ಚಿತ್ರರಂಗದಲ್ಲಿ ಆಗಾಗ ಡ್ರಗ್ (Drugs) ವಿಚಾರ ಸದ್ದು ಮಾಡುತ್ತಿರುತ್ತದೆ. ಮಾದಕ ದ್ರವ್ಯ ಕೇಸ್ನಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಅರೆಸ್ಟ್ ಆಗಿದ್ದಾರೆ. ಈಗ ಮಲಯಾಳಂ (Mollywood) ಚಿತ್ರರಂಗದಲ್ಲಿ ಮತ್ತೆ ಡ್ರಗ್ ವಿಚಾರ ಸದ್ದು ಮಾಡುತ್ತಿದೆ. ಯುವ ಹೀರೋಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ಶೂಟಿಂಗ್ ಸೆಟ್ ಮೇಲೆ ಕಣ್ಣು ಇಟ್ಟಿದ್ದಾರೆ. ಹಿಗಿರುವಾಗಲೇ ಈ ರೀತಿ ಡ್ರಗ್ಸ್ ತೆಗೆದುಕೊಳ್ಳುವ ನಟರನ್ನು ಅರೆಸ್ಟ್ ಮಾಡುವುದಾಗಿ ಕೊಚ್ಚಿ ಸಿಟಿ ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದ್ದಾರೆ.
‘ಮಾದಕ ದ್ರವ್ಯಗಳನ್ನು ಹೊಂದಿದ್ದರೆ ಅಥವಾ ಅದನ್ನು ಬಳಸುತ್ತಿದ್ದಾಗ ಮಾತ್ರ ಅವರನ್ನು ಬಂಧಿಸಬಹುದು ಎಂಬ ನಿಯಮ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಸಹಾಯಕರು ಡ್ರಗ್ಸ್ ತಲುಪಿಸುತ್ತಾರೆ. ಪೊಲೀಸರು ಈ ಸೆಲೆಬ್ರಿಟಿಗಳನ್ನು ಹಿಂಬಾಲಿಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು’ ಎಂದು ಕೊಚ್ಚಿ ಸಿಟಿ ಪೊಲೀಸ್ ಆಯುಕ್ತ ಸೇತು ರಮಣ್ ಮಾಹಿತಿ ನೀಡಿದ್ದಾರೆ.
‘ಡ್ರಗ್ಸ ಸೇವನೆ ಕಾನೂನು ಬಾಹಿರ. ಹೀಗಾಗಿ ಸಿನಿಮಾ ಸೆಟ್‌ಗಳಲ್ಲಿ ತಪಾಸಣೆ ನಡೆಸಲು ಯಾವುದೇ ಅಡೆತಡೆ ಇಲ್ಲ. ಹೆಸರಾಂತ ಕಲಾವಿದರು ಡ್ರಗ್ಸ್ ಬಳಸಿ ಯಶಸ್ಸನ್ನು ಸಾಧಿಸಿಲ್ಲ. ಕೊಚ್ಚಿಯ ಸಿನಿಮಾ ಸೆಟ್‌ಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರಿಣಾಮವಾಗಿ ಮಾದಕ ದ್ರವ್ಯ ಸೇವನೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Drug Abuse: ಇಬ್ಬರು ಯುವ ಹೀರೋಗಳ ಮೇಲೆ ಡ್ರಗ್ಸ್ ಸೇವನೆ ಆರೋಪ; ಶೂಟಿಂಗ್ ಸ್ಥಳದ ಮೇಲೆ ಪೊಲೀಸರ ಕಣ್ಣು
ಅತ್ಯುತ್ತಮ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೀಡುವಲ್ಲಿ ಮಲಯಾಳಂ ಸಿನಿಮಾರಂಗ ಮುಂಚೂಣಿಯಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಿವುಡ್ ಸಿನಿಮಾಗಳ ಬಗ್ಗೆ ಇಡೀ ದೇಶವೇ ಮಾತನಾಡುತ್ತದೆ. ಆದರೆ ಕೆಲವೇ ಕೆಲವರು ಮಾಡುವ ಕಾನೂನು ಬಾಹಿರ ಕೆಲಸಗಳಿಂದಾಗಿ ಇಡೀ ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಅಂಟಿಕೊಳ್ಳುತ್ತದೆ. ಇತ್ತೀಚೆಗೆ ‘ಕೇರಳ ಸಿನಿಮಾ ನಿರ್ಮಾಪಕರ ಸಂಘ’ ಒಂದು ಆರೋಪ ಮಾಡಿದೆ. ಇಬ್ಬರು ಯುವ ನಟರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇನ್ನುಳಿದ ಕಲಾವಿದರು ಕೂಡ ಇದರಲ್ಲಿ ಭಾಗಿ ಆಗಿರಬರಹುದು ಎಂದು ಸಂಘ ಹೇಳಿತ್ತು. ಈ ಬೆನ್ನಲ್ಲೇ ಕಾರ್ಯಾಚರಣೆ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Wed, 17 May 23