ಹೊಸ ಕತೆ ರೆಡಿ ಮಾಡ್ತಿದ್ದಾರೆ ಬಾಹುಬಲಿ ಖ್ಯಾತಿಯ ಈ ಕತೆಗಾರ; ನಾಯಕ ಯಾರು ಗೊತ್ತಾ?

Bhajarangi Bhaijaan: ಭಾರತೀಯ ಹಿಂದಿ ಚಲನಚಿತ್ರಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದರು. ಇದೀಗ ಅದರ ಎರಡನೇ ಭಾಗಕ್ಕೆ ಕತೆಗಾರ ವಿಜಯೇಂದ್ರ ಪ್ರಸಾದ್ ತಯಾರಿ ನಡೆಸುತ್ತಿರುವುದನ್ನು ಅವರೇ ಬಹಿರಂಗಪಡಿಸಿದ್ದಾರೆ.

ಹೊಸ ಕತೆ ರೆಡಿ ಮಾಡ್ತಿದ್ದಾರೆ ಬಾಹುಬಲಿ ಖ್ಯಾತಿಯ ಈ ಕತೆಗಾರ; ನಾಯಕ ಯಾರು ಗೊತ್ತಾ?
ಭಜರಂಗಿ ಭಾಯಿಜಾನ್ ಚಿತ್ರದ ಒಂದು ದೃಶ್ಯ(ಎಡ), ವಿಜಯೇಂದ್ರ ಪ್ರಸಾದ್(ಬಲ)

ಬಾಹುಬಲಿ ಖ್ಯಾತಿಯ ಕತೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ತಮಗೆ ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಟ್ಟ ಚಿತ್ರ ‘ಭಜರಂಗಿ ಭಾಯಿಜಾನ್​’ನ ಎರಡನೇ ಅವತರಣಿಕೆಯನ್ನು ಬರೆಯಲು ತಯಾರಿ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ. ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ‘ಭಜರಂಗಿ ಭಾಯಿಜಾನ್’ ಚಿತ್ರವು ಭಾರತೀಯ ಕಮರ್ಷಿಯಲ್ ಚಲನಚಿತ್ರಗಳಲ್ಲಿ ವಿಭಿನ್ನ ಪ್ರಯೋಗ ನಡೆಸಿದ ಚಿತ್ರಗಳಲ್ಲಿ ಪ್ರಮುಖವಾಗಿದೆ. ಆ ಚಿತ್ರಕ್ಕೆ ಇಂದಿಗೆ ಆರು ವರ್ಷ ತುಂಬಿದ ಸಂದರ್ಭದಲ್ಲಿ ವಿಜಯೇಂದ್ರ ಪ್ರಸಾದ್ ಈ ಮಾಹಿತಿ ಹೊರಹಾಕಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಇವರೊಂದಿಗೆ ಹರ್ಷಾಲಿ ಮಲ್ಹೋತ್ರಾ, ನವಾಜುದ್ದೀನ್ ಸಿದ್ದಿಕಿ ಮೊದಲಾದವರು ಕಾಣಿಸಿಕೊಂಡಿದ್ದರು. ಬಾಲಿವುಡ್​ ಸುದ್ದಿಗಳನ್ನು ಪ್ರಕಟ ಮಾಡುವ ಪತ್ರಿಕೆಯೊಂದು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಿಜಯೇಂದ್ರ ಪ್ರಸಾದ್ ಅವರು ಭಜರಂಗಿ ಭಾಯಿಜಾನ್ ಚಿತ್ರದ ಎರಡನೇ ಭಾಗದ ಕತೆಯನ್ನು ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ. ಅದನ್ನು ಅವರು ಸಲ್ಮಾನ್​ಗೂ ತಿಳಿಸಿದ್ದಾರೆ.

