾರೆ. ಕಾಶ್ಮೀರ ಎಂದಿಗೂ ಭಾರತಕ್ಕೆ ಸೇರಿದ್ದು’ ಎಂದು ವಿಜಯ್ ದೇವರಕೊಂಡ ಅವರು ಹೇಳಿದ್ದಾರೆ.
‘ಭಾರತೀಯರಾದ ನಾವು ಮನುಷ್ಯರಾಗಿ ಇರಬೇಕು. ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವ ಅವಶ್ಯಕತೆ ಕೂಡ ಇಲ್ಲ ಅಂತ ನನಗೆ ಅನಿಸುತ್ತದೆ. ಯಾಕೆಂದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪಾಕಿಸ್ತಾನದ ಜನರೇ ಬೇಸತ್ತು, ಒಂದು ದಿನ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ’ ಎಂದಿದ್ದಾರೆ ವಿಜಯ್ ದೇವರಕೊಂಡ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತರಾದವರ ಕುಟುಂಬದವರಿಗೆ ವಿಜಯ್ ದೇವರಕೊಂಡ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿದ ಶಾರುಖ್ ಖಾನ್; ಉಗ್ರರ ದಾಳಿಗೆ ಬಾಲಿವುಡ್ ಪ್ರತಿಕ್ರಿಯೆ
‘ರೆಟ್ರೋ’ ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಅವರು ಜೋಡಿಯಾಗಿ ನಟಿಸಿದ್ದಾರೆ. ‘ಸೂರ್ಯ ಅಣ್ಣ ಯಾವಾಗಲೂ ನನ್ನ ನೆಚ್ಚಿನ ನಟ. ಅವರ ನಟನೆ ನೋಡಿ ನನಗೆ ಅಚ್ಚರಿ ಆಗುತ್ತದೆ. ಅವರ ಸಿನಿಮಾಗಳು ನನಗೆ ಸ್ಫೂರ್ತಿ ಆಗಿವೆ. ಅವರ ರೀತಿಯೇ ನಾನು ನಟಿಸಬೇಕು, ಅವರ ರೀತಿ ಸಿನಿಮಾ ಮಾಡಬೇಕು’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.