Drug Abuse: ಇಬ್ಬರು ಯುವ ಹೀರೋಗಳ ಮೇಲೆ ಡ್ರಗ್ಸ್ ಸೇವನೆ ಆರೋಪ; ಶೂಟಿಂಗ್ ಸ್ಥಳದ ಮೇಲೆ ಪೊಲೀಸರ ಕಣ್ಣು
Malayalam Actor Drugs Case: ಡ್ರಗ್ಸ್ ಸೇವಿಸುತ್ತಾರೆ ಎನ್ನಲಾದ ಆ ಇಬ್ಬರು ಯುವ ನಟರು ಚಿತ್ರೀಕರಣದ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪ ಇದೆ. ಅಲ್ಲದೇ ನಿರ್ಮಾಪಕರ ಜೊತೆಗಿನ ಒಪ್ಪಂದಕ್ಕೂ ಬದ್ಧರಾಗಿ ಇರುವುದಿಲ್ಲ ಎನ್ನಲಾಗಿದೆ.
ಚಿತ್ರರಂಗಕ್ಕೂ ಡ್ರಗ್ಸ್ ವಿವಾದಕ್ಕೂ ಹತ್ತಿರದ ನಂಟು. ಬಹುತೇಕ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾದ ಉದಾಹರಣೆ ಇದೆ. ಅನೇಕ ಸೆಲೆಬ್ರಿಟಿಗಳು ಡ್ರಗ್ಸ್ ಸೇವನೆ (Drug Abuse) ಆರೋಪದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಇಷ್ಟಾದರೂ ಇದರ ಹಾವಳಿ ನಿಂತಿಲ್ಲ. ಆಗೊಮ್ಮೆ ಈಗೊಮ್ಮೆ ನಶೆಯ ವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತದೆ. ಅಚ್ಚರಿ ಎಂದರೆ ಮಲಯಾಳಂ ಚಿತ್ರರಂಗದಲ್ಲಿ (Malayalam Film Industry) ಈಗ ಡ್ರಗ್ಸ್ ಹಾವಳಿ ಶುರುವಾದಂತಿದೆ. ಇಬ್ಬರು ಯುವ ಹೀರೋಗಳು ಮಾದಕ ವಸ್ತುವಿನ ದಾಸರಾಗಿದ್ದಾರೆ. ಸದ್ಯಕ್ಕೆ ಅವರ ಹೆಸರು ಬಹಿರಂಗ ಆಗಿಲ್ಲ. ಆದರೆ ಮಲಯಾಳಂ ಚಿತ್ರರಂಗದ ನಿರ್ಮಾಪಕರು ಮತ್ತು ತಂತ್ರಜ್ಞರು ಆ ನಟರಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ ಕೇರಳ ಪೊಲೀಸರು (Kerala Police) ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ಇನ್ಮುಂದೆ ಪೊಲೀಸರು ತಪಾಸಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಅತ್ಯುತ್ತಮ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೀಡುವಲ್ಲಿ ಮಲಯಾಳಂ ಸಿನಿಮಾರಂಗ ಮುಂಚೂಣಿಯಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಿವುಡ್ ಸಿನಿಮಾಗಳ ಬಗ್ಗೆ ಇಡೀ ದೇಶವೇ ಮಾತನಾಡುತ್ತದೆ. ಆದರೆ ಕೆಲವೇ ಕೆಲವರು ಮಾಡುವ ಕಾನೂನು ಬಾಹಿರ ಕೆಲಸಗಳಿಂದಾಗಿ ಇಡೀ ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಅಂಟಿಕೊಳ್ಳುತ್ತದೆ. ಇತ್ತೀಚೆಗೆ ‘ಕೇರಳ ಸಿನಿಮಾ ನಿರ್ಮಾಪಕರ ಸಂಘ’ ಒಂದು ಆರೋಪ ಮಾಡಿದೆ. ಇಬ್ಬರು ಯುವ ನಟರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇನ್ನುಳಿದ ಕಲಾವಿದರು ಕೂಡ ಇದರಲ್ಲಿ ಭಾಗಿ ಆಗಿರಬರಹುದು ಎಂದು ಸಂಘ ಹೇಳಿತ್ತು.
ಇದನ್ನೂ ಓದಿ: ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್
ಡ್ರಗ್ಸ್ ಸೇವಿಸುತ್ತಾರೆ ಎನ್ನಲಾದ ಆ ಇಬ್ಬರು ಯುವ ನಟರು ಚಿತ್ರೀಕರಣದ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪ ಇದೆ. ಅಲ್ಲದೇ ನಿರ್ಮಾಪಕರ ಜೊತೆಗೆ ಮಾಡಿಕೊಂಡ ಒಪ್ಪಂದಕ್ಕೂ ಬದ್ಧರಾಗಿ ಇರುವುದಿಲ್ಲ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಜಿ. ಸುರೇಶ್ ಕುಮಾರ್ ಅವರು ಇತ್ತೀಚೆಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಇಂಥ ನಟರಿಂದಾಗಿ ಮಲಯಾಳಂ ಚಿತ್ರರಂಗ ಹಾಳಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆ ಅರೆಸ್ಟ್
ಇಷ್ಟೆಲ್ಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಶೂಟಿಂಗ್ ನಡೆಯುವ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಲಿದ್ದಾರೆ. ಈ ಇಬ್ಬರು ನಟರು ಯಾರು ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ. ಅದರ ಜೊತೆಗೆ ಇನ್ನುಳಿದ ಕಲಾವಿದರ ಹೆಸರು ಕೂಡ ಹೊರಬರುವ ಸಾಧ್ಯತೆ ಇದೆ. ಈ ಹಿಂದೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಡ್ರಗ್ಸ್ ಕೇಸ್ನಲ್ಲಿ ಪೊಲೀಸರ ತನಿಖೆಗೆ ಒಳಗಾಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.