ಈ ಕುರಿತು ವಿಜಯೇಂದ್ರ ಪ್ರಸಾದ್ ಮಾತುಗಳಲ್ಲೇ ಹೇಳುವುದಾದರೆ, ನಾನು ಭಜರಂಗಿ ಭಾಯಿಜಾನ್ 2ಗೆ ಕತೆಗೆ ಸಿದ್ಧತೆ ನಡೆಸುತ್ತಿರುವುದು ನಿಜ. ಕೆಲ ಸಮಯದ ಹಿಂದೆ ನಾನು ಸಲ್ಮಾನ್ ಅವರನ್ನು ಭೇಟಿಯಾದಾಗ ಅವರಿಗೆ ಕತೆಯ ಒಂದೆಳೆಯನ್ನು ಹೇಳಿದ್ದೆ, ಅವರೂ ಸಹ ಉತ್ಸುಕರಾಗಿದ್ದಾರೆ. ಆದರೆ ಕತೆಯನ್ನು ಮುಂದುವರೆಸಲು ನನಗಿನ್ನೂ ದ್ರವ್ಯಗಳು(ವಿಷಯ) ಬೇಕು. ಅದಕ್ಕಾಗಿ ನಾನು ಹುಡುಕುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಯಾವುದೇ ಚಿತ್ರದ ಹಿಂದಿನ ಅಥವಾ ಮುಂದಿನ ಅವತರಣಿಕೆಯನ್ನು ನಿರ್ದೇಶಕರು ಅಥವಾ ನಿರ್ಮಾಪಕರು ಘೋಷಿಸುತ್ತಾರೆ. ಆದರೆ ಭಜರಂಗಿ ಭಾಯಿಜಾನ್ 2 ಚಿತ್ರದಲ್ಲಿ ಬರಹಗಾರ ವಿಜಯೇಂದ್ರ ಪ್ರಸಾದ್ ಅವರೇ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.  ಭಜರಂಗಿ ಭಾಯಿಜಾನ್ ಚಿತ್ರಕ್ಕೆ ಬರುವುದದರೆ, ಅದು ಕೇವಲ ಸಲ್ಮಾನ್ ಖಾನ್ ಅವರ ಚಿತ್ರ ಬದುಕಿನ ಅತ್ಯುತ್ತಮ ಚಿತ್ರಗಳಲ್ಲೊಂದಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೂ ಅದು ಹಲವು ದಾಖಲೆಗಳನ್ನು ನಿರ್ಮಿಸಿದೆ. ಪಿಕೆ ಚಿತ್ರದ ನಂತರ ಈ ಚಿತ್ರ 300ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಎಂಬ ದಾಖಲೆ ಬರೆಯಿತು. ಇದುವರೆಗೂ, ಈ ಚಿತ್ರ ಭಾರತೀಯ ಬಾಕ್ಸ್ ಆಫೀಸ್ ಪಟ್ಟಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಜುಲೈ 17ಕ್ಕೆ ಈ ಚಿತ್ರಕ್ಕೆ ಆರು ವರ್ಷ ತುಂಬಿತು.

ಬರಹಗಾರ ವಿಜಯೇಂದ್ರ ಪ್ರಸಾದ್ ಖಾತೆಯಲ್ಲಿ ಈಗಾಗಲೇ ಹಲವು ಸಿನಿಮಾಗಳಿವೆ. 79 ವರ್ಷದ ಅವರು ಈಗಲೂ ತುಂಬು ಉತ್ಸಾಹದಿಂದ ಬರವಣಿಗೆ ನಡೆಸುತ್ತಿರುವುದಲ್ಲದೇ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಅವರ ಪುತ್ರ ರಾಜಮೌಳಿ ನಿರ್ದೇಶನದಲ್ಲಿ ಆರ್​ಆರ್​ಆರ್ ಸದ್ಯದಲ್ಲೇ ತೆರೆಗೆ ಬರಲಿದೆ. ಹಾಗೆಯೇ ಅವರು ರಂಜಿತ್ ಸಿಂಗ್ ದಿಸಲೆ (RanjithSinh Disale)ಯವರ ಬಯೋಪಿಕ್​ ಮತ್ತು ‘ಸೀತಾ ಮಾ’ ಚಿತ್ರಕ್ಕೆ ಬರೆಯುತ್ತಿದ್ದಾರೆ.

ಇದನ್ನೂ ಓದಿ: ಕಾಲಿವುಡ್​ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾಳೆ ಖ್ಯಾತ ನಟಿ ಶ್ರೀದೇವಿ ಮಗಳು!

ಇದನ್ನೂ ಓದಿ: ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?

(Vijayendra Prasad reveals that he is preparing for Bhajarangi Bhaijaan 2)