‘Vikram’: ಬಾಹುಬಾಲಿ-2 ದಾಖಲೆಯನ್ನು ಉಡೀಸ್ ಮಾಡಿದ ವಿಕ್ರಮ್..!
Vikram Movie Collection: ಚಿತ್ರದ ಅಂತರರಾಷ್ಟ್ರೀಯ ವಿತರಣಾ ಪಾಲುದಾರರಾಗಿರುವ ಎಪಿ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವಾಧ್ವಾ ಕೂಡ "ವಿಕ್ರಮ್'ನ ಸಾಗರೋತ್ತರ ಕಲೆಕ್ಷನ್ 100 ಕೋಟಿ ರೂ. ದಾಟಿದೆ ಎಂದು ತಿಳಿಸಿದ್ದಾರೆ.
ಕಾಲಿವುಡ್ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಕಮಲ್ ಹಾಸನ್ (Kamal Haasan) ನಟನೆ ವಿಕ್ರಮ್ (Vikram) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರವು ತಮಿಳುನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅದರ ಫಲವಾಗಿ ಇದೀಗ ಬಾಕ್ಸಾಫೀಸ್ನ್ನು ಲೂಟಿ ಮಾಡುತ್ತಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಕಾಲಿವುಡ್ ಬಾಕ್ಸಾಫೀಸ್ ಲೆಕ್ಕಾಚಾರವನ್ನು ಬುಡಮೇಲಾಗಿಸುವತ್ತ ಹೊರಟಿದೆ. ಅದರಲ್ಲೂ ಬಾಹುಬಲಿ-2 ಚಿತ್ರ ನಿರ್ಮಿಸಿದ ದಾಖಲೆಯನ್ನೇ ಮುರಿದು ಮುನ್ನುಗ್ಗುತಿದೆ. ಹೌದು, ಐದು ವರ್ಷಗಳ ಹಿಂದೆ ತೆರೆಕಂಡಿದ್ದ ಬಾಹುಬಲಿ-2 ಚಿತ್ರವು ಕಾಲಿವುಡ್ನಲ್ಲಿ ಹೊಸ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ವಿಕ್ರಮ್ ಮುರಿದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಾಲಿವುಡ್ ಬಾಕ್ಸಾಫೀಸ್ನಲ್ಲಿ ಬಾಹುಬಲಿ-2 ಚಿತ್ರವು ಕೇವಲ 17 ದಿನಗಳಲ್ಲಿ 152 ಕೋಟಿ ಕಲೆಹಾಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿತ್ತು. ಅಂದರೆ ತಮಿಳುನಾಡಿನಲ್ಲಿ ಕೇವಲ 17 ದಿನಗಳಲ್ಲಿ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಚಿತ್ರವೆಂಬ ದಾಖಲೆ ರಾಜಮೌಳಿ ನಿರ್ದೇಶಿಸಿದ ಬಾಹುಬಲಿ ಚಿತ್ರದ ಹೆಸರಿನಲ್ಲಿತ್ತು. ಆದರೀಗ ಈ ಭರ್ಜರಿ ದಾಖಲೆಯನ್ನು ವಿಕ್ರಮ್ ಮುರಿದು ಹೊಸ ಇತಿಹಾಸ ನಿರ್ಮಿಸಿದೆ.
ವಿಕ್ರಮ್ ಚಿತ್ರವು ಕಾಲಿವುಡ್ ಬಾಕ್ಸಾಫೀಸ್ನಲ್ಲಿ ಕೇವಲ 17 ದಿನಗಳಲ್ಲಿ 155 ಕೋಟಿ ರೂ. ಕೊಳ್ಳೆ ಹೊಡೆದಿದೆ. ಈ ಮೂಲಕ 5 ವರ್ಷಗಳ ಹಿಂದೆ ಬಾಹುಬಲಿ-2 ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಮುರಿದು ವಿಕ್ರಮ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಮಲ್ ಹಾಸನ್, ಫಹದ್ ಫಾಸಿಲ್, ವಿಜಯ್ ಸೇತುಪತಿ ಅಭಿನಯಕ್ಕೆ ಅಭಿಮಾನಿಗಳು ಮರುಳಾಗಿದ್ದು, ಹೀಗಾಗಿ ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚುತ್ತಾ ಹೋಗುತ್ತಿದೆ.
ಇನ್ನು ಚಿತ್ರದ ಅಂತರಾಷ್ಟ್ರೀಯ ವಿತರಣಾ ಪಾಲುದಾರರಾಗಿರುವ ಎಪಿ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವಾಧ್ವಾ ಕೂಡ ವಿಕ್ರಮ್ ಚಿತ್ರದ ಸಾಗರೋತ್ತರ ಕಲೆಕ್ಷನ್ 100 ಕೋಟಿ ರೂ. ದಾಟಿದೆ ಎಂದು ತಿಳಿಸಿದ್ದಾರೆ. ಅಂದರೆ ಕೇವಲ 17 ದಿನಗಳ ಥಿಯೇಟ್ರಿಕಲ್ ರನ್‌ನಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ವಿಕ್ರಮ್ ಚಿತ್ರದ ಕಲೆಕ್ಷನ್ 350 ಕೋಟಿ ದಾಟಿದೆ. ಇನ್ನು ವಾರಾಂತ್ಯದೊಳಗೆ ಚಿತ್ರದ ಒಟ್ಟು ಕಲೆಕ್ಷನ್ 400 ಕೋಟಿಗಳನ್ನು ತಲುಪುವ ವಿಶ್ವಾಸದಲ್ಲಿದ್ದಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ನಟ ಕಮಲ್ ಹಾಸನ್.
ಖೈದಿ, ಮಾಸ್ಟರ್ ಚಿತ್ರಗಳ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಚಿತ್ರದ ಕಥೆಯು ಪ್ರೇಕ್ಷಕರನ್ನು ತುದಿಗಾಲಲ್ಲಿ ಹಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ವಿಕ್ರಮ್ ಚಿತ್ರವು ಕಾಲಿವುಡ್ ಬಾಕ್ಸಾಫೀಸ್ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.