ಆ ಮನೆ ಖರೀದಿಸುತ್ತೇನೆ: ಮನ್ನತ್ ಬಂಗಲೆ ನೋಡಿ ಪತ್ನಿಗೆ ಮೊದಲೇ ಮಾತು ಕೊಟ್ಟಿದ್ದ ಶಾರುಖ್
ಆರಂಭದಲ್ಲಿ ಆ ಮನೆಗೆ ಶಾರುಖ್ ಖಾನ್ ಮತ್ತು ಗೌರಿ ಖಾನ್ ‘ಜನ್ನತ್’ ಎಂದು ಹೆಸರು ಇಟ್ಟಿದ್ದರು. ಆದರೆ ನಂತರದಲ್ಲಿ ‘ಮನ್ನತ್’ ಎಂದು ಬದಲಾಯಿಸಿದರು. ಆ ಮನೆ ಕೊಂಡುಕೊಳ್ಳಬೇಕು ಎಂದು ಶಾರುಖ್ ಖಾನ್ ಅವರು 1997ರಲ್ಲೇ ಕನಸು ಕಂಡಿದ್ದರು. ಈಗ ಆ ಮನೆಯ ಬೆಲೆ ಅಂದಾಜು 200 ಕೋಟಿ ರೂಪಾಯಿ.

ನಟ ಶಾರುಖ್ ಖಾನ್ (Shah Rukh Khan) ಅವರು ಭಾರತೀಯ ಚಿತ್ರರಂಗದ ಸಕ್ಸಸ್ಫುಲ್ ನಟ. ಆದರೆ ಆ ಯಶಸ್ಸು ರಾತ್ರೋ ರಾತ್ರಿ ಸಿಕ್ಕಿದ್ದಲ್ಲ. ಮಧ್ಯಮವರ್ಗದ ಕುಟುಂಬದಿಂದ ಬಂದ ಅವರು ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟರು. ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ, ನಂತರ ಅತಿ ಶ್ರೀಮಂತ ನಟರಲ್ಲಿ ಒಬ್ಬರಾಗಿ ಬೆಳೆದರು. ಮುಂಬೈನಲ್ಲಿ ಇರುವ ಅವರ ‘ಮನ್ನತ್’ (Mannat) ಬಂಗಲೆ ಬೆಲೆ ಬರೋಬ್ಬರಿ 200 ಕೋಟಿ ರೂಪಾಯಿ! ಆ ಬಂಗಲೆಯನ್ನು ಖರೀದಿಸುವುದಾಗಿ 1997ರಲ್ಲಿ ಪತ್ನಿ ಗೌರಿ ಖಾನ್ (Gauri Khan) ಅವರಿಗೆ ಶಾರುಖ್ ಮಾತು ಕೊಟ್ಟಿದ್ದರು. ಆ ಮಾತನ್ನು ಅವರು ಉಳಿಸಿಕೊಂಡರು. ಆ ಬಗ್ಗೆ ನಿರ್ದೇಶಕ ಅಜೀಜ್ ಮಿಶ್ರಾ ಮಾತನಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಅಜೀಜ್ ಮಿಶ್ರಾ ಅವರು ಶಾರುಖ್ ಖಾನ್ ಅವರ ‘ಮನ್ನತ್’ ಬಂಗಲೆ ಹಿಂದಿರುವ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಯೆಸ್ ಬಾಸ್’ ಸಿನಿಮಾಗೆ ಅಜೀಜ್ ಮಿಶ್ರಾ ಅವರು ನಿರ್ದೇಶನ ಮಾಡಿದ್ದರು. ಆಗ ನಡೆದ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.
1997ರಲ್ಲಿ ಮನ್ನತ್ ಬಂಗಲೆ ಎದುರಿನಲ್ಲೇ ‘ಯೆಸ್ ಬಾಸ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಆ ಮನೆಯನ್ನು ನೋಡಿ ಶಾರುಖ್ ಖಾನ್ ಅವರಿಗೆ ಆಸೆ ಆಯಿತು. ಮುಂದೊಂದು ದಿನ ಆ ಬಂಗಲೆಯನ್ನು ಕೊಂಡುಕೊಳ್ಳಬೇಕು ಎಂದು ಶಾರುಖ್ ಖಾನ್ ಕನಸು ಕಂಡರು. ಆ ಬಗ್ಗೆ ಪತ್ನಿ ಗೌರಿ ಖಾನ್ಗೆ ಅವರು ಪ್ರಾಮಿಸ್ ಮಾಡಿದ್ದರು. ಆ ಕುರಿತು ಅಜೀಜ್ ಮಿಶ್ರಾ ಮಾತನಾಡಿದ್ದಾರೆ.
‘ಮನ್ನತ್ಗೆ ಹತ್ತಿರದಲ್ಲಿ ಇದ್ದ ನನ್ನ ಮನೆಯಲ್ಲಿ ಶಾರುಖ್ ಖಾನ್ ಉಳಿದುಕೊಂಡಿದ್ದರು. ಆಗ ಶಾರುಖ್ ಮತ್ತು ಗೌರಿಗೆ ಇನ್ನೂ ಚಿಕ್ಕ ವಯಸ್ಸು. ಅವರಿಗೆ ಸಾಕಷ್ಟು ಕನಸುಗಳು ಇದ್ದವು. ಆಗ ಅವರು ಅಲ್ಲಿ ವಾಕಿಂಗ್ ಹೋಗುತ್ತಿದ್ದರು. ಮುಂದೊಂದು ದಿನ ಆ ಮನೆ ಕೊಂಡುಕೊಳ್ಳುತ್ತೇನೆ ಎಂದು ಗೌರಿಗೆ ಶಾರುಖ್ ಖಾನ್ ಮಾತು ಕೊಟ್ಟರು. ಬದುಕು ಅವರ ಪರವಾಗಿತ್ತು. ಆ ಕನಸನ್ನು ಅವರು ನನಸು ಮಾಡಿಕೊಂಡರು’ ಎಂದು ಅಜೀಜ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿದ ಶಾರುಖ್ ಖಾನ್; ಉಗ್ರರ ದಾಳಿಗೆ ಬಾಲಿವುಡ್ ಪ್ರತಿಕ್ರಿಯೆ
ಹಾಗಂತ ಮನ್ನತ್ ಬಂಗಲೆಯನ್ನು ಕೊಂಡುಕೊಳ್ಳುವುದು ಅಷ್ಟು ಸುಲಭ ಆಗಿರಲಿಲ್ಲ. ಆಗ ಸಾಕಷ್ಟು ಅಡೆತಡೆಗಳು ಉಂಟಾಗಿದ್ದವು. ಕಾನೂನಿನ ತೊಡಕುಗಳು ಕೂಡ ಇದ್ದವು. ಅಕ್ಕ-ಪಕ್ಕದ ಜಾಗದವರ ಸಮಸ್ಯೆಗಳ ಸಹ ಎದುರಾಗಿದ್ದವು. ಅವುಗಳೆಲ್ಲವನ್ನೂ ಎದುರಿಸಿ ಶಾರುಖ್ ಖಾನ್ ಅವರು ಮನ್ನತ್ ಬಂಗಲೆ ಕೊಂಡುಕೊಂಡರು. ಮೊದಲಿಗೆ ಆ ಮನೆಯ ಹೆಸರು ‘ಜನ್ನತ್’ ಎಂದು ಹೆಸರು ಇಡಲಾಗಿತ್ತು. ಬಳಿಕ 2005ರಲ್ಲಿ ‘ಮನ್ನತ್’ ಎಂದು ಹೆಸರು ಬದಲಾಯಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








