‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವಿನಯ್ ಗೌಡ (Vinay Gowda) ಅವರು ಗಮನ ಸೆಳೆಯುತ್ತಿದ್ದಾರೆ. ಆರಂಭದ ದಿನಗಳಲ್ಲಿ ಅವರು ಸಖತ್ ಅಗ್ರೆಸ್ ಆಗಿ ಆಡುತ್ತಿದ್ದರು. ಪ್ರತಿಯೊಂದಕ್ಕೂ ಕೋಪ ಮಾಡಿಕೊಳ್ಳುತ್ತಿದ್ದರು. ಸಂಗೀತಾ ಜೊತೆ ಅವರು ವೈರುತ್ವ ಬೆಳೆಸಿಕೊಂಡಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಮಧ್ಯೆ ಅವರಿಗೆ ವೀಕೆಂಡ್ ಎಪಿಸೋಡ್ನ ಭಯ ಕಾಡಿದೆ. ಸುದೀಪ್ ಅವರಿಗೆ ಹೇಗೆ ಮುಖ ತೋರಿಸಬೇಕು ಎಂದು ಚಿಂತೆ ಮಾಡಿಕೊಂಡಿದ್ದಾರೆ.
ಪ್ರತಿ ವೀಕೆಂಡ್ನಲ್ಲಿ ಸುದೀಪ್ ಬರುತ್ತಾರೆ. ಮನೆಯವರು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುತ್ತಾರೆ. ಒಂದೊಮ್ಮೆ ತಪ್ಪು ದೊಡ್ಡದಾಗಿದ್ದರೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದನ್ನು ಎದುರಿಸುವುದು ಅಷ್ಟು ಸುಲಭ ಅಲ್ಲ. ಸುದೀಪ್ ಕೇಳುವ ಪ್ರಶ್ನೆಗೆ ಸರಿಯಾಗೆ ಉತ್ತರ ನೀಡಬೇಕು. ಈಗ ವಿನಯ್ಗೆ ಇದೇ ಭಯ ಕಾಡಿದೆ. ಅದಕ್ಕೂ ಒಂದು ಕಾರಣ ಇದೆ.
ಪ್ರತಿ ಬಾರಿ ಲಕ್ಷುರಿ ಬಜೆಟ್ ನೀಡಿದಾಗ ಸ್ಪರ್ಧಿಗಳು ಎಡವುತ್ತಿದ್ದಾರೆ. ಇಡೀ ಸೀಸನ್ನಲ್ಲಿ ಲಕ್ಷುರಿ ಬಜೆಟ್ ಬಂದಿದ್ದು ಕೇವಲ ಒಮ್ಮೆಯೋ ಅಥವಾ ಎರಡು ಬಾರಿಯೋ ಅಷ್ಟೇ. ಇದಕ್ಕೆ ಕಾರಣವೂ ಇದೆ. ಲಕ್ಷುರಿ ಬಜೆಟ್ ಬೇಕು ಎಂದರೆ ಲೆಕ್ಕಾಚಾರ ಸರಿಯಾಗಿ ಮಾಡಬೇಕು. ಅದು ತಪ್ಪಿದರೆ ಬಿಗ್ ಬಾಸ್ ಇದನ್ನು ನೀಡುವುದಿಲ್ಲ. ಎಲ್ಲಾ ವಸ್ತುಗಳನ್ನು ಮನೆ ಕಳೆದುಕೊಳ್ಳುತ್ತದೆ. ಹಲವು ಬಾರಿ ಈ ರೀತಿ ಆಗಿದೆ. ಈ ವಾರವೂ ಅದು ರಿಪೀಟ್ ಆಗಿದೆ.
ಕಾರ್ತಿಕ್ ಅವರು ಲೆಕ್ಕ ಬರೆಯಲು ನಿಂತಿದ್ದರು. ಆದರೆ, ಈ ಲೆಕ್ಕಾಚಾರವನ್ನು ಸರಿಯಾಗಿ ಬರೆದಿಲ್ಲ. ಹೀಗಾಗಿ, ಲಕ್ಷುರಿ ಬಜೆಟ್ ಮಿಸ್ ಆಯಿತು. ಈ ಬಗ್ಗೆ ವಿನಯ್ ಹಾಗೂ ಕಾರ್ತಿಕ್ ಚರ್ಚೆ ಮಾಡಿದ್ದಾರೆ. ‘ಮತ್ತೆ ಲಕ್ಷುರಿ ಬಜೆಟ್ ಕಳೆದುಕೊಂಡೆವು’ ಎಂದು ಕಾರ್ತಿಕ್ ಹೇಳಿದ್ದಾರೆ. ‘ಸುದೀಪ್ ಸರ್ಗೆ ಹೇಗೆ ಮುಖ ತೋರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಅವರು ಈ ಬಾರಿ ಸರಿಯಾಗಿ ಉಗಿಯುತ್ತಾರೆ’ ಎಂದು ವಿನಯ್ ಆತಂಕ ಹೊರ ಹಾಕಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ಮೌನಕ್ಕೆ ಶರಣಾದ ಪ್ರತಾಪ್; ಮೊದಲು ಮಾಡಿದ್ದೇನು?
ಲಕ್ಷುರಿ ಬಜೆಟ್ ಪಡೆಯಲು ಸ್ಪರ್ಧಿಗಳು ಮಾಡುತ್ತಿರುವ ಎಡವಟ್ಟು ನೋಡಿ ಬಿಗ್ ಬಾಸ್ಗೂ ಅಚ್ಚರಿ ಆಗಿದೆ. ‘ನೀವು ಲಕ್ಷುರಿ ಬಜೆಟ್ ಪಡೆಯುತ್ತಿರುವ ರೀತಿ ನೋಡಿ ಈ ಹಿಂದಿನ ಸೀಸನ್ಗಳ ಸ್ಪರ್ಧಿಗಳು ನಗುತ್ತಿದ್ದಾರೆ. ವೀಕ್ಷಕರು ಕೂಡ ಮನೆಯವರು ಲಕ್ಷರಿ ಬಜೆಟ್ನ ಹೇಗೆ ಪಡೆಯುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ’ ಎಂದು ಬಿಗ್ ಬಾಸ್ ಸ್ಪರ್ಧಿಗಳನ್ನು ಟೀಕಿಸಿದರು. ಇದನ್ನು ಕೇಳಿ ಮನೆ ಮಂದಿಗೆ ನಗಬೇಕೋ ಅಥವಾ ಅಳಬೇಕು ಎನ್ನುವುದೇ ತಿಳಿಯಲಿಲ್ಲ. ಕಲರ್ಸ್ ಕನ್ನಡ ಹಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ. ಜನವರಿ 27 ಹಾಗೂ 28ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